ಬೆಂಗಳೂರು, ಸೆ 7 ದೇಶ ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ. ಚಂದ್ರಯಾನ ಯೋಜನೆಗಾಗಿ ಹಗಲಿರುಳು ಶ್ರಮವಹಿಸಿದ್ದೀರಿ. ನಮಗೆ ಸ್ವಲ್ಪ ಹಿನ್ನೆಡೆಯಾಗಿದೆ. ಇದರಿಂದ ವಿಚಲಿತರಾಗಬೇಕಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ಅಲ್ಪಮಟ್ಟದ ಅಡ್ಡಿಯಾಗಿದೆ. ಇದು ನಮ್ಮ ವಿಜ್ಞಾನಿಗಳ ದೌರ್ಬಲ್ಯವಲ್ಲ. ಇದರಿಂದ ಮತ್ತಷ್ಟು ಸವಾಲುಗಳನ್ನು ಎದುರಿಸುವ ಧೈರ್ಯ ಬಂದಿದೆ. ಚಂದ್ರನ ಬಗ್ಗೆ ಸಾಹಿತಿಗಳು ಹೇಳಿದ ಮಾತನ್ನು ನಿಜ ಮಾಡಲು ಹೊರಟ ಸಾಧನೆ ಅಪ್ರತಿಮವಾದದ್ದು ಎಂದು ಕೊಂಡಾಡಿದ್ದಾರೆ. ನಿಮ್ಮ ಕನಸಿನ ಹಾದಿಯಲ್ಲಿ ಹಲವು ಅಡೆತಡೆಗಳಾಗಿವೆ. ಹಗಲಿರುಳು ನೀವು ಪಟ್ಟಿರುವ ಶ್ರಮ ಏನೆಂದು ನಮಗೆ ಗೊತ್ತು. ನಾವು ನಮ್ಮ ಪ್ರಯತ್ನವನ್ನು ಧೈರ್ಯವಾಗಿ ಮುಂದುವರಿಸೋಣ. ಚಂದ್ರಯಾನ ಕೇವಲ ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೆ ಅಗತ್ಯವಿದೆ. ನನಗೆ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು. ಜಗತ್ತಿನ ಬೇರೆ ಯಾವುದೇ ದೇಶ ಮಾಡದ ಸಾಧನೆಗೆ ನಮ್ಮ ವಿಜ್ಞಾನಿಗಳು ಕೈಹಾಕಿದ್ದಾರೆ. ದೇಶ ನಿಮ್ಮ ಜತೆ ಇದೆ. ತಾನು ನಿಮ್ಮ ಬೆಂಬಲಕ್ಕೆ ಇದ್ದೇನೆ. ದೇಶ ನಿಮ್ಮ ಬಗ್ಗೆ ಹೆಮ್ಮೆ ಪಡಲಿದೆ. ಸೋಲುಗಳಿಗೆ ಎದೆಗುಂದುವ ಜಾಯಮಾನ ಭಾರತದಲ್ಲ. ಸೋಲಿನಿಂದ ನಾವು ಕುಗ್ಗಿಲ್ಲ. ಪ್ರತೀ ಸೋಲು ಹೊಸ ಸವಾಲಿಗೆ ದಾರಿಯಾಗುತ್ತದೆ ಎಂದು ವಿಜ್ಞಾನಿಗಳಿಗೆ ವಿಶ್ವಾಸ ತುಂಬಿದ್ದಾರೆ. ಮುಂದಿನ ದಿನಗಳಲ್ಲಿ ನಿಶ್ಚಿತವಾಗಿ ಗೆಲುವು ಸಿಗಲಿದೆ. ಚಂದ್ರನಲ್ಲಿ ನೀರಿನ ಅಂಶವಿದೆ ಎಂಬುದನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ವಿಜ್ಞಾನಿಗಳದ್ದು. ವಿಜ್ಞಾನದಲ್ಲಿ ಸೋಲುಗಳೆಂಬುದೇ ಇಲ್ಲ. ನಮ್ಮ ಪ್ರಯತ್ನವನ್ನು ಮುಂದುವರಿಸಬೇಕಿದೆ. ಮಂಗಳಯಾನವನ್ನು ಯಶಸ್ವಿಯಾಗಿ ನಡೆಸಿದ್ದು ನಮ್ಮ ವಿಜ್ಞಾನಿಗಳು. ನನಗೆ ನಿಮ್ಮಲ್ಲಿ ಪೂರ್ಣ ವಿಶ್ವಾಸವಿದೆ ಎಂದರು. ನಿಮ್ಮ ಪರಿಶ್ರಮದ ಬಗ್ಗೆ ಗೌರವವಿದೆ. ನಿಮ್ಮ ಜತೆ ಸಂವಾದ ಮಾಡುವ ಮೂಲಕ ನಾನು ಹೊಸ ಪ್ರೇರಣೆ ಪಡೆದಿದ್ದೇನೆ. ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ಹಲವು ಮಜಲುಗಳನ್ನು ದಾಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಡು ಸಾಧನೆ ಮಾಡಲಿ. ಸರ್ಕಾರ ನಿಮ್ಮೊಂದಿಗೆ ಇದೆ. ದೇಶ ನಿಮ್ಮ ಜತೆ ಇದೆ. ನಿಮ್ಮ ಸಾಧನೆಯ ಬಗ್ಗೆ ನಮಗೆ ಗರ್ವವಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ. ತಮ್ಮ ಭಾಷಣ ಮುಕ್ತಾಯದ ಬಳಿಕ ಮೋದಿ ಇಸ್ರೋ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ಬಳಿ ತೆರಳಿ ಅಭಿನಂದನೆ ಸಲ್ಲಿಸಿದರು.