ಚಾಮರಾಜನಗರ, ಫೆ.29 : ಕಬ್ಬಿನ ಗದ್ದಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ಜೋಡಿ ಆನೆಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಆಹಾರ ಹುಡುಕುತ್ತಾ ಎರಡು ಆನೆಗಳು ಇಲ್ಲಿನ ತಾಳವಾಡಿ ಸಮೀಪದ ಕರಳವಾಡಿ ಗ್ರಾಮಕ್ಕೆ ಆಗಮಿಸಿದೆ. ಅಲ್ಲಿನ ಕರುಪ್ಪು ಸ್ವಾಮಿ ಎಂಬವರ ಜಮೀನಿಗೆ ನುಗ್ಗಿದ ಆನೆಗಳು ಫಸಲು ತಿನ್ನುತ್ತಾ ಮುನ್ನುಗ್ಗುತ್ತಿದ್ದಾಗ ಕಬ್ಬಿನ ಗದ್ದೆಗೆ ಹಾಕಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಎರಡೂ ಆನೆಗಳು ಸಾವನ್ನಪ್ಪಿವೆ.
ಕರಳವಾಡಿ ಗ್ರಾಮ ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದಲ್ಲಿದ್ದು, ಇಲ್ಲಿಗೆ ವನ್ಯಜೀವಿಗಳು ಆಗಾಗ್ಗ ಬರುತ್ತಿರುವುದು ಸಾಮಾನ್ಯವಾಗಿದೆ. ಗ್ರಾಮದ ರೈತರು ತಮ್ಮ ಬೆಳೆಗಳನ್ನು ವನ್ಯಜೀವಿಗಳಿಂದ ರಕ್ಷಿಸಿಕೊಳ್ಳಲು ಗದ್ದೆ, ತೋಟಗಳಿಗೆ ವಿದ್ಯುತ್ ತಂತಿ ಅಳವಡಿಸಿಕೊಂಡಿರುತ್ತಾರೆ. ಆದರೆ ಮೂಕ ಪ್ರಾಣಿಗಳು ಅವುಗಳನ್ನು ತುಳಿದು ಸಾವನ್ನಪ್ಪಿವೆ.
ಜಾಮೀನು ಮಾಲೀಕ ಅಕ್ರಮವಾಗಿ ಗದ್ದೆಗೆ ವಿದ್ಯುತ್ ತಂತಿ ಅಳವಡಿಸಿದ್ದರು ಎಂದು ಮೂಲಗಳು ತಿಳಿಸಿವೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಮೀನು ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಜಮೀನಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಆನೆಗಳ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.