ಕೂಲಿ ಕಾರ್ಮಿಕರ ವಲಸೆ ತಡೆಗೆ ನರೇಗಾ ಯೋಜನೆ ಸಹಕಾರಿ: ಪೂಜಾರ

ಕೂಲಿ ಕಾರ್ಮಿಕರ ವಲಸೆ ತಡೆಗೆ ನರೇಗಾ ಯೋಜನೆ ಸಹಕಾರಿ: ಪೂಜಾರ  NREGA scheme helps curb migration of wage laborers: Pujara

ಗದಗ, ಆ.11: ಕೂಲಿ ಕಾರ್ಮಿಕರ ವಲಸೆ ತಡೆಗಟ್ಟುವುದು, ಗ್ರಾಮೀಣ ಭಾಗದ ಸಂಪನ್ಮೂಲಗಳ ಸಂರಕ್ಷಣೆ, ಮಣ್ಣು ಮತ್ತು ನೀರಿನ ಸಂರಕ್ಷಣೆ ಹಾಗೂ ಜಲಮೂಲಗಳ ಅಭಿವೃದ್ಧಿಯ ಜೊತೆಗೆ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಾಲೂಕು ಸಹಾಯಕ ನಿರ್ದೇಶಕ (ನರೇಗಾ) ಕುಮಾರ ಪೂಜಾರ ಹೇಳಿದರು.  

ಗದಗ ತಾಲೂಕಿನ ಅಂಟೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.  ನರೇಗಾ ಯೋಜನೆಯಡಿ ಕೂಲಿ ಮೊತ್ತವನ್ನು ರೂ.382ಕ್ಕೆ ಹೆಚ್ಚಿಸಲಾಗಿದ್ದು, ಎನ್‌ಎಂಎಂಎಸ್ ತಂತ್ರಾಂಶದ ಮೂಲಕ ದಿನಕ್ಕೆ ಎರಡು ಬಾರಿ ಹಾಜರಾತಿ ದಾಖಲಿಸಿ, ಅಳತೆಯ ಆಧಾರದ ಮೇಲೆ ಕೂಲಿ ಪಾವತಿಸಲಾಗುತ್ತದೆ. ಕೂಲಿ ಪಾವತಿಯಲ್ಲಿ ಗಂಡು-ಹೆಣ್ಣು ಎಂಬ ಯಾವುದೇ ವ್ಯತ್ಯಾಸವಿಲ್ಲದೆ ಸಮಾನ ವೇತನ ನೀಡಲಾಗುತ್ತದೆ. ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.  

ಸಹಾಯಕ ನಿರ್ದೇಶಕ (ಪಂಚಾಯತ್ ರಾಜ್) ಶಿವಕುಮಾರ ವಾಲಿ ಮಾತನಾಡಿ, ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಬಡ ಹಾಗೂ ಅಕುಶಲ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ. ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಪ್ರತಿದಿನ ಎರಡು ಬಾರಿ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.  

ಅಂಟೂರು-ಬೆಂತೂರು ಗ್ರಾಮದ ಭೂದೀಶ್ವರ ಸಂಸ್ಥಾನ ಮಠದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶಗೌಡ ಪಾಟೀಲ, ಕಾರ್ಯದರ್ಶಿ ಶಾಂತಯ್ಯ ಪ್ರಭಯ್ಯನಮಠ, ಟಿಎಇ ಪ್ರದೀಪ್ ನರೇಗಲ್ಲ, ಗ್ರಾಮ ಪಂಚಾಯಿತಿ ಸಿಬ್ಬಂದಿ ಮಹಾತೇಶ ಮಜ್ಜಿಗುಡ್ಡ, ಅಶೋಕ ಜಿನಗಿ, ಬಿಎಫ್ಟಿ ದಾವಲಸಾಬ್ ಚಲಮರದ, ಕಾಮಗಾರಿ ಬಂಧುಗಳು, ಕೂಲಿಕಾರರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.