ದೊಡ್ಡಾದೇವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಸಂಪನ್ನ

ದೊಡ್ಡಾದೇವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಸಂಪನ್ನ  The festival festival is in full swing at Dodda Devara Temple

ಬೈಲಹೊಂಗಲ 01:  ನಗರದ ಶ್ರೀ ದೊಡ್ಡಾದೇವರ ದೇವಸ್ಥಾನದಲ್ಲಿ ಭಜನಾ ಮಂಡಳಿ ವತಿಯಿಂದ ಜಾತ್ರಾ ಮಹೋತ್ಸವ ಹಾಗೂ ವರುಣನ ಕೃಪೆಗಾಗಿ ಆಯೋಜಿಸಲಾಗಿದ್ದ ಒಂದು ದಿನದ ನಿರಂತರ ಭಜನಾ ಕಾರ್ಯಕ್ರಮ ಬುಧವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.  ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಶ್ರೀ ದೊಡ್ಡಾದೇವರಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ಬೆಳಿಗ್ಗೆ 8 ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ ಹೋಮ-ಹವನ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ ವಿತರಿಸಲಾಯಿತು.  

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ವೇ.ಮೂ. ಮಹಾಂತಯ್ಯ ತೆಗ್ಗಿನಮಠ ಶಾಸ್ತ್ರಿಗಳು ಮಾತನಾಡಿ, ಭಗವಂತನ ಸ್ಮರಣೆ ಹಾಗೂ ಭಜನೆಯಿಂದ ಮನುಷ್ಯನ ಜೀವನದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು. ಮಠ-ಮಂದಿರಗಳಲ್ಲಿ ನಡೆಯುವ ಹೋಮ, ಹವನ, ನಿರಂತರ ಭಜನೆ, ಅಭಿಷೇಕ, ಸಹಸ್ರ ಮಂತ್ರ ಪಠಣ ಹಾಗೂ ಮಹಾಪ್ರಸಾದ ಸೇವೆಗಳಿಂದ ನಾಡಿನಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ಸಾಧ್ಯವಾಗುತ್ತದೆ ಎಂದರು.  

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ರಾಜು ಜನಟ್ಟಿ, ಮಾಜಿ ಸದಸ್ಯ ಕುಮಾರಗೌಡ ಪಾಟೀಲ ಸೇರಿದಂತೆ ಗಣ್ಯರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.  ವೇ.ಮೂ. ಸಂಜಯ ಪ್ರತಿಮಠ ಶಾಸ್ತ್ರಿಗಳು ಹಾಗೂ ವೇ.ಮೂ. ಶ್ರೀಕಾಂತ ತೆಗ್ಗಿನಮಠ ಶಾಸ್ತ್ರಿಗಳು ಶ್ರೀ ದೊಡ್ಡಾದೇವರಿಗೆ ವಿಶೇಷ ಪುಷ್ಪಾಲಂಕಾರ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.  ಜಾತ್ರಾ ಮಹೋತ್ಸವದ ಯಶಸ್ಸಿಗೆ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಭಜನಾ ಮಂಡಳಿ ಸದಸ್ಯರು ಶ್ರಮಿಸಿದರು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಧನ್ಯತಾಭಾವ ವ್ಯಕ್ತಪಡಿಸಿದರು.