ಲೋಕದರ್ಶನ ವರದಿ
ಕುಮಟಾ,14 : ತಾಲೂಕಿನ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಉಪ್ಪಿನಪಟ್ಟಣದಲ್ಲಿ ಅಂಬಿಗ ಸಮಾಜದ 9 ಕುಟುಂಬಕ್ಕೆ ಸಾಮೂಹಿಕ ಬಹಿಷ್ಕಾರ ಹಾಕಿರುವ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ದೀವಗಿಯಲ್ಲೂ ಬಡ ಕುಟುಂಬವೊಂದಕ್ಕೆ ಸಾಮೂಹಿಕ ಬಹಿಷ್ಕಾರ ಹಾಕಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ದೀವಗಿಯ ಕೆಳಗಿನಕೇರಿಯ ನಿವಾಸಿ ಸಂತೋಷ ಹಮ್ಮಯ್ಯ ಅಂಬಿಗ ಅವರ ಕುಟುಂಬ ಸಾಮೂಹಿಕ ಬಹಿಷ್ಕಾರಕ್ಕೊಳಗಾಗಿ, ನರಕಯಾತನೆ ಅನುಭವಿಸುವಂತಾಗಿದೆ. ತಾಲೂಕಿನ ಉಪ್ಪಿನಪಟ್ಟಣದಲ್ಲಿ 9 ಕುಟುಂಬಕ್ಕೆ ಸಾಮೂಹಿಕ ಬಹಿಷ್ಕಾರ ಹಾಕಿರುವ ವರದಿ "ಕನ್ನಡಮ್ಮ ಪತ್ರಿಕೆಗೆ ಪ್ರಕಟವಾಗುತ್ತಿದ್ದಂತೆ ಧೈರ್ಯ ತಳೆದ ಸಂತೋಷ ಅಂಬಿಗ ಅವರು ಪತ್ರಿಕೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 71 ವರ್ಷಗಳು ಗತಿಸಿವೆ. ಸಮಾಜದಲ್ಲಿ ಸುಶಿಕ್ಷಿತಿರ ಪ್ರಮಾಣವೂ ಜಾಸ್ತಿಯಾಗಿದೆ. ದಿವಗಿಯ ಕೆಳಗಿನಕೇರಿಯ ಅಂಬಿಗ ಸಮಾಜದವರ ಸಭೆಯಲ್ಲಿ ಹಣದ ಲೆಕ್ಕಾಚಾರವನ್ನು ಪ್ರಶ್ನಿಸಿರುವುದಕ್ಕೆ ಬಹಿಷ್ಕಾರ ನೀಡಿ ಅವರನ್ನು ಊರಿನ ಎಲ್ಲಾ ಚಟುವಟಿಕೆಯಿಂದ ದೂರವಿಟ್ಟು, ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಸಂತೋಷ ಹಮ್ಮಯ್ಯ ಅಂಬಿಗ ಹಾಗೂ ಸಂದೀಪ ಹಮ್ಮಯ್ಯ ಸಹೋದರರ ಕುಟುಂಬವು ಈ ಬಹಿಷ್ಕಾರದ ಬಿದ್ದು ನರಳಾಡುತ್ತಿದೆ. ಅಂಬಿಗ ಸಮಾಜದ ಯಜಮಾನನ ವಿರುದ್ಧ ತಮಾಶೆಗೆ ಆಡಿದ ಮಾತಿಗೆ ಕೋಪಗೊಂಡ ಯಜಮಾನ ಎರಡುವರೆ ವರ್ಷಗಳ ಹಿಂದೆ ಸಮಾಜದಿಂದ ಬಹಿಷ್ಕಾರ ಹಾಕಿದ್ದಾರೆ. ಒಮ್ಮೆ ಸಂದೀಪ ಅಂಬಿಗ ಅವರು ಸಭೆಯಲ್ಲಿ ನಮ್ಮ ಸಮಾಜದ 200 ಕ್ಕೂ ಹೆಚ್ಚು ಮನೆಗಳಿವೆ. ಎಲ್ಲಾ ಮನೆಯಿಂದಲೂ ಹಣವನ್ನು ಸಂಗ್ರಹಿಸುತ್ತೀರಿ? ಈ ಹಣವನ್ನೆಲ್ಲಾ ಹೇಗೆ ಖುಚರ್ು ಮಾಡುತ್ತೀರಿ? ಎಂದು ಪ್ರಶ್ನಿಸಿರುವುದಕ್ಕೆ ಈ ಕುಟುಂಬಕ್ಕೆ ಬಹಿಷ್ಕಾರ ನೀಡಲಾಗಿದೆ. ಸಹೋದರನ ಜೊತೆ ಮಾತನಾಡುವುದಕ್ಕೆ ಸಂದೀಪನ ಸಹೋದರ ಸಂತೋಷ ಅಂಬಿಗನಿಗೂ ಕೂಡ ಕಟ್ ನೀಡಲಾಗಿದೆ. ದಿವಗಿಯ ಊರಿನಲ್ಲಿ ಅಂಬಿಗ ಸಮಾಜದ ಸಭೆಯು ಆಗಾಗ ನಡೆಯುತ್ತದೆ. ಯಾರೂ ಕೂಡ ಸಭೆಯ ಚೌಕಟ್ಟನ್ನು ಮೀರುವಂತಿಲ್ಲ. ಸಭೆಯಲ್ಲಿ ಯಜಮಾನನಿಗೆ ಎದುರು ಮಾತನಾಡುವುದೆಂದರೆ ಆಸ್ಥಾನದಲ್ಲಿ ರಾಜನ ವಿರುದ್ಧ ಮಾತನಾಡಿದಂತೆ ಎಂಬಂತೆ ಇಲ್ಲಿಯ ಸಭೆಯು ನಡೆಯುತ್ತಿದೆ. ಯಜಮಾನನ ಅಣತಿಯಂತೆ ಎಲ್ಲರೂ ನಡೆಯಬೇಕೇ ವಿನ: ಯಜಮಾನನ ವಿರುದ್ಧ ಮಾತನಾಡಿದರೆ ಆತನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.
ಅಲ್ಲದೆ ಸಂತೋಷ ಅವರಿಗೆ ಮೂಛರ್ೆ ಹೋಗುವ ಕಾಯಿಲೆ ಇದೆ. ಸಂತೋಷ ಅಂಬಿಗ ಮೂಛರ್ೆ ಬಂದು ರಸ್ತೆಯಲ್ಲಿ ಬಿದ್ದರೂ ಸುತ್ತಮುತ್ತಲೂ ಇರುವ ಅಂಬಿಗ ಸಮಾಜದವರು ರಸ್ತೆಯಲ್ಲಿ ಬಿದ್ದಿರುವ ಸಂತೋಷ ಅಂಬಿಗನನ್ನು ಮೇಲಕ್ಕೆತ್ತುವ ಬದಲು ಅಲ್ಲಿಂದ ಓಡಿಹೋಗುತ್ತಾರೆ. ಅಲ್ಲಯೇ ಸಮೀಪದಲ್ಲಿದ್ದ ಬೇರೆ ಸಮಾಜದವರು ಈತನನ್ನು ಎತ್ತಿ ಆಸ್ಪತ್ರೆಗೆ ಸೇರಿಸಿದ್ದರಂತೆ. ಮೂಛರ್ೆ ಬಿದ್ದವನನ್ನು ಎತ್ತಿದರೂ ಕೂಡ ಅಂಬಿಗ ಸಮಾಜದವರಿಗೆ 500 ರೂ ದಂಡ ಯಜಮಾನ ಹಾಕುತ್ತಾರಂತೆ. ಹಾಗಾಗಿ ಅವರು ದಾರಿಯಲ್ಲಿ ಮೂಛರ್ೆ ಬಿದ್ದರು ಅವರನ್ನು ರಕ್ಷಿಸಲು ಸಮಾಜದವರ್ಯಾರು ನೆರವಿಗೆ ಬರುವುದಿಲ್ಲ. ಇನ್ನು ಸಂತೋಷ ಅವರ ಹಿರಿಯ ಪುತ್ರಿ ಪ್ರತೀಕ್ಷಾ ಎಂಬ ಓರ್ವ ಬುದ್ಧಿಮಾಂದ್ಯ ಹೆಣ್ಣು ಮಗಳಿದ್ದು, ಅವಳೂ ಕೂಡ ಮನೆಯಿಂದ ಹೊರ ಬರುವ ಪರಿಸ್ಥಿತಿಯಿಲ್ಲ. ಯಾರೂ ಇವರನ್ನು ಮನೆಯೊಳಕ್ಕೆ ಸೇರಿಸಿಕೊಳ್ಳುವುದಿಲ್ಲ. ಓರ್ವ ಬುದ್ಧಿಮಾಂದ್ಯಳೆಂದೂ ಕೂಡ ಕನಿಕರ ತೋರಿಸುತ್ತಿಲ್ಲ. ಬುದ್ಧಿಮಾಂದ್ಯ ಬಾಲಕಿಗೂ ಕೂಡ ದೌರ್ಜನ್ಯ ಎಸಗಲಾಗಿದೆ. ಸಂತೋಷ ಅವರ ಇನ್ನಿಬ್ಬರು ಮಕ್ಕಳ ಪೈಕಿ ಪುತ್ರ ಪ್ರೌಢ ಶಾಲೆಯಲ್ಲಿ ಓದುತ್ತಿದ್ದರೆ, ಎರಡನೇ ಪುತ್ರಿ ಕಾಲೇಜ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಿಬ್ಬರ ಜೊತೆಗೆ ಸಮಾಜದವರ್ಯಾರು ಮಾತನಾಡಿದ ಕಾರಣ ಮನೆಯಿದ್ದರೂ ಗಂಗಾವಳಿಯಲ್ಲಿರುವ ಅಜ್ಜಿಮನೆಯಲ್ಲಿ ಉಳಿದುಕೊಂಡು ಅಂಕೋಲಾದಲ್ಲಿ ವಿದ್ಯಾಭ್ಯಾಸ ಮುಂದುವರೆಸುವಂತಾಗಿದೆ. ಇನ್ನು ಸಂತೋಷ ಅವರ ತಾಯಿ ದೀವಗಿಯ ಅಂಬಿಗ ಸಮಾಜದ ಕಲೆ ಮಹಿಳೆಯರೊಂದಿಗೆ ಮೀನು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಈ ಸಾಮೂಹಿಕ ಬಹಿಷ್ಕಾರದಿಂದ ಈಗ ತಾಯಿಯ ಜೊತೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದ ಮಹಿಳೆಯರು ಕೂಡ ಸಂತೋಷ ಅವರ ತಾಯಿಯನ್ನು ದೂರವಿಟ್ಟಿದ್ದಾರೆ. ಇದರಿಂದ ಮೀನುಗಾರಿಕೆ ವೃತ್ತಿಗೂ ತೊಂದರೆಯಾಗಿದೆ. ಸಂತೋಷ ಅಂಬಿಗ ಮೀನು ವಾಹನದಲ್ಲಿ ಕೆಲಸ ಮಾಡುತ್ತಿದ್ದು, ಅಂಬಿಗ ಸಮಾಜದವರು ಈತನನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಇವರ ಪತ್ನಿ ಮಂಜುಳಾ ಸಹಿತ ದೂರದ ಕ್ಯಾಶ್ಯೂ ಕಂಪನಿಯ ಕೆಲಸಕ್ಕೆ ಹೋಗುತ್ತಿದ್ದಾರೆ. ಏನೇ ಕಷ್ಟ ಬಂದರೂ ಬೇರೆ ಯಾರಲ್ಲಿಯೂ ಹೇಳಿಕೊಳ್ಳುವಂತಿಲ್ಲ.
ಮದುವೆ ಮಾಡಿಕೊಟ್ಟ ಸಹೋದರಿಯರೂ ಸಹಿತ ಇವರ ಮನೆಗೆ ಬರುವಂತಿಲ್ಲ. ಮನೆಯಲ್ಲಿ ಯಾರಾದರು ಸಂಬಂಧಿಕರು ಅಥವಾ ಸಹೋದರಿಯರು ಮನೆಗೆ ಬಂದರೆ, ಅವರಿರುವ ಹಳ್ಳಿಯ ಯಜಮಾನರಿಗೆ ಹೇಳಿ ಅವರಿಗೂ ಬಹಿಷ್ಕಾರ ಹಾಕುತ್ತಾರೆ. ತಾಲೂಕಿನ 18 ಹಳ್ಳಿಗಳಲ್ಲಿ ಇರುವ ಪ್ರತಿ ಯಜಮಾನರಿಗೂ ಈ ಬಹಿಷ್ಕಾರ ಯಾದಿಯು ತಲುಪಿದ್ದು, ಸಮಾಜದ ಯಾರಿಂದಲೂ ಇವರು ಸಹಾಯ ಪಡೆಯುವಂತಿಲ್ಲ. ಹೀಗೆ ಸಮಾಜದವರ ಅಸಹಕಾರ ಮತ್ತು ಕಿರಿಕಿರಿಯಿಂದ ನೊಂದ ಸಂತೋಷ ಹಮ್ಮಯ್ಯ ಅಂಬಿಗ ಅವರ ಕುಟುಂಬ ತಾಲೂಕು ಆಡಳಿತದಿಂದ ನ್ಯಾಯ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಭಾರತದ ಸಂವಿಧಾನದ ಪ್ರಕಾರ ತಪ್ಪಿತಸ್ಥನಿಗೆ ಶಿಕ್ಷೆ ನೀಡುವ ಹಕ್ಕು ನ್ಯಾಯಾಲಯಕ್ಕಿದೆ. ಆದರೆ ಸಂವಿಧಾನವನ್ನು ಹೊರತುಪಡಿಸಿ, ಕಾನೂನನ್ನು ಗಾಳಿಗೆ ತೂರಿ ತಮ್ಮದೇ ನ್ಯಾಯ ನೀಡುತ್ತಿರುವ ದಿವಗಿ ಗ್ರಾಮವು ಭಾರತದಲ್ಲಿಲ್ಲವೇ ಎಂಬುದೇ ಪ್ರಶ್ನೆಯಾಗಿದೆ. ಒಟ್ಟಾರೆ ಬ್ರಿಟಿಷರು ದೇಶವನ್ನು ಬಿಟ್ಟು ಹೋದರೂ ಕೂಡ ಬ್ರಿಟಿಷರ ಬುದ್ಧಿ ಮಾತ್ರ ದೀವಗಿ ಗ್ರಾಮದಿಂದ ಬಿಟ್ಟು ಹೋಗಿಲ್ಲದಿರುವುದು ಸಾಬೀತಾಗಿದ್ದು, ಇಂಥ ಶೋಷಿತದ ಧ್ವನಿಗೆ ನ್ಯಾಯ ಕೊಡಿಸುವ ಪ್ರಯತ್ನ ತಾಲೂಕು ಆಡಳಿತದ ಅದಿಕಾರಿಗಳಿಂದ ನಡೆಯುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. 21ನೇ ಶತಮಾನದಲ್ಲೂ ಇಂಥ ಅನಿಷ್ಠ ಪದ್ದತಿಗಳು ಕುಮಟಾದಲ್ಲಿ ಆಚರಣೆಯಲ್ಲಿರುವುದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಗೂ ನಾಚಿಕೆಗೇಡಿನ ಸಂಗತಿಯಾಗಿದೆ.