ಭೂ ಗುತ್ತಿಗೆ ಸಕ್ರಮ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು,ಜ‌ 27,ನಗರ  ಪ್ರದೇಶಗಳಿಗೆ ವಲಸೆ ಹೋದ ಕಾರಣ ಕೆಲವರ ಭೂಮಿ ಕೃಷಿಯಿಲ್ಲದೇ ಖಾಲಿ  ಬಿದ್ದಿರುತ್ತದೆ. ಇಂತಹ ಖಾಲಿ ಭೂಮಿಯನ್ನು ಬೇರೆಯವರಿಗೆ ಗುತ್ತಿಗೆ ನೀಡುವ  ಪ್ರಕ್ರಿಯೆಯನ್ನು ಕಾನೂನುಬದ್ಧಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ  ಆರ್.ಅಶೋಕ್ ಹೇಳಿದ್ದಾರೆ.ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಪ್ರಕ್ರಿಯೆಯಲ್ಲಿ ಸರ್ಕಾರದ ಮಧ್ಯ ಪ್ರವೇಶ ಇರುವುದಿಲ್ಲ. ಇದು ಜಮೀನಿನ  ಮಾಲೀಕ ಮತ್ತು ಗುತ್ತಿಗೆ ಪಡೆಯುವರರ ನಡುವಿನ ತೀರ್ಮಾನವಾಗಲಿದೆ. ಎಷ್ಟು ವರ್ಷಕ್ಕೆ ಯಾವ ದರಕ್ಕೆ ಒಪ್ಪಂದ ಮಾಡಿಕೊಳ್ಳಬೇಕು ಎಂಬುದು ಅವರಿಬ್ಬರಿಗೆ‌ ಬಿಟ್ಟ ವಿಚಾರವಾಗಿದೆ. ಗುತ್ತಿಗೆ ಪದ್ಧತಿಯನ್ನು ಸರ್ಕಾರ ಕಾನೂನುಬದ್ಧಗೊಳಿಸುತ್ತದೆ.  ಬಗ್ಗೆ  ವಿಧಾನಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ‌ ಮನೆ ನಿರ್ಮಿಸಿರುವವರು ಅದನ್ನು ಸಕ್ರಮ ಮಾಡಲು  1964 ಕಲಂ ಅಡಿ ಅವಕಾಶ ಇದೆ. ಅರ್ಜಿ ಸ್ವೀಕರಿಸುವ ಅವಧಿ 31-3-2019 ಕ್ಕೆ  ಅಂತ್ಯಗೊಂಡಿದ್ದು, ಸ್ವೀಕರಿಸಿದ ಅರ್ಜಿ‌ ಇತ್ಯರ್ಥ ಪಡಿಸಲಾಗುತ್ತಿದೆ. ಯಾರೆಲ್ಲಾ ಅರ್ಜಿ  ಸಲ್ಲಿಸಿದ್ದಾರೋ ಅವುಗಳನ್ನು ಪರಿಶೀಲಿಸಿ ಅವರಿಗೆ ನೆಲೆ ಒದಗಿಸಿಕೊಡಲು ತೀರ್ಮಾನ  ಕೈಗೊಳ್ಳಲಾಗಿದೆ.  ಪರಿಶಿಷ್ಟ ಜಾತಿ, ಪ. ಪಂಗಡ  ಮತ್ತು ಮಾಜಿ ಸೈನಿಕರಿಗೆ ರಿಯಾಯಿತಿ  ನೀಡಲಾಗುವುದು. ಗ್ರಾಮೀಣ ಪ್ರದೇಶಕ್ಕೆ ಗರಿಷ್ಠ 3000 ಶುಲ್ಕ, ಪ.ಜಾ/ ಪ.ಪಂ, ಅಂಗವಿಕಲರಿಗೆ  ಮಾಜಿ ಸೈನಿಕರಿಗೆ 1500 ಶುಲ್ಕ ಹಾಗೂ ನಗರ ಪ್ರದೇಶಕ್ಕೆ 5000 ಸಾವಿರ,   ಪ.ಜಾ/ಪ.ಪಂಗಡವರಿಗೆ 2500 ಹಾಗೂ ಮಾಜಿ ಸೈನಿಕರಿಗೆ 2500 ಶುಲ್ಕ ವಿಧಿಸಲಾಗಿದೆ  ಎಂದು  ಸಚಿವರು ವಿವರಿಸಿದರು.

ಒಂದೇ ಸೂರಿನಡಿ‌ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ನಾಳೆ ಇದೇ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅಶೋಕ್ ಹೇಳಿದರು.ಅಕ್ರಮ ಲೇಔಟ್ ಗಳ ಮೇಲೆ ಕ್ರಮ ಕೈಗೊಳ್ಳುವ  ಸಲುವಾಗಿಯೇ ಕಂದಾಯ ಜಮೀನು ನೋಂದಣಿ ಸ್ಥಗಿತಗೊಳಿಸಲಾಗಿದೆ. ದಾಖಲೆಗಳು ಸರಿಯಿಲ್ಲದ, ಭೂ  ಪರಿವರ್ತನೆಯಾಗದ ಅಕ್ರಮ ಬಡಾವಣೆಗಳನ್ನು ಕಾವೇರಿ ತಂತ್ರಾಂಶದ ಮೂಲಕ ನೋಂದಣಿ ಮಾಡಿಸಲು ಸಾಧ್ಯವಾಗುವುದಿಲ್ಲ. ಈಗ ಎಲ್ಲ ನೋಂದಣಿ ಪ್ರಕ್ರಿಯೆಗಳನ್ನೂ ಆನ್ ಲೈನ್  ಮೂಲಕವೇ ಮಾಡುವುದು ಕಡ್ಡಾಯ. ಹಾಗಾಗಿ ಕಂದಾಯ ಜಮೀನುಗಳ ನೋಂದಣಿ   ಸ್ಥಗಿತಗೊಳಿಸಲಾಗಿದೆ ಎಂದು ವಿವರಿಸಿದರು.

ಪಕ್ಷಾಂತರಿಗಳು ಅಂತಂತ್ರರಾಗಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,  ಅತಂತ್ರರಾಗಿರುವುದು ಸಿದ್ದರಾಮಯ್ಯ. ಸಿದ್ದರಾಮಯ್ಯ ಈಗ ಮತ್ತೆ ಲಾಯರ್ ಗಿರಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನಿಂದ ಸಿದ್ದರಾಮಯ್ಯಗೆ ಸದ್ಯದಲ್ಲೇ ಗೇಟ್ ಪಾಸ್ ಸಿಗಲಿದೆ. ಅದಕ್ಕಾಗಿ ಅವರು ಮತ್ತೆ ವಕೀಲಿಕೆಗೆ ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.ಸಿದ್ದರಾಮಯ್ಯ ಮೊದಲು ತಮ್ಮ ಅಸ್ತಿತ್ವ  ಉಳಿಸಿಕೊಳ್ಳಲಿ. ಅವರು ರಾಜಕೀಯ ಬಿಟ್ಟು ವಕೀಲಿಕೆ ಆರಂಭಿಸಲು ಅರ್ಜಿ  ಸಲ್ಲಿಸಿದ್ದಾರೆ. ಜತೆಗೆ ಪ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ್ದ ನಳಿನಿಯವರನ್ನು  ಬೆಂಬಲಿಸುತ್ತಿದ್ದಾರೆ. ಇದನ್ನು ನೋಡಿದರೆ ಅವರು ಹಿಂದೆ ಪಿಎಫ್ ಐ ಕಾರ್ಯಕರ್ತರ ಮೇಲಿನ  ಕೇಸ್ ಗಳನ್ನು ವಾಪಸ್ ಪಡೆದಿದ್ದ ರೀತಿಯಲ್ಲೇ ಪಿಎಫ್ ಐ, ಎಸ್ ಡಿಪಿಐ ಕಾರ್ಯಕರ್ತರ ಪರ  ವಕಾಲತ್ತು ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎನಿಸುತ್ತದೆ ಎಂದು ಅಶೋಕ್ ಹೇಳಿದರು.ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸಂವಿಧಾನ ಉಳಿಸುವಂತೆ ಕರೆ ಕೊಟ್ಟಿದ್ದಾರೆ. ಮೊದಲು ಅವರು  ಕಾಂಗ್ರೆಸ್ ಉಳಿಸಿಕೊಳ್ಳಲಿ. ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿಕೊಳ್ಳಲಿ. ದೇಶದಲ್ಲಿ  ತುರ್ತು ಪರಿಸ್ಥಿತಿ ಹೇರಿದ್ದ ಪಕ್ಷ ಕಾಂಗ್ರೆಸ್. ಅದರ ವಿರುದ್ದ ಹೋರಾಡಿದ್ದವರು, ಎರಡನೆ  ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದವರು ಆರ್ ಎಸ್ ಎಸ್ ನವರು. ಆರ್ ಎಸ್ ಎಸ್  ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಅಗತ್ಯ ಬಿದ್ದರೆ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ ಎಂಬ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,  ಇದು ಜೆ. ಸಿ. ಮಾಧುಸ್ವಾಮಿ ಅವರ ವೈಯಕ್ತಿಕ ಹೇಳಿಕೆ. ಸಚಿವರು ಸ್ಥಾನ ತ್ಯಾಗ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಅಂತಹ ಯಾವುದೇ ಚರ್ಚೆಗಳೂ ಸರ್ಕಾರದ ಮಟ್ಟದಲ್ಲಿ ನಡೆದಿಲ್ಲ ಎಂದು ಸಚಿವ ಸ್ಥಾನ ಬಿಟ್ಟು ಕೊಡಲ್ಲ ಎಂದು ಆರ್. ಅಶೋಕ್ ಪರೋಕ್ಷವಾಗಿ ಸಂದೇಶ ರವಾನಿಸಿದರು.ಸಚಿವ ಸಂಪುಟ ವಿಸ್ತರಣೆ ನಿಗದಿಯಾಗಿದೆ. ಉಪ ಚುನಾವಣೆಯಲ್ಲಿ ಗೆದ್ದವರನ್ನು ಸಚಿವರಾಗಿ ಮಾಡುವುದು ಖಚಿತವಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ದೆಹಲಿಗೆ ಹೋಗುವ ಸಾಧ್ಯತೆ ಕಡಿಮೆ. ಈಗಾಗಲೇ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸೋತವರಿಗೆ ಮಂತ್ರಿ ಸ್ಥಾನ ವಿಚಾರ ಸದ್ಯಕ್ಕೆ ನಮ್ಮ ಮುಂದಿಲ್ಲ. ಸೋತವರಿಗೆ ಯಾವ ಸ್ಥಾನ ಕೊಡಬೇಕು ಎಂದು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ಸೋತವರಿಗೆ ಮಂತ್ರಿ ಸ್ಥಾನ ಕೊಡಲು ಕಾನೂನಿನ ತೊಡಕಿದೆ.  ಗೆದ್ದ ಮೇಲೆ ಅವರಿಗೆ ಮಂತ್ರಿಸ್ಥಾನ ಕೊಡಬಹುದು ಎಂದು ಸುಪ್ರೀಂಕೋರ್ಟ್ ಆದೇಶ ಇದೆ. ಹಾಗಾಗಿ ಸೋತವರಿಗೆ ಮಂತ್ರಿ ಸ್ಥಾನ ಕೊಡುವ ಪ್ರಸ್ತಾವನೆ ಸರ್ಕಾರದ ಮುಂದೆ ಈಗ ಇಲ್ಲ ಎಂದು ಸ್ಪಷ್ಟಪಡಿಸಿದರು.