ನುಡಿದಂತೆ ನಡೆಯುವುದು ಶರಣ ಸಂಸ್ಕೃತಿ

ನುಡಿದಂತೆ ನಡೆಯುವುದು ಶರಣ ಸಂಸ್ಕೃತಿ The culture of surrender is to walk the talk

  

ಹೂವಿನಡಗಲಿ 06:   ನುಡಿದಂತೆ ನಡೆಯುವುದು, ಕಾಯಕ- ದಾಸೋಹದಲ್ಲಿ ಶ್ರದ್ಧೆ ಹೊಂದಿರುವುದು ಶರಣ ಸಂಸ್ಕೃತಿಯಾಗಿದೆ ಎಂದು ಕಪ್ಪತ್ತಗಿರಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಮ ಇಟ್ಟಗಿಮಠ ಅಭಿಪ್ರಾಯ ಪಟ್ಟರು.  ಪಟ್ಟಣದ ಗವಿಸಿದ್ದೇಶ್ವರ ಶಾಖಾ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ 210ನೇ ಮಾಸಿಕ ಶಿವಾನುಭವ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಜಿ.ಬಿ. ಲಿಂಗನಗೌಡರ ಸ್ಮರಣಾರ್ಥ ದತ್ತಿ, ಜ್ಯೋತಿ ಬಸವಪ್ಪ ಸ್ಮರಣಾರ್ಥ ದತ್ತಿ, ಶ್ರೀಮತಿ ಲಕ್ಷ್ಮಿ ನರಸಿಂಹಪ್ಪ ಸುಬ್ರಾಯ ದಿವಾಕರ ಸ್ಮರಣಾರ್ಥ   

 ದತ್ತಿ,  ಎನ್‌.ಆರ್‌. ಶಿವ ನಾಗಪ್ಪಗೌಡ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ’ಶರಣ ಸಂಸ್ಕೃತಿ ಮತ್ತು ಪ್ರಸ್ತುತ ಸಮಾಜ’ ವಿಷಯ ಕುರಿತು ಮಾತನಾಡಿದರು. ಪ್ರಸ್ತುತ ಸಮಾಜವು ಶರಣ ಸಂಸ್ಕೃತಿಯಿಂದ ವಿಮುಖಗೊಂಡಿರುವುದು ವಿಷಾದದ ಸಂಗತಿ. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಮಕ್ಕಳಿಗೆ, ಯುವಕರಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಅತ್ಯಗತ್ಯ ಎಂದರು. ನಿವೃತ್ತ ಡಿವೈಎಸ್ ಪಿ  ಆರ್‌.ಎಸ್ .ಪಾಟೀಲ್ ಮಾತನಾಡಿ ನುಡಿದಂತೆ ನಡೆಯುವುದು, ನಡೆದಂತೆ ನುಡಿಯುವುದು, ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸುವುದು ಶರಣ ಸಂಸ್ಕೃತಿ. ಪ್ರಸ್ತುತ ಸಮಾಜ ಮೌಲ್ಯರಹಿತವಾಗಿ, ಡಾಂಭಿಕತನದ ಆಕರ್ಷಣೆಗೆ ಒಳಗಾಗುತ್ತಿರುವುದು ಖೇದಕರ. ಶರಣರ ಸಮಾಜೋಧಾರ್ಮಿಕ ಪರಿಕಲ್ಪನೆ ಅನುಕರಣೀಯವೆಂದರು ಆಧ್ಯಾತ್ಮಿಕ ಚಿಂತನೆಗೆ ಷಟಸ್ಥಲ,ಅಷ್ಟಾವರಣ ಪೂರಕ ಎಂದರು.  ಜಿ. ಪಂ. ಮಾಜಿ ಅಧ್ಯಕ್ಷರಾದ ಬರದೂರು ಗ್ರಾಮದ ವೀರನಗೌಡ ನಾಡಗೌಡ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕ ಪಿ.ಎಂ. ಬಸವಲಿಂಗಯ್ಯ ಸಿದ್ಧಪಡಿಸಿದ ’ವಿದ್ಯಾರ್ಥಿ ಚೇತನ ಕನ್ನಡ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.  

ಪುಸ್ತಕದ ಕುರಿತು ಪಿ.ಎಂ. ಈಶ್ವರಯ್ಯ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿಗೆ ಭಾಜನವಾದ ಪಟ್ಟಣದ ಟಿಎಪಿಸಿಎಂಎಸ್ ನ ವ್ಯವಸ್ಥಾಪಕರಾದ ಸೊಪ್ಪಿನ ವೀರಣ್ಣ ಇವರಿಗೆ ಹಾಗೂ ಪಟ್ಟಣದ  ವಿವಿದೋಧ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ   (ಆರ್ ಎಸ್ ಎಸ್ ಎನ್) ಆಯ್ಕೆಯಾದ ನೂತನ ಸದಸ್ಯರಿಗೆ, ದಾಸೋಹ ಸೇವೆಗೈದ ಭಕ್ತರಿಗೆ ಗುರುರಕ್ಷೆ ನೀಡಲಾಯಿತು.         

ಎಸ್‌.ಸಂತೋಷ್ ಸ್ಮರಣಾರ್ಥ ಶ್ರೀಮಠದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನಿಗಳನ್ನು ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಘಟಕದ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿರೂಪಾಕ್ಷಯ್ಯ ಚನ್ನಬಸಯ್ಯ ಹಳ್ಳಿಕೇರಿ, ಯಶವಂತ ದೇವರು ಮಹಾಲಿಂಗಪುರ,ಅರವಿಂದ ಲಿಂಗನಗೌಡರ, ಕನ್ನಿಹಳ್ಳಿ ಪರಮೇಶ್ವರ​‍್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಾನಿಧ್ಯವನ್ನು ಮ.ನಿ.ಪ್ರ. ಡಾ.ಹಿರಿಶಾಂತವೀರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಆರಂಭದಲ್ಲಿ ಶ್ರೀಮಠದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟಿ.ಎಂ. ನಾಗಭೂಷಣ ಸ್ವಾಗತಿಸಿದರು. ಉಪನ್ಯಾಸಕ ಚನ್ನಬಸಯ್ಯ ವಂದಿಸಿದರು. ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.