ಸರ್ಕಾರವೇ ಮಹಿಳೆಯರನ್ನು ಕರೆತಂದು ದೇವಸ್ಥಾನದೊಳಗೆ ಕಳುಹಿಸುವ ಕೆಲಸ ಮಾಡಬಾರದು; ಕಾಂಗ್ರೆಸ್

ತಿರುವನಂತಪುರಂ, ನವೆಂಬರ್ 14  :      ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೂ ಪ್ರವೇಶ ನೀಡಿ 2018, ಸೆಪ್ಟಂಬರ್ 18ರಂದು ನೀಡಿದ್ದ ತೀರ್ಪನ್ನು ಬದಲಾಯಿಸಲು ಇಂದು ಸುಪ್ರೀಂಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕೇರಳದ ಎಲ್ಡಿಎಫ್ ನೇತೃತ್ವದ ಸರ್ಕಾರ ಮಹಿಳಾ ಕಾರ್ಯಕರ್ತರನ್ನು ಅಯ್ಯಪ್ಪ ದೇವಸ್ಥಾನಕ್ಕೆ ಕರೆತರುವ ಸಹಾಯಕನಂತೆ ಕೆಲಸ ಮಾಡಬಾರದು ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 17ರಂದು ಆರಂಭಗೊಳ್ಳುವ ಮಂಡಲಮ್-ಮಕರಜ್ಯೋತಿ ಹಬ್ಬದ ಸಂದರ್ಭದಲ್ಲಿ ಯಾತ್ರಾರ್ಥಿಗಳು ಸುಗಮವಾಗಿ ಬಂದು ಹೋಗುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಸುಪ್ರೀಂಕೋರ್ಟ್ನ್ ತೀರ್ಪನ್ನು ಸ್ವಾಗತಿಸುತ್ತದೆ ಎಂದು ಹೇಳಿರುವ ಕೇರಳ ಮುಜರಾಯಿ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್, ಈ ವಿಷಯದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.

ಮುಂಬರುವ ಹಬ್ಬದ ಸಂದರ್ಭದಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶಿಸಲು ಸರ್ಕಾರ ಅನುಮತಿ ನೀಡುತ್ತದೆಯೇ ಎಂಬ ಪ್ರಶ್ನೆಗೆ, ಸಚಿವರು, "ಸರ್ಕಾರ ಇನ್ನೂ ತೀರ್ಪನ್ನು ಅಧ್ಯಯನ ಮಾಡಿಲ್ಲ. ಈಗಲೇ ಅಂತಹ ಪ್ರಶ್ನೆಗೆ ಉತ್ತರಿಸುವುದು ಆತುರದ ನಿರ್ಧಾರವಾಗಲಿದೆ ಎಂದರು.

ಶಬರಿಮಲೆ ವಿಷಯದಲ್ಲಿ ವಿರೋಧ ಪಕ್ಷ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು. 

ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್ ಚಾಂಡಿ, ರಾಜ್ಯದ ಎಲ್ಡಿಎಫ್ ಸರ್ಕಾರ ಭಕ್ತಾದಿಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿದರು.

ತೀಪು ಅಂತಿಮವಲ್ಲ. ಮಹಿಳಾ ಕಾರ್ಯಕರ್ತರನ್ನು ರಾಜ್ಯ ಸರ್ಕಾರ ಶಬರಿಮಲೆಗೆ ಕರೆತರುವ ಮೂಲಕ ಉದ್ವಿಗ್ನತೆ ಸೃಷ್ಟಿಸಬಾರದು ಎಂದು ದೇವಸ್ಯಂ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಪ್ರಯಾರ್  ಗೋಪಾಲಕೃಷ್ಣ ಹೇಳಿದ್ದಾರೆ.

ಆದಾಗ್ಯೂ, ಸಿಪಿಐಎಂ ನಾಯಕ ಹಾಗೂ ದೇವಸ್ಯಂ ಮಂಡಳಿಯ ಮಾಜಿ ಅಧ್ಯಕ್ಷ ಎನ್. ರಾಜಗೋಪಾಲನ್ ನಾಯರ್, ಸೆಪ್ಟೆಂಬರ್ 28, 2018 ರಂದು ಐವರು ನ್ಯಾಯಾಧೀಶರ ಪೀಠದ ತೀಪು ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಯಾವುದೇ ತಡೆ ನೀಡಿಲ್ಲ ಎಂದು ಹೇಳಿದ್ದಾರೆ. 

ಮಿಜೋರಾಂನ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಸೇರಿದಂತೆ ಬಿಜೆಪಿ ನಾಯಕರು, ಏಳು ಮಂದಿ ನ್ಯಾಯಾಧೀಶರ ಪೀಠ ಈ ಹಿಂದೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ನೀಡಿದ್ದ ತೀರ್ಪನ್ನು ರಾಜ್ಯದ ಎಲ್ಡಿಎಫ್ ಸರ್ಕಾರ ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.