ಶಿಕ್ಷಕರ ದಿನದಂದು ಡಾ. ರಾಧಾಕೃಷ್ಣನ್ ಅವರನ್ನು ನೆನಪಿಸಿಕೊಳ್ಳುತ್ತೇವೆ. ಹಾಗೆಯೇ ನಾವು ನಮ್ಮ ಕರ್ನಾಟಕದ ಆದರ್ಶ ಶಿಕ್ಷಕರನ್ನೂ ನೆನಪಿಸಿಕೊಂಡು ಗೌರವ ಸಲ್ಲಿಸುವದಾದರೆ ಅಂಥವರಲ್ಲಿ ನಾಡಿನ ಖ್ಯಾತ ಕಾದಂಬರಿಕಾರರಾದ ಕೃಷ್ಣಮೂರ್ತಿ ಪುರಾಣಿಕ ಅವರನ್ನೂ ನೆನಪಿಸಿಕೊಳ್ಳಬೇಕಾಗುತ್ತದೆ. ಅವರು ಹುಟ್ಟಿದ್ದೂ ಇದೇ - ಸೆಪ್ಟೆಂಬರ್ 5 ರಂದು. ಶಿಕ್ಷಕ ವೃತ್ತಿಯ ಘನತೆ, ಗೌರವ, ಪಾವಿತ್ರ್ಯಗಳನ್ನು ಕಾಪಾಡುವಂತೆ ಬದುಕಿದ ಪುರಾಣಿಕರು ಜನಿಸಿ ಈಗ 111 ವರ್ಷ.
ಅದೃಷ್ಟವಶಾತ್ ನನಗೆ ಪುರಾಣಿಕರೊಂದಿಗೆ ಆತ್ಮೀಯ ಒಡನಾಟವಿತ್ತು. ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಪ್ರೀತಿಯ ಸವಿ ಉಂಡಿದ್ದೇನೆ. ಅವರೊಡನೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಒಬ್ಬ ಆದರ್ಶ ವ್ಯಕ್ತಿ,ಯಾಗಿ, ಆದರ್ಶ ಸಾಹಿತಿಯಾಗಿ, ಆದರ್ಶ ಶಿಕ್ಷಕರಾಗಿ ಅವರು ಸಾರ್ಥಕ ಬದುಕು ನಡೆಸಿದವರು.
ಬೀಳಗಿಯಲ್ಲಿ ಆದರ್ಶ ಶಾಲಾ ಶಿಕ್ಷಕರಾದ ತಮ್ಮಣ್ಣ ಮಾಸ್ತರರ ಮಗನಾಗಿ ಜನಿಸಿದ ಪುರಾಣಿಕರು ತಮ್ಮ ಪೂರ್ಣ ವೃತ್ತಿ ಬದುಕನ್ನು ಕಳೆದದ್ದು ಗೋಕಾಕದಲ್ಲಿ. ಗೋಕಾಕದ ಮುನಸಿಪಲ್ ಹೈಸ್ಕೂಲಿನಲ್ಲಿ ಕಲಿಸುವ ಕೆಲಸ ಮಾಡುತ್ತಲೇ 115 ಕೃತಿ ರಚಿಸಿದರು. ಅದೇ ಹೈಸ್ಕೂಲಿನಲ್ಲಿ ಅವರು ಮುಖ್ಯಾಧ್ಯಾಪಕರಾಗುವದನ್ನು ಕೆಲವರು ತಪ್ಪಿಸಿ ಅವರಿಗೆ ಅನ್ಯಾಯ ಮಾಡಿದರು. ನಾಡಿನಾದ್ಯಂತ ಜನಪ್ರಿಯರಾಗಿದ್ದ ಅವರು ಮುಖ್ಯಾಧ್ಯಾಪಕರಾಗಿದ್ದರೆ ಅದರಿಂದ ಗೋಕಾಕ ಜನರಿಗೇ ಹೆಮ್ಮೆ ಪಡುವ ಅವಕಾಶವಿತ್ತು.
ಪುರಾಣಿಕರು ಕನ್ನಡಿಗರ ಮೆಚ್ಚಿನ ಕಾದಂಬರಿಕಾರರು. ಓದುವ ಅಭಿರುಚಿ ಹುಟ್ಟಿಸಿದವರು. ಬದುಕಿನಿಂದಲೂ ಬರೆಹದಿಂದಲೂ ಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿಸಿದವರು. ಅವರನ್ನು ಶಿಕ್ಷಕರಾದವರು ಇಂದು ಸ್ಮರಿಸಿ ಅವರ ಜೀವನಾದರ್ಶಗಳನ್ನು ಅನುಸರಿಸಬೇಕು.
- * * * -