ನವದೆಹಲಿ, ಏ 6, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 27 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದು ಈವರೆಗೆ ಸಾವಿನ ಗಡಿ 118 ಕ್ಕೆ ಏರಿಕೆಯಾಗಿದೆ. ಇಡೀ ವಿಶ್ವವನ್ನು ಅಕ್ಷರಶಃ ಬೆಚ್ಚಿ ಬೀಳಿಸಿರುವ ಮಾರಕ ಮಹಾಮಾರಿಯಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ನೂರರ ಗಡಿ ದಾಟಿದೆ. ರಾಜ್ಯಗಳಿಂದ ಬಂದ ಹೊಸ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಕೊರೋನ ವೈರಸ್ ಸೋಂಕಿನಿಂದ ಜೀವ ಕಳೆದುಕೊಂಡವರ ಸಂಖ್ಯೆ ಈಗ 118 ಕ್ಕೆ ಏರಿಕೆಯಾಗಿದೆ.ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 13 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಭಾನುವಾರ ದೇಶದ ವಿವಿಧೆಡೆಗಳಲ್ಲಿ 541 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4 , 298 ಕ್ಕೆ ಏರಿಕೆಯಾಗಿದೆ . ಆರೋಗ್ಯ ಇಲಾಖೆ ಅಂಕಿಅಂಶಗಳ ಪ್ರಕಾರ ನಿನ್ನೆಯವರೆಗೆ ಪಾಸಿಟಿವ್ ಪ್ರಕರಣಗಳು 3,374 ಹಾಗೂ ಸೋಂಕಿನಿಂದ ಮೃತಪಟ್ಟಿದ್ದರು ಎಂದು ಮೊದಲು ಹೇಳಲಾಗಿದ್ದರೂ ನಂತರದ 24 ಗಂಟೆಗಳಲ್ಲಿ 472 ಹೊಸ ಪ್ರಕರಣಗಳು ದೃಢಪಟ್ಟು ಹಲವು ಸಾವುಗಳು ವರದಿಯಾಗಿತ್ತು.