ವೈದ್ಯನಿಗೆ ರೋಗಿಯ ಮಗನಿಂದ ಏಳು ಬಾರಿ ಚಾಕು ಇರಿತ
ಚೆನ್ನೈ 13: ಚೆನ್ನೈನ ಕಲೈಂಜರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸಂಕಟದ ಘಟನೆಯೊಂದರಲ್ಲಿ, ಖ್ಯಾತ ವೈದ್ಯಕೀಯ ಆಂಕೊಲಾಜಿಸ್ಟ್ ಡಾ.ಬಾಲಾಜಿ ಜಗನಾಥನ್ ಅವರ ಮೇಲೆ 26 ವರ್ಷದ ರೋಗಿಯ ಮಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ವೈದ್ಯ ಡಾ.ಬಾಲಾಜಿ ಅವರಿಗೆ ಏಳು ಇರಿತದ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ, ಚೆನ್ನೈ ನಿವಾಸಿ ವಿಘ್ನೇಶ್ ಎಂಬಾತನನ್ನು ಬಂಧಿಸಲಾಗಿದೆ. ಆತನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕ್ಯಾನ್ಸರ್ ವಾರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಡಾ.ಬಾಲಾಜಿ ಕೆಲಸ ಮಾಡುತ್ತಿದ್ದ ವೇಳೆ ವಿಘ್ನೇಶ್ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಾತನಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ನಮ್ಮ ಸರ್ಕಾರಿ ವೈದ್ಯರ ನಿಸ್ವಾರ್ಥ ಕೆಲಸ ಅಪಾರವಾಗಿದೆ, ಅವರ ಸುರಕ್ಷತೆಯನ್ನು ಖಚಿತಪಡಿಸುವುದು ನಮ್ಮ ಕರ್ತವ್ಯ, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.