ನಗರಸಭೆ ಸ್ವಚ್ಛತಾ ವಾಹನ ನಿಲ್ದಾಣವೇ ಕಸದ ಗೂಡಾಗಿ ಪರಿವರ್ತನೆ

ನಗರಸಭೆ ಸ್ವಚ್ಛತಾ ವಾಹನ ನಿಲ್ದಾಣವೇ ಕಸದ ಗೂಡಾಗಿ ಪರಿವರ್ತನೆ The municipal sanitation bus station has been turned into a garbage dump

ಕೊಪ್ಪಳ  07: ನಗರ ಸ್ವಚ್ಛತೆ ಕಾಪಾಡಬೇಕಾದ ಸ್ಥಳವೇ ಇಂದು ಅಸ್ವಚ್ಛತೆಯ ಕೇಂದ್ರವಾಗಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಪಾನಘಂಟಿ  ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಅಗಡಿ ಲೇಓಟ್  ನಲ್ಲಿ ನಗರಸಭೆಯ ಸ್ವಚ್ಛತಾ ವಾಹನ ನಿಲ್ದಾಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ರಾಶಿ, ಮುಳ್ಳಿನ ಗಿಡಗಳು ಹಾಗೂ ತುಂಬಿ ಹರಿಯುತ್ತಿರುವ ಗಟಾರಗಳಿಂದ ಪರಿಸರ ದುರ್ವಾಸನೆ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಈ ಪ್ರದೇಶದಲ್ಲಿ ದೀರ್ಘಕಾಲದಿಂದ ಸ್ವಚ್ಛತಾ ಕಾರ್ಯ ನಡೆಯದೇ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಹಾವುಗಳ ಸಂಚಾರವೂ ಹೆಚ್ಚಾಗಿದೆ ಎನ್ನಲಾಗಿದೆ.

ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದು, ಆರೋಗ್ಯ ಸಮಸ್ಯೆಗಳ ಆತಂಕ ಎದುರಿಸುತ್ತಿದ್ದಾರೆ.ಸ್ಥಳೀಯ ಸಾರ್ವಜನಿಕರು ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನ ತೋರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಗರವನ್ನು ಸ್ವಚ್ಛವಾಗಿಡಬೇಕಾದ ನಗರಸಭೆಯೇ ತನ್ನ ವಾಹನ ನಿಲ್ದಾಣವನ್ನು ಸ್ವಚ್ಛವಾಗಿಡಲು ವಿಫಲವಾಗಿದೆ. ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಂಡು ಗಟಾರ ತೆರವು, ಕಸದ ವಿಲೇವಾರಿ ಹಾಗೂ ಮುಳ್ಳಿನ ಗಿಡಗಳ ತೆರವು ಮಾಡಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.