ಲೋಕದರ್ಶನ ವರದಿ
ರಾಯಬಾಗ: ತಾಲೂಕಿನ ಬಹುತೇಕ ಕಡೆ ರವಿವಾರ ರಾತ್ರಿ ಕೂಡ ಮಳೆರಾಯ ತನ್ನ ಆರ್ಭಟವನ್ನು ತೋರಿಸಿದ್ದು, ಕೆರೆಕಟ್ಟೆಗಳು ತುಂಬಿ ತುಳುಕುತ್ತಿದ್ದು, ರೈತರ ಜಮೀನುಗಳಲ್ಲಿನ ಬೆಳೆಗಳು ನೀರಿನಲ್ಲಿ ನಿಂತಿವೆ.
ರವಿವಾರ ಹಗಲಿನಲ್ಲಿ ಬಿಟ್ಟು ಬಿಟ್ಟು ಸುರಿದ ಮಳೆ, ರಾತ್ರಿಯಿಡಿ ಜೋರಾಗಿ ಸುರಿದೆ. ತಾಲೂಕಿನ ಜನರು ಮಳೆಗೆ ತತ್ತರಿಸಿದ್ದು, ರೈತರು ತಾವು ಬೆಳೆದ ಅಲ್ಪಾವಧಿ ಬೆಳೆಗಳು ಕಟಾವಿಗೆ ಬಂದಿದ್ದು, ಕೈಗೆ ನಿಲುವುದೊ, ಇಲ್ಲವೊ ಅನ್ನುವ ಆತಂಕದಲ್ಲಿದ್ದಾರೆ.
ತಾಲೂಕಿನ ಕೆಲವೊಂದು ಗ್ರಾಮಗಳ ತೋಟಪಟ್ಟಿಗಳಲ್ಲಿರುವ ರೈತರ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಸತತ 2-3 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ರೈತರ ಭೂಮಿ ಜವಳು (ಜೌಗ ಹತ್ತುತ್ತಿವೆ) ಆಗುತ್ತಿವೆ ಎಂದು ನಿಡಗುಂದಿ ಗ್ರಾಮದ ರೈತ ಹೌಸೆಂದ್ರ ಖೆಮಲಾಪೂರೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಮಳೆ ಮುಂದುವರೆದರೆ ಅಲ್ಪಾವಧಿ ಬೆಳೆಗಳಾದ ಗೋವಿನಜೋಳ, ಶೇಂಗಾ, ಅರಸಿನ, ಸೋಯಾಬೀನ್, ಚೆಂಡು ಹೂ, ನೆಲಕಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ. ಸೋಮವಾರ ಸಹಿತ ಎಲ್ಲೆಡೆ ದಟ್ಟ ಮೋಡಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ಮಳೆಯಾಗುವ ಸಂಭವವಿದೆ.
ತಾಲೂಕಿನ ನಿಡಗುಂದಿ, ಮೊರಬ, ಬಾವನಸೌಂದತ್ತಿ, ದಿಗ್ಗೇವಾಡಿ, ನಸಲಾಪೂರ, ಭಿರಡಿ, ಶಿರಗೂರ, ಗುಂಡೆವಾಡಿ ಗ್ರಾಮಗಳು ಸೇರಿದಂತೆ ಬಹುತೇಕ ತಾಲೂಕಾದ್ಯಾಂತ ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದ ವರದಿಯಾಗಿದೆ.
ಬಾವನಸೌಂದತ್ತಿ ಗ್ರಾಮದಲ್ಲಿ ತೋಟದ ಮನೆಗಳಲ್ಲಿ ನೀರು ನುಗ್ಗಿದೆ. ನಿಡಗುಂದಿ ಹಳ್ಳ ಮಳೆಯಿಂದ ಉಕ್ಕಿ ಹರಿಯುತ್ತಿದೆ. ಗ್ರಾಮೀಣ ಭಾಗದ ಹಂಚಿನ ಮನೆಗಳು ಸೋರಿ, ಮನೆಯಲಿದ್ದ ಜನರು ಇಡೀ ರಾತ್ರಿ ಜಾಗರಣೆ ಮಾಡುವಂತಾಗಿದೆ.
ತಾಲೂಕಿನಲ್ಲಿ ರವಿವಾರದಂದು (11 ಮಿ.ಮಿ) ಸುರಿದ ಮಳೆ ವಾಡಿಕೆಗಿಂತ ಪ್ರತಿಶತ 217 ನಷ್ಟು ಹೆಚ್ಚು ಮಳೆಯಾದ ದಾಖಲೆಯಾಗಿದೆ.
ಅ.13 ರಿಂದ 19 ರವರೆಗೆ ರಾಯಬಾಗ ಹೊಬಳಿಯಲ್ಲಿ 33 ಮಿ.ಮಿ ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.103 ಹೆಚ್ಚು ಮಳೆಯಾಗಿದೆ. ಕುಡಚಿ ಹೊಬಳಿಯಲ್ಲಿ 35 ಮಿ.ಮಿ ನಷ್ಟು ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ.122 ರಷ್ಟು ಹೆಚ್ಚು ಮಳೆಯಾಗಿರುವುದಾಗಿ ಮಳೆ ಮಾಪನ ಇಲಾಖೆ ವರದಿ ನೀಡಿದೆ.