ಆರ್ಥಿಕ ಪರಿಸ್ಥಿತಿ ಗಂಭೀರ, ಬಂಗಾರ ಒತ್ತೆ ಇಡುವ ಸ್ಥಿತಿ ನಿರ್ಮಾಣವಾಗಲಿದೆ: ಯು.ಟಿ. ಖಾದರ್

U T KHADAR

ಬೆಂಗಳೂರು, ನ 28-ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದ ಜನ ಸಾಮಾನ್ಯರು ಬಾಧಿತರಾಗಿದ್ದು, ಮನೆಯ ಡಬ್ಬಿಯಲ್ಲಿ ಮನೆ ಬಳಕೆಗಾಗಿ ಮೀಸಲಿಟ್ಟ ಹಣವನ್ನು ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಿಸರ್ವ್ ಬ್ಯಾಂಕ್ ನಲ್ಲಿದ್ದ ನಿಧಿಯನ್ನು ಕೇಂದ್ರ ತನಗಾಗಿ ಬಳಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಜನ ಸಾಮಾನ್ಯರು ಬಂಗಾರವನ್ನೂ ಒತ್ತೆ ಇಡುವ ಪರಿಸ್ಥಿತಿ ಎದುರಾಗಲಿದೆ. 

ಸಾರ್ವಜನಿಕ ಉದ್ಯಮಗಳನ್ನು ಖಾಸಗಿಕರಣ ಮಾಡುತ್ತಿದ್ದು, ದೇಶದ ಹೆಮ್ಮೆಯ ಭಾರತೀಯ ತೈಲ ಕಂಪೆನಿಗಳನ್ನು ಸಹ ದೇಶಿ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ವಿದೇಶದಲ್ಲಿರುವ ಕಂಪೆನಿಗಳು  ಯಾರ ಬೇನಾಮಿ ಹೆಸರಿನಲ್ಲಿದೆ ಎನ್ನುವುದನ್ನು ಬಿಜೆಪಿ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು. 

ಸಾರ್ವಜನಿಕ ಕಂಪನಿಗಳನ್ನು ಖಾಸಗೀಕರಣಗೊಳಿಸಿರುವ ಮತ್ತು ಖಾಸಗೀಕರಣ ಮಾಡುತ್ತಿರುವ ಕುರಿತು ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು. ದೇಶದ ಪರಿಸ್ಥಿತಿ ಅಧೋಗತಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು. 

ಕೇಂದ್ರದ ಬಿಜೆಪಿ ಸರ್ಕಾರ ದೂರ ದೃಷ್ಟಿಯಿಲ್ಲದ ಸರ್ಕಾರವಾಗಿದೆ. ಹಲವು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ.  ರೈಲ್ವೆ ನಿಲ್ದಾಣಗಳ ನಿರ್ವಹಣೆ ಖಾಸಗಿಯವರ ಪಾಲಾಗುತ್ತಿದೆ. ಮಂಗಳೂರು ವಿಮಾನನಿಲ್ದಾಣವನ್ನು ಸಹ ಖಾಸಗಿಯವರಿಗೆ ನಿರ್ವಹಣೆಗಾಗಿ ಕೊಡುತ್ತಿದ್ದಾರೆ. ದೇಶದಲ್ಲಿ ಅತ್ಯಂತ ಆತಂಕದ ಪರಿಸ್ಥಿತಿಯನ್ನು ಬಿಜೆಪಿಯವರು ನಿರ್ಮಿಸುತ್ತಿದ್ದಾರೆ ಎಂದರು. 

ಮಹಾರಾಷ್ಟ್ರದಲ್ಲಿ  ಫಡ್ನವಿಸ್ ರಾತ್ರೋ ರಾತ್ರಿ ಪ್ರಮಾಣ ವಚನ ಸ್ವೀಕರಿಸುವ ಅಗತ್ಯ ಏನಿತ್ತು. ಹರಿಯಾಣದಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟರೆ ಅವರ ಕುಟುಂಬದವರಿಗೆ ಜಾಮೀನು ದೊರಯುತ್ತದೆ. ಈ ದೇಶದಲ್ಲಿ ಯಾವ ಸರ್ಕಾರ ನಡೆಯುತ್ತಿದೆ ಎಂಬ ಆತಂಕವಿದೆ. ಇಲ್ಲಿ ಪ್ರಜಾಪ್ರಭುತ್ವದ ಸರ್ಕಾರ ಇಲ್ಲ ಇದು ಹಿಟ್ಲರ್ ಸರ್ಕಾರ ಎಂದು ಕಿಡಿಕಾರಿದರು.

ಬಿಜೆಪಿಯವರು ತಮ್ಮ ಸಾಧನೆ ತೋರಿಸಿ ಮತ ಪಡೆಯುವ ಪರಿಸ್ಥಿತಿ ಇಲ್ಲ. ಚುನಾವಣೆಯಲ್ಲಿ ಪಾಕಿಸ್ತಾನ ತೋರಿಸಿ ಮತ ಕೇಳುತ್ತಾರೆ. ಭಾವನಾತ್ಮಕ ವಿಷಯ ಮುಂದಿಟ್ಟು ಚುನಾವಣೆ ಎದುರಿಸುತ್ತಾರೆ. ರಾಜ್ಯದಲ್ಲಿ ಜನರ ವಿರೋಧಿ ಸರ್ಕಾರ ನಡೆಯುತ್ತಿದೆ. ಫಲಾನುಭವಿಗಳಿಗೆ ನೀಡಿರುವ ಚೆಕ್ ಗಳು ಬೌನ್ಸ್ ಆಗುತ್ತಿವೆ .ಖಾಸಗಿ ಬಂಡವಾಳಶಾಹಿಗಳ ಪರವಾಗಿರುವ ಬಿಜೆಪಿ ಸರ್ಕಾರದ ನಿಲುವುಗಳನ್ನು ಜನ ಒಪ್ಪುವುದಿಲ್ಲ. ಹರಿಯಾಣ, ಮಹಾರಾಷ್ಟ್ರ ದ ರೀತಿಯಲ್ಲಿ ರಾಜ್ಯದ ಜನರು ತೀರ್ಪು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಬೇಕು ಎಂದು ಖಾದರ್ ಅಭಿಪ್ರಾಯಪಟ್ಟರು.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಡ್ ಮಧ್ಯರಾತ್ರಿ ಅಧಿಕಾರ ಹಿಡಿಯಲು ಹೋಗಿದ್ದರು. ಎಲ್ಲರು ಮಲಗಿರುವಾಗ ಇವರು ಅಧಿಕಾರ ಹಿಡಿಯಲು ಪ್ರಯತ್ನ ಮಾಡುತ್ತಾರೆ. ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳನ್ನು ಇವರು ಗಾಳಿಗೆ ತೂರಿದ್ದಾರೆ ಎಂದರು.

ಅಲ್ಪಸಂಖ್ಯಾತ ನಾಯಕರು ತಮಗೆ ಜವಾಬ್ದಾರಿ ನೀಡಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಅನರ್ಹ ಶಾಸಕರು ಚುನಾವನೆಗೆ ಸ್ಪರ್ಧಿಸಿದ್ದು, ಇವರನ್ನು ಸುಪ್ರೀಂ ಕೋರ್ಟ್ ಸಹ ಯೋಗ್ಯತೆ ಇಲ್ಲದವರು ಎಂದು ಹೇಳಿದೆ. ಹೀಗಾಗಿ ಮತದಾರರು ಇವರನ್ನು ಸೋಲಿಸಬೇಕು ಎಂದು ಕರೆ ನೀಡಿದರು. 

ಉಪಚುನಾವಣೆ ನಡೆಯುತ್ತರುವ ಎಲ್ಲಾ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುಲಿದ್ದು, ಇದರಲ್ಲಿ ಯಾವುದೆ ಅನುಮಾನ ಬೇಡ .ಅನರ್ಹರನ್ನು ಜನರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಬಿಜೆಪಿ ಸರ್ಕಾರ ಬಡಪರ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಕ್ರಮಗಳನ್ನು ಕಡಿತಮಾಡುತ್ತಿದ್ದು ರಾಜ್ಯದಲ್ಲಿರುವುದು ಕರುಣೆಯಿಲ್ಲದ ಕಟುಕ ಸರ್ಕಾರ ಎಂದು ಖಾದರ್ ಕಿಡಿಕಾರಿದರು.

ನೆರೆ ಪೀಡಿತರಿಗೆ ಸಮರ್ಪಕ‌ ಪರಿಹಾರ ಕೊಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಆದರೆ  ರಾಜಕೀಯವಾಗಿ ಮಾತ್ರ ಚೆನ್ನಾಗಿ ಖರ್ಚು ಮಾಡುತ್ತಿದ್ದಾರೆ .ಖಾಸಗಿ ವಲಯದ ಹಿಡಿತದಲ್ಲಿ  ಕೇಂದ್ರ ಸರ್ಕಾರವಿದ್ದು, ಹರಿಯಾಣ, ಮಹಾರಾಷ್ಟ್ರದಲ್ಲಿ ಮತದಾರರು ಕೊಟ್ಟ ಸಂದೇಶವನ್ನು ರಾಜ್ಯದ  ಉಪಚುನಾವಣೆಯಲ್ಲಿ ಕೊಡಬೇಕು ಎಂದು ಯು‌.ಟಿ.ಖಾದರ್‌ ಮನವಿ ಮಾಡಿದರು.