ಗ್ರಾಮ ದೇವತೆಗಳ ಸನ್ನಿಧಿಯಲ್ಲಿ ಭಕ್ತರ ಸಡಗರ :ದೇವಿಯರಿಗೆ ಭಕ್ತಿಯ ಉಡಿ ಸೇವೆ ಆರಂಭ
Devotees throng in the presence of village deities: Devotional service to the goddesses begins
ಸವದತ್ತಿ 07: ನಗರದ ಆರಾಧ್ಯ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಾವ್ವ ದೇವಿಯರ ಜಾತ್ರಾ ಮಹೋತ್ಸವದ ನಾಲ್ಕನೇ ದಿನವೂ ಭಕ್ತಿಯ ಪರಾಕಾಷ್ಠೆ ಮುಂದುವರಿದಿದೆ. ತಾಲೂಕಿನ ನಾನಾ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು, ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿ, ಅತ್ಯಂತ ಭಕ್ತಿಭಾವದಿಂದ ಉಡಿ ತುಂಬುವ ಸೇವೆಯನ್ನು ನೆರವೇರಿಸಿದರು.
ಊರಿನ ಮುಖಂಡರು, ರೈತರು ಹಾಗೂ ಎಲ್ಲಾ ಪಕ್ಷದ ಮುಖಂಡರು ಪಕ್ಷಾತೀತವಾಗಿ ಪಾಲ್ಗೊಂಡು ಜಾತ್ರೆಯ ಮೆರುಗನ್ನು ಹೆಚ್ಚಿಸಿದರು. ಬೆಳಗಿನ ಜಾವದಿಂದಲೇ ಅರಮನೆ ಮಂಟಪಕ್ಕೆ ಭಕ್ತರ ದಂಡು ಹರಿದುಬಂದಿತ್ತು.
ದೇವಿಯರಿಗೆ ಪ್ರಿಯವಾದ ಹಸಿರು ಸೀರೆ, ಹಸಿರು ಬಳೆಗಳು, ಬಾಳೆಹಣ್ಣು ಹಾಗೂ ಅರಿಶಿನದ ಬೇರುಗಳೊಂದಿಗೆ ಮಹಿಳೆಯರು ಹರಕೆ ತೀರಿಸಿದರು. ಕುಟುಂಬದ ಆರೋಗ್ಯ ವೃದ್ಧಿ ಹಾಗೂ ಈ ಬಾರಿ ಉತ್ತಮ ಮಳೆಯಾಗಿ ರೈತರ ಹೊಲಗಳಲ್ಲಿ ಬೆಳೆ ಸಮೃದ್ಧಿಯಾಗಲಿ ಎಂದು ಭಕ್ತಾದಿಗಳು ತಾಯಿಯಲ್ಲಿ ಮೊರೆಯಿಟ್ಟರು. ಅರಮನೆ ಮಂಟಪದ ಆವರಣದಲ್ಲಿ ಭಕ್ತರು ಉದೋ ಉದೋ ಎಂಬ ಹರ್ಷೋದ್ಗಾರಗಳೊಂದಿಗೆ ಭಂಡಾರ ಎರಚುತ್ತಾ ಸಂಭ್ರಮಿಸಿದರು.
ನಗರದ ಮಹಿಳೆಯರು ಮುಂಜಾನೆಯೇ ಮನೆ ಹೊಸ್ತಿಲುಗಳನ್ನು ತೊಳೆದು, ರಂಗೋಲಿ ಇಟ್ಟು ಸಾಂಪ್ರದಾಯಿಕವಾಗಿ ದೇವಿಯ ಸೇವೆಗೆ ಸಜ್ಜಾಗಿದ್ದರು. ಗಡೇಕಾರ ಪ್ಲಾಟ್ನಲ್ಲಿ ಮಕ್ಕಳು ಜೋಕಾಲಿ ಆಡುತ್ತಾ ಜಾತ್ರೆಯ ಕಳೆಯನ್ನು ಹೆಚ್ಚಿಸಿದರು. ಗ್ರಾಮದೇವಿ ಜಾತ್ರಾ ಕಮಿಟಿಯ ವತಿಯಿಂದ ಗಡೇಕಾರ ಪ್ಲಾಟ್ ಹಾಗೂ ಎಪಿಎಂಸಿ ಆವರಣದಲ್ಲಿ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದರಿಂದ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಸಂಚಾರಕ್ಕೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು ಕೂಡ ಅಮ್ಮನ ದರ್ಶನ ಪಡೆದು ಪುನೀತರಾದರು. ಒಟ್ಟಾರೆಯಾಗಿ, ತಾಲೂಕಿನ ವಿವಿಧ ಹಳ್ಳಿಗಳಿಂದ ಹರಿದುಬಂದ ಭಕ್ತ ಸಾಗರದಿಂದಾಗಿ ಇಡೀ ಸವದತ್ತಿ ಪಟ್ಟಣವು ಭಕ್ತಿಯ ಪರವಶದಲ್ಲಿ ಮುಳುಗಿತ್ತು.
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 