ಭೂಮಿ ತಾಯಿ ಪ್ರಾರ್ಥಿಸುವ ಹಬ್ಬ ಶೀಗಿಹುಣ್ಣಿಮೆ

ಲೋಕದರ್ಶನ ವರದಿ

ಬೆಟಗೇರಿ 11: ಉತ್ತರ ಕರ್ನಾಟಕ ಭಾಗದ ಹಳ್ಳಿ ಜನರು, ರೈತರು ಹೊಲ-ಗದ್ದೆಗಳಲ್ಲಿ ಹಚ್ಚ ಹಸಿರಿನ ಬೆಳೆಗಳ ನಡುವೆ ಭೂಮಿ ತಾಯಿಯ ಪೂಜೆ, ಉಡಿ ತುಂಬಿ ಪ್ರಾರ್ಥಿಸಿ, ಚರಗ ಸಮರ್ಪಿಸುವ ಹಾಗೂ ಸಾಮೂಹಿಕ ಭೋಜನ ಸವಿಯುವ ಪರಂಪರೆಯ ಪ್ರತೀಕದ ಹಬ್ಬವೇ ಎಳ್ಳ ಅಮವಾಸ್ಯೆ ಹಾಗೂ ಶೀಗಿಹುಣ್ಣಿಮೆ. ಈ ದಿನಗಳೆರಡೂ ರೈತಾಪಿ ಜನರಿಗೆ ಸಂಭ್ರಮದ ಸುದಿನಗಳು. 

    ಅದರಲ್ಲೂ ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾವಿ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಕೃಷಿಕರು, ರೈತರು ತಮ್ಮ ಹೊಲ-ಗದ್ದೆಗಳಲ್ಲಿ ಈ ವರ್ಷ ಇದೇ ಶನಿವಾರ ಅ.12 ರಂದು ವಿಶೇಷವಾಗಿ ಶೀಗಿಹುಣ್ಣಿಮೆ ದಿನವನ್ನು ಸಡಗರದಿಂದ ಆಚರಿಸುತ್ತಾರೆ. ಶೀಗಿಹುಣ್ಣಿಮೆ ದಿನದಂದು ಈ ಭಾಗದ ಎಲ್ಲರ ಮನೆಗಳಲ್ಲಿ ಅತ್ಯಂತ ಸಡಗರ ಸಂಭ್ರಮದ ಹಬ್ಬದ ವಾತಾವರಣ ನಿರ್ಮಾಣಗೊಂಡಿರುತ್ತದೆ.

ಮೃಷ್ಟಾನ್ನ ಭೂಜನ: ಈ ಭಾಗದ ಎಲ್ಲರ ಮನೆಯಲ್ಲಿ ಶೀಗಿಹುಣ್ಣಿಮೆ ದಿನದಂದು ಮಾಡುವ ವಿಶೇಷ ಖಾದ್ಯಗಳಿಗೆ ಕೊನೆಯಿಲ್ಲ. ಸುಮಂಗಲೆಯರು ತಮ್ಮ ಮನೆಗಳಲ್ಲಿ ಅಂದು ಬೆಳಿಗ್ಗೆ ಮನೆ ಶುಚಿಗೊಳಿಸಿ ಪೂಜೆ ಪುನಸ್ಕಾರದೊಂದಿಗೆ ತಮ್ಮ ತಮ್ಮ ಮನೆಗಳಲ್ಲಿ ಕಡಕ್ ರೊಟ್ಟಿ, ಶೆಂಗಾ ಚಟ್ನಿ, ಗುರೆಳ್ಳ ಚಟ್ನಿ, ಹೊಳಿಗೆ, ಕಡಬು, ಖಚರ್ಿ ಕಾಯಿ, ಸೆಂಡಿಗೆ, ಸಜ್ಜಿ ರೊಟ್ಟಿ, ವಿವಿಧ ಹಿಂಡಿ, ಕಾಳು ಪಲ್ಯೆ ಹೀಗೆ ಹಲವಾರು ತರಹದ ರುಚಿ ಕಟ್ಟಾದ ಗಮಗಮಿಸುವ ವಿವಿಧ ಖಾದ್ಯಗಳ ಅಡುಗೆ ತಯಾರಿಸಿ, ಹೊಲ-ಗದ್ದೆಗೆ ಹೋಗಿ ಹಸಿರು ಹಸಿರು ಸೀರೆಯನ್ನುಟ್ಟ ಭೂ ತಾಯಿಗೆ ಉಡಿ ತುಂಬಿ, ಪೂಜಿಸಿ, ನಮಸ್ಕರಿಸಿ, ಎಲ್ಲರೂ ಒಂದಡೆ ಕುಳಿತು ಮೃಷ್ಟಾನ್ನ ಭೂಜನ ಸವೆಯುವ ರೈತಜೀವಗಳಿಗೆ ಭೂಮಿ ತಾಯಿ ಪ್ರಾರ್ಥಿಸುವ ಭಕ್ತಿಭಾವ ಪ್ರತೀಕದ ಹಬ್ಬವಾಗಿದೆ. 

      ಅಂದು ಬೆಳಗಿನ ಜಾವ ಎಲ್ಲರೂ ತಮ್ಮ ತಮ್ಮ ಹೊಲ-ಗದ್ದೆಗಳಿಗೆ ಹೋಗಲು ಎತ್ತುಗಳನ್ನು ಶೃಂಗರಿಸಿ ಬಂಡಿ(ಎತ್ತಿನ ಗಾಡಿ) ಹೂಡಿಕೊಂಡು ಹೊಲಗಳಿಗೆ ಹೋರಟರೇ ದಾರಿಯ ಮಧ್ಯ ಎತ್ತುಗಳ ಕೊರಳಲ್ಲಿ ಕಟ್ಟಿದ ಗಜ್ಜೆಯ ನಾದ, ಹಳ್ಳಿ ಸೋಗಡಿನ ಜಾನಪದ ಗೀತೆಗಳ ನಿನಾದ ತಂತಾನೆ ಎಲ್ಲೆಡೆ ಕೇಳಿ ಬರುತ್ತಿರುತ್ತದೆ. ಇಂದಿಗೂ ಸಹ ಸಮೀಪದ ಹೊಲ-ಗದ್ದೆಗಳಿಗೆ ಕಾಲ್ನಡೆಗೆಯಲ್ಲಿ, ಸೈಕಲ್ ಮೊಟಾರ್ಗಳಲ್ಲಿ, ಎತ್ತಿನ ಗಾಡಿ(ಬಂಡಿ) ಹೊಡಿಕೊಂಡು ಹೋಗುತ್ತಾರೆ. ಅಷ್ಟೇ ಅಲ್ಲದೇ ಶೀಗಿ ಹುಣ್ಣಿಮೆ ಬಂತು ಅಂದರೆ ತವರು ಮನೆಯ ಖರ್ಜಿಕಾಯಿ ಡಬ್ಬಿಯ (ತವರೂರಿನ) ದಾರಿ ನೋಡುವ ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಬೀಗ-ಬಿಜ್ಜರ ಊರುಗಳಿಗೆ ಸಂಬಂಧಿಕರು ಖರ್ಜಿಕಾಯಿ ಒಯ್ದು ಕೊಡುವ, ಮರಳಿ ತರುವ ಸಂಪ್ರದಾಯ ಈಗಲೂ ಈ ಕರದಂಟೂ ನಾಡಿನ ಜನರಲ್ಲಿದೆ.

ಭೂಮಿ ತಾಯಿಯ ಆರಾಧನೆ: ಹೊಲಕ್ಕೆ ತೆರಳಿದ ಮಹಿಳೆಯರು ಅಡುಗೆ ಬಿಚ್ಚಿಟ್ಟು ಹೊಲದಲ್ಲಿರುವ ಐದು ಜೋಳದ ದಂಟು, ಚಿಕ್ಕ ಐದು (ಪಂಚ ಪಾಂಡವರು) ಕಲ್ಲುಗಳನ್ನು ಹುಡುಕಿ ತಂದು ಪೂಜಿಸಿ, ಭೂತಾಯಿಗೆ ಪ್ರಾರ್ಥಿಸಿ, ಉಡಿತುಂಬಿ, ನೈವೇದ್ಯ ಅರ್ಪಿಸಿದ ಬಳಿಕ ಹೊಲದ ತುಂಬೆಲ್ಲ ನೈವೇದ್ಯ ರೂಪದಲ್ಲಿರುವ ಮೃಷ್ಟಾನ್ನ ಎಡೆಯನ್ನು ಚರಗ ಚಲ್ಲುತ್ತಾರೆ. ಹೊಲಕ್ಕೆ ಹೋದ ಮನೆಮಂದಿ, ಬೀಗರು, ಬಿಜ್ಜರು ಹಾಗೂ ಅಕ್ಕ-ಪಕ್ಕದ ಮನೆಯವರು ಅಷ್ಟೇ ಅಲ್ಲದೇ ಅಪರಿಚಿತ ಜನರು ಸಹ ಒಟ್ಟಿಗೆ ಕುಳಿತು ಭೋಜನ ಸವಿಯುವದೆ ಒಂದು ಸಂಭ್ರಮ.