ಧಾರವಾಡ 12: ದಂತವು ಮನುಷ್ಯನ ಬಹು ಮುಖ್ಯವಾದ ಅಂಗವಾಗಿದ್ದು ಅದನ್ನು ರಕ್ಷಣೆ ಮಾಡಿಕೊಳ್ಳುವುದು ಬಹಳ ಮಹತ್ವದ್ದಾಗಿದೆ ಎಂದು ಎಸ್.ಡಿ.ಎಂ ದಂತ ಮಹಾವಿದ್ಯಾಲಯದ ದಂತ ವೈದ್ಯರಾದ ಡಾ. ಶೋಧನ ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಆಫ್ ಸೆವನ್ ಹಿಲ್ಸ ವತಿಯಿಂದ ಶಹರದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಆಯೋಜಿಸಿದ ಉಚಿತ ದಂತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹೆಚ್ಚು ಸಿಹಿ ಹಾಗೂ ಅಂಟಿನ ಪದಾರ್ಥಗಳ ಬಳಕೆಯಿಂದಾಗಿ ದಂತಕ್ಷಯ ಉಂಟಾಗುತ್ತದೆ. ಸಿಹಿ ತಿಂದ ಮೇಲೆ ದಂತ ಉಜ್ಜಬೇಕು ಅಂದರೆ ಮಾತ್ರ ದಂತಕ್ಷಯದಿದ ದೂರವಿರಬಹುದು ಅದರಲ್ಲೂ ವಿಶೇಷವಾಗಿ ಮಕ್ಕಳು ಚಾಕಲೇಟ ಸೇವಿಸುವುದರಿಂದ ದಂತದ ಹುಳುಕು ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.
ಪ್ರತಿಯೊಬ್ಬರು ನಿತ್ಯ ಎರಡು ಬಾರಿ ದಂತ ಉಜ್ಜಬೇಕು ರಾತ್ರಿ ಮಲಗುವ ಮುನ್ನ ದಂತವನ್ನು ಸ್ವಚ್ಚಗೊಳಿಸಿ ಮಲಗುವುದು ಸೂಕ್ತ. ಕನೀಷ್ಠ ಮೂರು ತಿಂಗಳಿಗೊಮ್ಮೆ ದಂತ ಉಜ್ಜುವ ಬ್ರಶ್ ಬದಲಾವಣೆ ಮಾಡಬೇಕು ಹಾಗೂ ದಂತ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಂಡರೆ ದಂತ ರಕ್ಷಣೆಯಾಗುತ್ತದೆ. ದಂತಕ್ಷಯವನ್ನು ತಡೆಯಲು ವೈದ್ಯರ ಸಲಹೆ ಪಡೆದುಕೊಂಡು ದಂತ ರಕ್ಷಣೆ ಮಾಡಿಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.
ರೋಟರಿ ಕ್ಲಬ್ ಆಫ್ ಸೆವನ್ ಹಿಲ್ಸ ಅಧ್ಯಕ್ಷೆ ಡಾ. ಗೌರಿ ತಾವರಗೇರಿ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿಯೊಬ್ಬರು ನಿತ್ಯ ವ್ಯಾಯಾಮ, ನಡಿಗೆ, ಯೋಗ, ಧ್ಯಾನ ಮಾಡುವ ರೂಢಿ ಬೆಳೆಸಿಕೊಂಡಲ್ಲಿ ಖಾಯಿಲೆಗಳು ಸುಳಿಯುವುದು ಕಡಿಮೆ. ಹಣ್ಣು, ತರಕಾರಿ, ಸಾತ್ವಿಕ ಆಹಾರ ಸೇವನೆಯಿಂದ ದೇಹಕ್ಕೆ ತಗಲುವ ಖಾಯಿಲೆಯಿಂದ ದೂರ ಉಳಿಯಲು ಸಾಧ್ಯ ಜೊತೆಗೆ ದಂತದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದರು.
ಶಿಬಿರದಲ್ಲಿ ದಂತ ವೈದ್ಯರು ಹಾಗೂ ರೋಟರಿ ಕ್ಲಬ್ ಆಫ್ ಸೆವನ್ ಹಿಲ್ಸನ ಪದಾಧಿಕಾರಿಗಳು, ಕೃಷಿ ವಿವಿ ಸಿಬ್ಬಂದಿಯವರು ಉಪಸ್ಥಿತರಿದ್ದರು. ಗೌರಿ ಮಹೇಶ ನಿರೂಪಿಸಿದರು. ರೇಣುಕಾ ಸಾಳುಂಕೆ ಸ್ವಾಗತಿಸಿದರು. ರಮ್ಯಾ ಶಿನೋದ ವಂದಿಸಿದರು.