ಪುರಾಣಿಕರ ಕಾದಂಬರಿಗಳು ಇಂದಿಗೂ ಪ್ರಸ್ತುತ: ಡಾ. ಮರಾಠೆ

ಪುರಾಣಿಕರ ಕಾದಂಬರಿಗಳು ಇಂದಿಗೂ ಪ್ರಸ್ತುತ: ಡಾ. ಮರಾಠೆ  The novels of Puranik are still relevant today: Dr. Marathe

ಬೆಳಗಾವಿ 21- ರಂಗಸಂಪದದ ಅಂಗ ಸಂಸ್ಥೆಯಾದ "ಸಮಾಸ" (ಸಮಾನ ಮನಸ್ಕರ ಮಾಸಿಕ ಸಮ್ಮಿಲನ) ತನ್ನ ಮೂರನೆಯ ತಿಂಗಳ ಕಾರ್ಯಕ್ರಮವಾಗಿ ಕೃಷ್ಣಮೂರ್ತಿ ಪುರಾಣಿಕರ ಮಣ್ಣಿನ ಮಗಳು ಮತ್ತು ಹಬ್ಬಿದ ಬಳ್ಳಿ ಈ ಎರಡು ಕಾದಂಬರಿಗಳ ಅವಲೋಕನವನ್ನು ಖ್ಯಾತ ಉದ್ಯಮಿ ಶ್ರೀ ಮಧ್ವರಾಜ ಆಯಿ ಅವರ ನಿವಾಸದಲ್ಲಿ ಏರಿ​‍್ಡಸಿತ್ತು .  

ಪ್ರಮುಖ ಮಾತುಗಾರರಾಗಿ ಆಗಮಿಸಿದ್ದ ಡಾ. ರಾಮಕೃಷ್ಣ ಮರಾಠೆ ಅವರು ಈ ಎರಡೂ ಕಾದಂಬರಿಗಳ ಕುರಿತು ಮಾತನಾಡಿ ಎಪ್ಪತ್ತು ವರ್ಷಗಳ ಹಿಂದೆಯೇ ಪುರಾಣಿಕರು ಉಳುವವನೇ ಭೂಮಿಯ ಒಡೆಯನೆಂಬ ವಿಚಾರವನ್ನು ತಮ್ಮ ಮಣ್ಣಿನ ಮಗಳು ಕಾದಂಬರಿಯಲ್ಲಿ ಪ್ರಸ್ತಾಪಿಸಿರುವುದು ಗಮನಾರ್ಹ. ಅವರ ಕಾದಂಬರಿಗಳು ಕೇವಲ ಕೌಟುಂಬಿಕ ವಲಯಕ್ಕೆ ಸೀಮಿತವಾದವುಗಳಲ್ಲ. ಅವು ಸಾರ್ವಕಾಲಿಕ ಸಾಮಾಜಿಕ ಮೌಲ್ಯಗಳನ್ನು ಹೊಂದಿ ಇಂದಿಗೂ ಪ್ರಸ್ತುತವಾಗಿವೆ ಎಂದರು.  ಕಾದಂಬರಿಕಾರ ದಿ. ಕೃಷ್ಣಮೂರ್ತಿ ಪುರಾಣಿಕರ ಪುತ್ರರಾದ ಆನಂದ ಪುರಾಣಿಕರು ತಮ್ಮ ತಂದೆಯವರು ಓದುಗರ ಮೇಲೆ ಬೀರಿದ ಪ್ರಭಾವದ ಕುರಿತು ಮಾತನಾಡಿದರು.   

"ಹಬ್ಬಿದ ಬಳ್ಳಿ" ಮತ್ತು "ಮಣ್ಣಿನ ಮಗಳು" ಕಾದಂಬರಿಗಳ ಕುರಿತು ಶ್ವೇತಾ ನರಗುಂದ, ವಿನುತಾ ಗೆಜ್ಜಿ, ಸುಜಾತಾ ವೆರ್ಣೆಕರ, ಗೀತಾ ಮಡಿವಾಳರ, ಭಾರತಿ ವಡವಿ ಓದುಗರಾಗಿ ತಮ್ಮ ಅನಿಸಿಕೆಗಳನ್ನು ಮಂಡಿಸಿದರು.   

ಎಲ್‌. ಎಸ್‌. ಶಾಸ್ತ್ರಿ ಸಮಾರೋಪ ಮಾತುಗಳನ್ನಾಡಿ ಪುರಾಣಿಕರ ಎಂಬತ್ತು ಕಾದಂಬರಿಗಳ ಒಟ್ಟಾರೆ ಸ್ವರೂಪ, ವೈಶಿಷ್ಟ್ಯ , ಮಹತ್ವಗಳನ್ನು ತಿಳಿಸಿದರು. ಶ್ರೀ ಮಧ್ವರಾಜ ಆಯಿ ಸ್ವಾಗತಿಸಿದರು. ಪ್ರಸಾದ ಕಾರಜೋಳ ವಂದಿಸಿದರು. ಅರವಿಂದ ಕುಲಕರ್ಣಿಯವರು ನಿರೂಪಿಸಿದರು. ಸಮಾಸದ ನಾಲ್ಕನೆಯ ತಿಂಗಳ ಕಾರ್ಯಕ್ರಮವನ್ನು ಅಕ್ಟೋಬರ್ 26 ರಂದು ನಡೆಸಲು ಮತ್ತು ತರಾಸು ಅವರ ದುರ್ಗಾಸ್ತಮಾನ ಐತಿಹಾಸಿಕ ಕಾದಂಬರಿಯ ಕುರಿತು ಅವಲೋಕನ ನಡೆಸಲು ಸಭೆ ನಿರ್ಧರಿಸಿತು.