ಉತ್ತರ ಬುರ್ಕಾನಾ ಫಾಸೋದಲ್ಲಿ 30 ಶಂಕಿತ ಭಯೋತ್ಪಾದಕರ ಹತ್ಯೆ

ಔಗಡೌಗು, ಅಕ್ಟೋಬರ್ 9:   ದೇಶದ ಉತ್ತರ ಸಾಹೇಲಿಯನ್ ಪ್ರದೇಶದ ಗೋರ್ಗಡ್ಜಿ ಪ್ರದೇಶದಲ್ಲಿ ಬುರ್ಕಾನಾ ಫಾಸೊದ ಸಶಸ್ತ್ರ ಪಡೆಗಳು ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 30 ಮಂದಿ ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ ಎಂದು ರಾಷ್ಟ್ರೀಯ ದೂರದರ್ಶನ ಆರ್ಟಿಬಿ ಮಂಗಳವಾರ ವರದಿ ಮಾಡಿದೆ. ಭಯೋತ್ಪಾದಕ-ದಾಳಿಯಿಂದ ಹಾನಿಗೊಳಗಾದ ದೇಶದ ಉತ್ತರ ಭಾಗದಲ್ಲಿ ನಡೆದ ಈ ಕಾರ್ಯಾಚರಣೆಯ ವೇಳೆ ಹಲವು ಸೈನಿಕರು ಕೂಡ ಗಾಯಗೊಂಡಿದ್ದಾರೆ ಎಂದು ಆರ್ಟಿಬಿ ತಿಳಿಸಿದೆ. 2015 ರಿಂದಲೂ ಬುರ್ಕಾನಾ ಫಾಸೊ ಭಯೋತ್ಪಾದಕ ದಾಳಿಗೆ ತುತ್ತಾಗಿದೆ. ಇದರಲ್ಲಿ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 9,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಂತೆ 2,80,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ದೇಶವು ಭಯೋತ್ಪಾದಕ ದಾಳಿಯ ಪ್ರಮಾಣ ಹೆಚ್ಚಾಗಿದೆ. ಇದರಿಂದ ಈ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗಾಗಿ ತಮ್ಮ ಮನೆಯನ್ನು ತೊರೆದು ಬೇರೆ ಕಡೆಗಳಿಗೆ ವಲಸೆ ಹೋಗುತ್ತಿದ್ದಾರೆ. ಭಯೋತ್ಪಾದನೆಯನ್ನು ನಿಗ್ರಹಿಸಲು, ಅನೇಕ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಅಥವಾ ಕಫ್ಯರ್ೂ ಘೋಷಿಸಲಾಗಿದೆ. ಸೈನ್ಯವು ರಾಷ್ಟ್ರವ್ಯಾಪಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಹೆಚ್ಚಿಸಿದೆ. ಆದರೆ, ದೇಶದ ಉತ್ತರ ಲೋರಂ ಪ್ರಾಂತ್ಯದ ಟೈಟಾವೊ ಗ್ರಾಮದಲ್ಲಿ ಅಪರಿಚಿತ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಸೋಮವಾರ ಸಂಜೆ ಕನಿಷ್ಠ ಎಂಟು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.     ಸೆಪ್ಟೆಂಬರ್ 28-29 ರಂದು, ಮಧ್ಯ-ಉತ್ತರ ಬುರ್ಕಾನಾ ಫಾಸೊದ ಜಿಮ್ಟೆಂಗಾ ಮತ್ತು ಬೌರ್ಜಂಗಾ ಪುರಸಭೆಗಳ ಗ್ರಾಮಗಳಲ್ಲಿ ಸುಮಾರು 20 ಜನರು ಸಾವನ್ನಪ್ಪಿದರು.