ಮುಂಬೈ, ನ 11: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೇ ಅಥವಾ ಬೇಡವೇ? ಎಂಬುದನ್ನು ಮಿತ್ರ ಪಕ್ಷ ಕಾಂಗ್ರೆಸ್ ಪಕ್ಷದೊಂದಿಗೆ ಸಮಾಲೋಚಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಶಿವಸೇನಾ ಪಕ್ಷವನ್ನು ಪ್ರತಿನಿಧಿಸುತ್ತಿರುವ ಅರವಿಂದ ಸಾವಂತ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಎನ್ ಡಿ ಎ ಮೈತ್ರಿ ಕೂಟದಿಂದ ಹೊರ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪವಾರ್, " ಯಾರೋ ರಾಜೀನಾಮೆ ನೀಡಿರುವ ಕುರಿತು ನಾನು ಯಾವುದೇ ಮಾತನಾಡುವುದಿಲ್ಲ, ಆದರೆ ಈಗ ನಾವು ಕಾಂಗ್ರೆಸ್ ಜೊತೆ ಮಾತನಾಡಲಿದ್ದೇವೆ. ಕಾಂಗ್ರೆಸ್ ಪಕ್ಷದೊಂದಿಗೆ ಚರ್ಚಿಸಿದ ನಂತರ ನಿರ್ಧಾರವನ್ನು ಪ್ರಕಟಿಸಲಿದ್ದೇವೆ ಎಂದು ಹೇಳಿದ್ದಾರೆ. ಶಿವಸೇನಾ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಮಹಾರಾಷ್ಟ್ರದಲ್ಲಿ ಅತಿದೊಡ್ಡ ಪಕ್ಷವಾಗಿದ್ದರೂ ಬಿಜೆಪಿ ಸರ್ಕಾರ ರಚಿಸಲು ಹಿಂದೇಟು ಹಾಕಿದೆ. ಈ ಹಿನ್ನಲೆಯಲ್ಲಿ, ಪವಾರ್ ಅವರು ಎನ್ಸಿಪಿಯ ಪ್ರಮುಖ ಮುಖಂಡರನ್ನು ಭೇಟಿಯಾಗಿ ರಾಜ್ಯದ ಇತ್ತೀಚಿನ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದರು. ಸಭೆಯಲ್ಲಿ ಪ್ರಫುಲ್ ಪಟೇಲ್, ಸುಪ್ರಿಯಾ ಸುಲೇ, ಅಜಿತ್ ಪವಾರ್ ಮತ್ತು ಜಯಂತ್ ಪಾಟೀಲ್ ಉಪಸ್ಥಿತರಿದ್ದರು. ಸಭೆ ಕುರಿತು ಮಾತನಾಡಿದ ಎನ್ಸಿಪಿ ವಕ್ತಾರ ನವಾಬ್ ಮಲಿಕ್ ಪಕ್ಷ ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಪಕ್ಷದ ಕೋರ್ ಕಮಿಟಿ ಸಮಿತಿ ಸಭೆ ಕರೆಯಲಾಗಿತ್ತು. ನಾವು ಸರ್ಕಾರದಲ್ಲಿ ಭಾಗಿಯಾಗಬೇಕಾದರೆ, ಮೊದಲು ಶಿವಸೇನೆ ಎನ್ಡಿಎ ಮೈತ್ರಿಕೂದಿಂದ ಹೊರಬರಬೇಕು ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೆವು. ಸರ್ಕಾರವನ್ನು ಯಾವ ಕಾರ್ಯಸೂಚಿ ಮೇಲೆ ರಚಿಸಬೇಕು ಎಂಬುದರ ಕುರಿತು ಈಗ ಚರ್ಚಿಸುತ್ತಿದ್ದೇವೆ ಎಂದರು. ಮತ್ತೊಂದೆಡೆ, ಶಿವಸೇನೆ ಜೊತೆ ಸ್ನೇಹ ಮಾಡಿಕೊಳ್ಳಬೇಕೆ ಅಥವಾ ಬೇಡವೇ? ಎಂಬ ಬಗ್ಗೆ ನಿರ್ಣಯಿಸಲು ಕಾಂಗ್ರೆಸ್ ಪಕ್ಷ ಕೋರ್ ಕಮಿಟಿ ಸಭೆ ನಡೆಸುತ್ತಿದೆ. ದೆಹಲಿಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಕಾಂಗ್ರೆಸ್ ಉನ್ನತ ನಾಯಕರು ಸಮಾವೇಶಗೊಂಡಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಎನ್ಸಿಪಿ 54 ಮತ್ತು ಕಾಂಗ್ರೆಸ್ 44 ಸ್ಥಾನ ಗೆದ್ದುಕೊಂಡಿವೆ.