ಲೋಕದರ್ಶನ ವರದಿ
ಹಸ್ತ ಪ್ರತಿಗಳಿಂದಲೇ ನಾಗರೀಕತೆಗಳ ಇತಿಹಾಸ- ಶ್ರೀನಿವಾಸಾಚಾರಿ ಪಿ.ಎನ್
ಹಂಪಿ 25: ಲಿಖಿತ ಆಧಾರಗಳಿಂದ ಬರೆದ ಇತಿಹಾಸ ವಾಸ್ತವಿಕತೆಗೆ ಹತ್ತಿರವಿರುತ್ತದೆ. ವಸ್ತುನಿಷ್ಠವಿಲ್ಲದೆ ಬರೆದ ದಾಖಲೆಗಳು ಅವಾಸ್ತವೆನಿಸುತ್ತವೆ. ಎಲ್ಲ ನಾಗರೀಕತೆಗಳ ಇತಿಹಾಸ ಹಸ್ತಪ್ರತಿಗಳಿಂದಲೇ ಆಗಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಐ.ಎ.ಎಸ್.ನ ಆಯುಕ್ತ ರಾದ ಶ್ರೀನಿವಾಸಾಚಾರಿ ಪಿ.ಎನ್. ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ ಹಸ್ತ ಪ್ರತಿಶಾಸ್ತ್ರ ವಿಭಾಗವು ದಿ. 25ರಿಂದ 2 ದಿನಗಳವರೆಗೆ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ಇಪ್ಪತ್ತೊಂದನೆಯ ಹಸ್ತಪ್ರತಿ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಮಾತನಾಡುತ್ತ, ಒಬ್ಬ ಸಂಶೋಧಕ ಒಂದೇ ಸಿದ್ಧಾಂತಕ್ಕೆ ಜೋತು ಬಿದ್ದರೆ ಬೇರೆ ಸಿದ್ಧಾಂತಗಳನ್ನು ಮುಕ್ತವಾಗಿ ನೋಡದಿದ್ದರೆ ಸಂಶೋಧಕ ನಿಸ್ಪಕ್ಷಪಾತವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಬಾದಾಮಿಯಲ್ಲಿ ನಡೆದ ಉತ್ಖನನದಲ್ಲಿ ವೈಷ್ಣವ ದೇವಾಲಯ, ಜೈನ ದೇವಾಲಯ, ಶೈವ ದೇವಾಲಯಗಳು ನಮ್ಮಲ್ಲಿರುವ ಧರ್ಮ ಸಹಿಷ್ಣತೆಯನ್ನು ಹೇಳುತ್ತವೆ ಎಂದು ತಿಳಿಸಿದರು.
ಹಸ್ತಪ್ರತಿ ವ್ಯಾಸಂಗ-24 (ಸಂ. ಡಾ.ಕೆ.ರವೀಂದ್ರನಾಥ) ಪುಸ್ತಕವನ್ನು ಬಿಡುಗಡೆ ಮಾಡಿದ ಪ್ರೊ. ಪಿ.ಬಿ. ಬಡಿಗೇರ ಅಧ್ಯಕ್ಷರು, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಶಿರಸಂಗಿ ಇವರು ಮಾತನಾಡುತ್ತ, ಪೂರ್ವಗ್ರಹದ ಹಿನ್ನೆಲೆಯಲ್ಲಿ ರಚನೆಯಾಗಿರುವ ಸಾಹಿತ್ಯಕ್ಕೆ ಕನ್ನಡಿ ಹಿಡಿಯಲು ಹಸ್ತಪ್ರತಿಗಳು ನೆರವಾಗುತ್ತವೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ವಿದ್ವಾಂಸ ಡಾ.ಜಿ. ಜ್ಞಾನಾನಂದ ಅವರು ಮಾತನಾಡಿ ಹಸ್ತಪ್ರತಿಗಳಿಂದ ನಾವು ಮಾತ್ರವಲ್ಲ ನಮ್ಮ ಮಕ್ಕಳು ಕಲಿಯಲು, ಕೆಲಸ ಮಾಡಲು ಬೇಕಾದಷ್ಟಿದೆ. ಇದರಿಂದ ಜನತೆಗೆ ಹೊಸ ಆಯಾಮ, ಹೊಸ ದೃಷ್ಟಿಕೋನಗಳು ಸಿಗುತ್ತವೆ ಎಂದು ಮನವರಿಕೆ ಮಾಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಪ.ಪೂ. ಜಗನ್ನಾಥ ಮಹಾಸ್ವಾಮಿಗಳು ಮಳೆಯರಾಜೇಂದ್ರ ಮಠ, ಮುರನಾಳ(ಬಾಗಲಕೋಟ) ಇವರು ಮಠ ಮಾನ್ಯಗಳಲ್ಲಿರುವ ಹಸ್ತಪ್ರತಿಗಳನ್ನು ಕನ್ನಡ ವಿಶ್ವವಿದ್ಯಾಲಯವು ಬೆಳಕಿಗೆ ತಂದು ಪುಸ್ತಕಗಳ ರೂಪದಲ್ಲಿ ಪ್ರಕಟಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಮ್ಮೇಳನ ಉದ್ಘಾಟನೆಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷೀಯವಾಗಿ ಮಾತನಾಡುತ್ತ, ಜ್ಞಾನದ ಮೂಲ ಆಕರಗಳೆಂದರೆ ಹಸ್ತಪ್ರತಿಗಳು. ಜ್ಞಾನವನ್ನು ನೋಡುವುದು, ಕೇಳುವುದು, ಓದುವುದು, ಬರೆಯುವುದರ ಮೂಲಕ ಜೊತೆಗೆ ಸ್ಪರ್ಷದ ಮೂಲಕ ಪಡೆಯುತ್ತಿದ್ದೇವೆ. ಹಸ್ತಪ್ರತಿಗಳನ್ನು ನೋಡದಿದ್ದರೆ ಜ್ಞಾನಪರಂಪರೆಯ ವೈಭವ ತಿಳಿಯಲು ಆಗುತ್ತಿರಲಿಲ್ಲ. ನಮ್ಮ ನಿರ್ಲಕ್ಷ್ಯದಿಂದ ಸಾಹಿತ್ಯ ಚರಿತ್ರೆಯಲ್ಲಿ ಅನೇಕ ಕೃತಿಗಳು ಕವಿಗಳ ಕೊಂಡಿಗಳನ್ನು ಬೆಸೆಯಲು ಸಿಗುತ್ತಿಲ್ಲ. ಆಧುನಿಕತೆಯ ವೇಗದ ಧಾವಂತದಲ್ಲಿ ಅನೇಕ ಜ್ಞಾನ ಶಿಸ್ತುಗಳು ಕಾಣೆಯಾಗುತ್ತಿವೆ.
ಕಾಣೆಯಾಗುತ್ತಿರುವ ಜ್ಞಾನ ಶಿಸ್ತುಗಳ ಕಡೆ ಮತ್ತೆ ಮತ್ತೆ ತಿರುಗಿ ನೋಡುವ ಪ್ರಯತ್ನಗಳೇ ಶಾಸನಶಾಸ್ತ್ರ ಮತ್ತು ಹಸ್ತಪ್ರತಿಶಾಸ್ತ್ರ ವಿಭಾಗಗಳು ಆಗಿವೆ. ಹುದುಗಿರುವ ಅಪಾರ ಜ್ಞಾನರಾಶಿಯನ್ನು ನಾವು ಹುಡುಕಬೇಕಾಗಿದೆ. ಈ ಹುಡುಕುವ ಕೆಲಸವನ್ನು ಹಸ್ತಪ್ರತಿ ಸಮ್ಮೇಳನವು ಮಾಡುತ್ತಿವೆ ಎಂದು ತಿಳಿಸಿಕೊಟ್ಟರು.
ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ವೇದಿಕೆಯ ಮೇಲಿರುವ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಡಾ.ಚಂದ್ರಶೇಖರ ಕಾಳನ್ನವರ ಕಾರ್ಯಕ್ರಮ ನಿರೂಪಿಸಿದರು. ಡಾ.ಲಕ್ಷ್ಮೀಕಾಂತ ಪಂಚಾಳ ವಂದಿಸಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಾಗರಾಜ ಪತ್ತಾರ ಅವರು ಮೌನೇಶ್ವರನ ವಚನವನ್ನು ಹಾಡಿದರು. ಕುಲಪತಿಯವರು ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರನ್ನು, ಅತಿಥಿಗಳನ್ನು ಗೌರವಿಸಿದರು.