ಎಸೆಸೆಲ್ಸಿ ಸಹಪಾಠಿಗಳ ನಾಲ್ಕನೇ ಸ್ನೇಹ ಕೂಟ ಸಂಭ್ರಮದ ಅನುರಾಗ ಸಂಗಮ

ಎಸೆಸೆಲ್ಸಿ ಸಹಪಾಠಿಗಳ ನಾಲ್ಕನೇ ಸ್ನೇಹ ಕೂಟ ಸಂಭ್ರಮದ ಅನುರಾಗ ಸಂಗಮ  The fourth friendship gathering of SSLC classmates was a festive gathering of love and affection.

ರನ್ನ ಬೆಳಗಲಿ 20: 1987-88 ನೇ ಸಾಲಿನ ಎಸ್ಸೆಸ್ಸೆಲ್ಸಿ ಸಹಪಾಠಿಗಳ ಸ್ನೇಹ ಕೂಟ ’ಅನುರಾಗ ಸಂಗಮ’ ಕಾರ್ಯಕ್ರಮ ಗುರುವಾರ ರನ್ನ ಬೆಳಗಲಿ ಪಟ್ಟಣದ ಸುಕೂನ್ ಪ್ಯಾಲೇಸ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು.  

ಕಾರ್ಯಕ್ರಮದ ಮುಖ್ಯ ಅತಿಥಿ, ಇದೆ ಬ್ಯಾಚ್ ಸಹಪಾಠಿ ಮತ್ತು ಮುಧೋಳ ತಾಲೂಕಿನ ಗ್ರೇಡ್‌- 2 ತಹಶೀಲ್ದಾರ್ ಎ.ಕೆ.ಇಂಡಿಕರ ಮಾತನಾಡಿ, 38 ವರ್ಷಗಳ ಹಿಂದೆ ನಾವೆಲ್ಲ ಎಸ್‌. ಸಿ. ಪಿ ಹೈಸ್ಕೂಲ್‌ನಲ್ಲಿ ಆಟ, ಪಾಠ ಮಾಡಿದವರು. ಅಂದು ಅಗಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಂಟೂ ದಿಕ್ಕುಗಳಿಗೆ ಚದುರಿ ಹೋದವರು. ನಾವು ಇನ್ನೆನು ಒಬ್ಬರನ್ನೊಬ್ಬರು ಮುಖ ನೋಡ್ತಿವೋ ಇಲ್ಲವೋ ಎಂದಾಗಿತ್ತು. ನಾವೆಲ್ಲ ಚದುರಿ ನಾಲ್ಕು ದಶಕಗಳೇ ಕಳೆದಿವೆ, ಅಷ್ಟೇ ಅಲ್ಲ ನಮ್ಮ ಆಯಸ್ಸು ಕೂಡ ನಮಗೆ ಅರಿವಿಲ್ಲದಂತೆ ಅರ್ಧ ಮೀರಿ ಮುನ್ನಡೆದಿದೆ. ಉಳಿದ ಬದುಕಿನ ವರ್ಷಗಳನ್ನು ನಕ್ಕು ನಲಿದು ಕಳೆಯೋಣ, ಇದೆ ರೀತಿ ಪ್ರತಿ ವರ್ಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಮ್ಮ ಬಾಲ್ಯವನ್ನು ಜೀವಂತವಿರಿಸೋಣ ಎಂದರು.  

ಇನ್ನೋರ್ವ ಸಹಪಾಠಿ ಮುಧೋಳ ಶಿರಸ್ತೆದಾರ ಮಲ್ಲಯ್ಯ ಮಠದ ಮತ್ತು ಸಹಪಾಠಿ ಸಹಕಾರಿ ಕಚೇರಿ ಅಧಿಕಾರಿ ಪದ್ಮಾವತಿ ಜಮಾದಾರ ಮಾತನಾಡಿ, ಹಲವಾರು ದಶಕಗಳ ಹಿಂದೆ ಚದುರಿ, ಎಲ್ಲೆಲೋ ಇದ್ದವರನ್ನು ತಾವು ಒಂದುಗೂಡಿಸಿ, ಕಳೆದ ಬಾಲ್ಯ ಸ್ಮರಣ ಪಟಲದ ಮೇಲೆ ಹರಿದಾಡುವಂತೆ ಮಾಡಿರುವ ಸಂಘಟಕರ ಕಾರ್ಯ ಶ್ಲಾಘನೀಯ.  ಇದೆ ನೆಪದಲ್ಲಿ ತಾವು ಮತ್ತೆ ಮೂರು ವರ್ಷಗಳ ಹಿಂದೆ 2022 ಗುರು ವಂದನ ಕಾರ್ಯಕ್ರಮದೊಂದಿಗೆ ಪ್ರತಿ ವರ್ಷ ಅಂದರೆ 2023 ರಲ್ಲಿ ಸ್ನೇಹ ಸಂಭ್ರಮ, 2024 ರಲ್ಲಿ ಅಪೂರ್ವ ಸಂಗಮ ಮತ್ತು ಪ್ರಸ್ತುತ ಅಂದರೆ ನಾಲ್ಕನೇ ಬಾರಿಗೆ ಅನುರಾಗ ಸಂಗಮ ಕಾರ್ಯಕ್ರಮ ಮಾಡುವ ಮೂಲಕ ನಾವು ಒಂದಾಗಿರುವುದನ್ನು ನೋಡಿದರೆ ಇದು ನಮ್ಮ ಭಾಗ್ಯ ಅನ್ನಬೇಕು ಎನ್ನುತ್ತ ಪ್ರತಿ ವರ್ಷವೂ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.  

ವೇದಿಕೆ ಅಲಂಕರಿಸಿದ ಸಹಪಾಠಿಗಳಾದ ರತ್ನಾ ಕಡ್ಡಿಬುಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ಅರಳಿಕಟ್ಟಿ, ಉದ್ಯಮಿ ಸಂಜು ಅಂಬಿ ಮತ್ತು ಈರಯ್ಯ ಹೊಸಮಠ ಅಚ್ಚುಕಟ್ಟಾಗಿ ಏರಿ​‍್ಡಸಿದ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ವರ್ಷವೂ ಎಲ್ಲರೂ ಸೇರಿ ಅದ್ಧೂರಿ ಕಾರ್ಯಕ್ರಮ ಮಾಡೋಣ ಮುಂಚೂಣಿ ಸಂಘಟಕರಿಗೆ ತಮ್ಮ ಸಹಕಾರ ಇರಲಿ ಎಂದರು.  

ಸಹಪಾಠಿಗಳಾದ ಸುವರ್ಣ ಕುಳ್ಳೋಳ್ಳಿ, ಶೈಲಾ ಮಣ್ಣಯ್ಯನವರಮಠ, ಅನೀತ ಕರೇಹೊನ್ನ, ವಿದ್ಯಾ ಜಿಡ್ಡಿಮನಿ, ಸುಮಂಗಲಾ ಪಾವಟೆ, ಸುಜಾತಾ ಅಂಬಿ ಮತ್ತು ಶಿಕ್ಷಕ ಸಂಗಪ್ಪ ಬೆಳ್ಳುಬ್ಬಿ, ಡಾ.ಮಲ್ಲಿಕಾರ್ಜುನ ಶಿರೋಳ, ಡಾ.ದಾನಪ್ಪ ಮುಂಡಗನೂರ, ಸದಾಶಿವ ಗೊಬ್ಬರದ, ಬುರಾನ್ ತೇರದಾಳ, ಸಂಗನಗೌಡ ಪಾಟೀಲ್, ಡಾ.ಬಾಬು ಆಲಬಾಳ, ರಾಜು ನಂದೆಪ್ಪನ್ನವರ, ಸಿದ್ದು ನುಚ್ಚಿ, ಸದಾಶಿವ ರಜಪೂತ ತಮ್ಮ ಬಾಲ್ಯದ ನೆನಪು ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು.  

ಸಹಪಾಠಿ ಶಂಕರ ಕೋಳಿಗುಡ್ಡ ಡಾ.ರಾಜ ಹಾಡಿಗೆ ರೂಪಕ ನೃತ್ಯ ಪ್ರದರ್ಶಿಸಿದರೆ, ಉದ್ಯಮಿ ರಾಹುಲ್ ಅವರಾದಿ, ಬ್ಯಾಂಕ್ ವ್ಯವಸ್ಥಾಪಕ ರಮೇಶ್ ಗೋಲಭಾವಿ, ಮಾಜಿ ಯೋಧ ಬಸಯ್ಯ ಗಣಕುಮಾರ, ಗೌರಮ್ಮ ಟಿರಕಿ ಅಲ್ಲದೆ ಗಾಯಕ ಶಿವಾನಂದ ಬಿದರಿ ಹಿಂದಿ ಮತ್ತು ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ಸಹಪಾಠಿಗಳನ್ನು ರಂಜಿಸಿದರು. ಮೀರಾ ತಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.   

ಗಣ್ಯರು ಸಸಿಗೆ ನೀರುಣ್ಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಪಾಠಿಗಳೆಲ್ಲ ಮುಂಜಾನೆ ಉಪಹಾರ, ಮಧ್ಯಾಹ್ನ ಮೃಷ್ಟಾನ್ನ ಭೋಜನ, ಮಧ್ಯೆ ತಂಪು ಪಾನೀಯ, ಆಯಸ್ಕ್ರಿಮ ಮತ್ತು ಚಹಾ, ಕಾಫಿ ಬಿಸ್ಕತ್ ಸವಿದು ಒಂದು ದಿನದ ಕಾರ್ಯಕ್ರಮವನ್ನು ಸಖತ್ತಾಗಿ ಅನುಭವಿಸಿದರು. ಶಿಕ್ಷಕಿ ಸರಸ್ವತಿ ಚನಪನ್ನವರ ಮತ್ತು ರಾಮಣ್ಣ ಹೊಸಪೇಟೆ ಸ್ವಾಗತಿಸಿ, ಪಂಡಿತ ಪೂಜಾರ ನಿರೂಪಿಸಿ, ಮಹಾಲಿಂಗಪ್ಪ ತೆಗ್ಗಿ ವಂದಿಸಿದರು.