ಬೀದಿಗೆ ಬಂದ ಹಮಾಲಿಗಳ ಬದುಕು

ಸದಾನಂದ ಮಜತಿ ಬೆಳಗಾವಿ: ಎಪಿಎಂಸಿ ಪ್ರಾಂಗಣಕ್ಕೆ ತರಕಾರಿ ಮಾರುಕಟ್ಟೆ ಸ್ಥಳಾಂತರಗೊಂಡ ಬಳಿಕ ಮಾರುಕಟ್ಟೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಹಲವಾರು ಅಂಗಡಿ-ಮುಂಗಟ್ಟು, ಡಬ್ಬಾ ಅಂಗಡಿ ಹಾಗೂ ತಳ್ಳುಗಾಡಿ ಹಮಾಲಿಗಳು ಸೇರಿದಂತೆ ನೂರಾರ ಜನರ ಜೀವನ ಹಳಿತಪ್ಪಿದೆ. ದಂಡುಮಂಡಳಿ ಪ್ರದೇಶದಿಂದ ಮಾರುಕಟ್ಟೆ ಸ್ಥಳಾಂತರದಿಂದ ಹೆಚ್ಚು ತೊಂದರೆಗೊಳಗಾದವರು ತಳ್ಳುಗಾಡಿ ಹಮಾಲಿಗಳು. ಗ್ರಾಮೀಣ ಭಾಗದಿಂದ ಕೆಲವು ರೈತರು ಬಸ್ ಹಾಗೂ ಟೆಂಪೋಗಳಲ್ಲಿ ತರಕಾರಿ ಮೂಟೆ ಹೇರಿಕೊಂಡು ಬರುತ್ತಿದ್ದರು. ಬಸ್ನವರು ಕಿಲ್ಲಾ ಕೆರೆ ಬಳಿ, ಟೆಂಪೋದವರು ಪ್ರವಾಸಿ ಮಂದಿರ ಬಳಿ ಈ ತರಕಾರಿ ಮೂಟೆ ಇಳಿಸುತ್ತಿದ್ದರು. ಅಲ್ಲಿಂದ ಹಮಾಲಿಗಳು ತಳ್ಳು ಗಾಡಿಯ ಮೇಲೆ ತರಕಾರಿ ಮೂಟೆ ಹೇರಿಕೊಂಡು ಮಾರುಕಟ್ಟೆಗೆ ಸಾಗಿಸುತ್ತಿದ್ದರು. ಅಲ್ಲದೆ, ತರಕಾರಿ ಖರೀದಿಸಿದ ಚಿಲ್ಲರೆ ವ್ಯಾಪಾರಿಗಳು ರವಿವಾರ ಪೇಟೆ ಸೇರಿ ನಗರದೊಳಗಿರುವ ಮಾರುಕಟ್ಟೆಗೆ ಸಾಗಿಸಲು ಈ ತಳ್ಳು ಗಾಡಿಗಳನ್ನೇ ಅವಲಂಬಿಸಿದ್ದರು. ಇದರಿಂದ ಸುಮಾರು 15-20 ಹಮಾಲಿಗಳು ಪ್ರತಿನಿತ್ಯ 200 ರಿಂದ 300 ರೂಪಾಯಿ ದುಡಿದು ಸಂಸಾರದ ಬಂಡಿ ಸಾಗಿಸುತ್ತಿದ್ದರು. ಆದರೆ, ದಂಡುಮಂಡಳಿ ಪ್ರದೇಶದಲ್ಲಿ ತರಕಾರಿ ಮಾರುಕಟ್ಟೆ ಬಂದ್ ಆದ ಬಳಿಕ ಇವರು ಈಗ ನಿರಾಶ್ರಿತರಾಗಿದ್ದಾರೆ. ಬೇರೆ ವೃತ್ತಿ ಗೊತ್ತಿಲ್ಲದೆ, ಶ್ರಮ ಆಧಾರಿತ ವೃತ್ತಿಯನ್ನೇ ನಂಬಿದ್ದ ಇವರ ಬದುಕು ಬೀದಿಗೆ ಬಂದಿದೆ. ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಂಗಡಿಗಳು ದಂಡುಮಂಡಳಿ ಪ್ರದೇಶದಲ್ಲಿದ್ದ ಹಳೇ ಭಾಜಿ ಮಾರುಕಟ್ಟೆ ಆಸುಪಾಸಿನಲ್ಲಿ ಇದಕ್ಕೆ ಪೂರಕವಾಗಿ ತಲೆ ಎತ್ತಿದ್ದ ಅಂಗಡಿ-ಮುಂಗಟ್ಟುಗಳು, ಗೂಡಂಗಡಿಗಳ ವ್ಯಾಪಾರದ ಮೇಲೂ ಕರಿಛಾಯೆ ಆವರಿಸಿದ್ದು, ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಮುಂಚೆ ಪ್ರತಿನಿತ್ಯ ಸಾವಿವಾರು ರೈತರು ತರಕಾರಿ ತೆಗೆದುಕೊಂಡು ಮಾರುಕಟ್ಟೆಗೆ ಬರುತ್ತಿದ್ದರು. ಅಲ್ಲದೆ, ವ್ಯಾಪಾರಸ್ಥರು, ಹಮಾಲರು, ಚಿಲ್ಲರೆ ವ್ಯಾಪಾರಸ್ಥರು, ವಾಹನ ಚಾಲಕರು ಸೇರಿ ನಿತ್ಯ 20 ಸಾವಿರಕ್ಕೂ ಅಧಿಕ ಜನರು ಈ ಪ್ರದೇಶದಲ್ಲಿ ಸೇರುತ್ತಿದ್ದರು. ಇದಕ್ಕೆ ಪೂರಕವಾಗಿ ಮಾರುಕಟ್ಟೆ ಅಕ್ಕಪಕ್ಕ ಹಾಗೂ ರಸ್ತೆ ಬದಿಯಲ್ಲಿ ಅನೇಕ ಅಂಗಡಿಗಳು ವ್ಯವಹಾರ ನಡೆಸಿ ಪ್ರತಿನಿತ್ಯ ಸಹಸ್ರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಕೀಟನಾಶಕ, ಬೀಜ ಮಾರಾಟ ಅಂಗಡಿಗಳು, ಚಹಾ, ಉಪಾಹಾರದ ಗೂಡಂಗಡಿಗಳು, ಕೃಷಿಗೆ ಪೂರಕವಾದ ಇನ್ನಿತರ ಅಂಗಡಿಗಳು ಈಗ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಕುಟುಂಬಕ್ಕೆ ಆಧಾರವಾಗಿದ್ದ ವ್ಯಾಪಾರ ಕಳೆದುಕೊಂಡು ಅನೇಕರು ಮಾಡಲು ಬೇರೆ ಉದ್ಯೋಗವಿಲ್ಲದೆ ಹಳೆಯ ವೈಭವದ ದಿನಗಳನ್ನು ನೆನೆಯುತ್ತ ಕಣ್ಣೀರು ಹಾಕುತ್ತಿದ್ದಾರೆ. ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ಹಳೇ ತರಕಾರಿ ಮಾರುಕಟ್ಟೆ ಪ್ರದೇಶ ಈಗ ಜನರಿಲ್ಲದೆ ಹಾಳು ಕೊಂಪೆಯಂತೆ ಗೋಚವಾಗುತ್ತಿದೆ. ಕೊಡಲು ಪುರುಷೊತ್ತು ಇಲ್ಲದಂತಹ ಸ್ಥಿತಿಯಲ್ಲಿದ್ದ ಅಂಗಡಿ-ಮುಂಗಟ್ಟುಗಳೀಗ ಗ್ರಾಹಕರಿಲ್ಲದೆ ಭಣಗುಡುತ್ತಿವೆ. ಪ್ರತಿನಿತ್ಯ ಸಾವಿರಾರು ರೂಪಾಯಿ ವ್ಯವಹಾರ ನಡೆಸುತ್ತಿದ್ದ ಅಂಗಡಿಗಳ ಮಾಲೀಕರು ಬೆಳಗ್ಗೆಯಿಂದ ಸಂಜೆಯವರೆಗೆ ಬಾಗಿಲು ತೆರೆದುಕೊಂಡು ಕುಳಿತರೂ ಸಾವಿರ ರೂಪಾಯಿ ವ್ಯಾಪಾರ ಆಗುತ್ತಿಲ್ಲ.