ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು: ಡಾ. ಭೋಜನ್ನವರ

ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು: ಡಾ. ಭೋಜನ್ನವರ  The goal of a student's life should be clear: Dr. Bhojan

ಧಾರವಾಡ 25: ವಿದ್ಯಾರ್ಥಿಗಳು ಶಿಸ್ತು, ತಾಳ್ಮೆ, ವಿನಯ ಕಳೆದುಕೊಳ್ಳಬಾರದು. ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು. ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಶ್ರದ್ಧೆಯಿಂದ ಓದುವ ಕಡೆ ಗಮನಹರಿಸಿ ಎಂದು ಬಾಗಲಕೋಟೆ ಸೈಬರ್ ಕ್ರೈಮ್ ವಿಭಾಗದ ಪೊಲೀಸ್ ಉಪ ಅಧೀಕ್ಷಕರು ಡಾ. ಗೀರೀಶ್ ಎಚ್ ಭೋಜನ್ನವರ ಅವರು ಹೇಳಿದರು.

ಇಂದು ಕವಿವಿ ಆವರಣದ ಮಾನಸೋಲ್ಲಾಸ ಸಭಾಂಗಣದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪರಿಶಿಷ್ಟ ಪಂಗಡ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಘ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಪರಿಶಿಷ್ಟ ಪಂಗಡ ನೌಕರರ ಸಂಘಗಳ  ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಪ್ರಥಮ ವರ್ಷದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಇರುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಓದಿನ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆ, ನೃತ್ಯ, ಸಂಗೀತ ಸೇರಿದಂತೆ ಸಹಪಠ್ಯ ಚಟುವಟಿಕೆಗಳನ್ನು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು, ಶಿಕ್ಷಣ ಎಂಬುದು ಅರಿವನ್ನು ಮೂಡಿಸುವಂತದ್ದು. ವ್ಯಕ್ತಿಯ ಗುಣವನ್ನು ನಿರ್ಧರಿಸುವುದು ಅವನ ಆಂತರಿಕ ಶಕ್ತಿ. ವಿದ್ಯಾರ್ಥಿ ಜೀವನದಲ್ಲಿ ಸಂಕಲ್ಪ ಮತ್ತು ಆತ್ಮವಿಶ್ವಾಸ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಜೀವನವನ್ನು ನಿರ್ಲಕ್ಷ್ಯ ಮಾಡಬಾರದು.ವಿದ್ಯಾರ್ಥಿ ಜೀವನ ಎಂಬುದು ಒಮ್ಮೆ ಮಾತ್ರ ಸಿಗುವಂತದ್ದು. ಗುರುಗಳನ್ನು ಗೌರವಿಸಬೇಕು, ಅವರು ಏನೇ ಹೇಳಿದರು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು.ವಿದ್ಯಾರ್ಥಿಗಳು ತಾಳ್ಮೆ, ಪಾರದರ್ಶಕತೆ, ಆತ್ಮವಿಶ್ವಾಸ, ಸಂಕಲ್ಪ ಮತ್ತು ಹಸನ್ಮುಖಿಯಾಗಿರುವುದು ಮುಖ್ಯ ಎಂದು ಹೇಳಿದರು.  ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು. ನಾವು ಸ್ಪಷ್ಟವಾದ ಗುರಿ ರೂಪಿಸಿಕೊಂಡು ನಮ್ಮ ಕಲಿಕೆಯು ಮುಗಿದ ನಂತರ ನಾವು ಯಾವ ಹಾದಿಯಲ್ಲಿ ಮುಂದುವರೆಯಬೇಕು ಎಂದು ನಿರ್ಧರಿಸಿಕೊಂಡಿರಬೇಕು. ಯಾವ ಪದವಿ ಪಡೆದುಕೊಳ್ಳುತ್ತೇವೆ ಎಂಬುವುದಕ್ಕಿಂತ ಅದು ನಮ್ಮ ಮೇಲೆ ಯಾವ ರೀತಿಯಾದ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುವುದು ಮುಖ್ಯ. ನಮ್ಮ ಪ್ರತಿಭೆ, ಸಾಮಥ್ರ್ಯವನ್ನು ಗುರುತಿಸಿಕೊಳ್ಳುವುದೇ ಶಿಕ್ಷಣದ ಮೂಲ ಉದ್ದೇಶ. ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಯಾವುದಾದರೊಂದು ಸೂಕ್ತ ಪ್ರತಿಭೆಯು ಅಡಗಿರುತ್ತದೆ. ಅವುಗಳನ್ನು ಬೆಳೆಸಿ ಪೋಷಿಸಲು ಕ್ಯಾಂಪಸ್ ನಲ್ಲಿ ಹಲವಾರು ಅವಕಾಶಗಳಿವೆ. ವಿದ್ಯಾರ್ಥಿಗಳೆಲ್ಲರೂ ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ. ಸಂವಿಧಾನ ಓದು ಅಭಿಯಾನದ ಸಂಚಾಲಕರಾದ ಕೆ. ಎಚ್‌. ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಭೋದಿಸಿ, ಡಾ. ಬಿ. ಆರ್‌.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಪಾಲಿಸಿ ಗೌರವಿಸಬೇಕು, ಸಮುದಾಯದ ಏಳಿಗೆಗೆ ಪ್ರತಿಯೊಬ್ಬರೂ ಕೈ ಜೋಡಿಸೋಣ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯದ ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷರಾದ ಪ್ರೋ. ಕೃಷ್ಣ ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 ಕಾರ್ಯಕ್ರಮದ ವೇದಿಕೆ ಮೇಲೆ ಮಾಜಿ ಸಿಂಡಿಕೆಟ್ ಸದಸ್ಯರಾದ ಡಾ.ಕಲ್ಮೇಶ ಹಾವೇರಿಪೇಟ್, ಎಸ್‌. ಬಿ. ಕೇಸರಿ, ವಾಲ್ಮೀಕಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಅಶೋಕ್ ಹುಲಿಬಂಡಿ ಹಾಗೂ ಸಮುದಾಯದ ಪ್ರಾಧ್ಯಾಪಕರು ಹಾಗೂ ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.