ಭಾಷೆ-ಸಾಹಿತ್ಯದ ಬೆಳವಣಿಗೆಯಲ್ಲಿ ಅನುವಾದದ ಕೊಡುಗೆ ಅಪಾರ: ಡಾ. ಬ್ಯಾಳಿ

ಕೊಪ್ಪಳ 18: ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಯಲ್ಲಿ ಅನುವಾದ ಸಾಹಿತ್ಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಿರಿಯ ಸಾಹಿತಿ ಹಾಗೂ ಅನುವಾದಕರಾದ ಡಾ. ಕೆ.ಬಿ ಬ್ಯಾಳಿ ಹೇಳಿದರು.

ನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೊತ್ತರ ಕೇಂದ್ರದಲ್ಲಿ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ಅನುವಾದ ಕಮ್ಮಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾಷಾಂತರ ಮತ್ತು ಅನುವಾದದ ನಡುವೆ ಸೂಕ್ಷ್ಮ ವ್ಯತ್ಯಾಸ ಇರುತ್ತದೆ. ಅನುವಾದವು ನಿರಂತರ ಅಧ್ಯಯನ ಮಾಡುವವರಿಗೆ ಅರ್ಥವಾಗುತ್ತದೆ. ಅನುವಾದ ಸಾಹಿತ್ಯಗಳನ್ನು ಬರವಣಿಗೆ ಮಾಡಬೇಕಾದಲ್ಲಿ ಅನುವಾದ ಮಾಡಬೇಕಾದ ಎರಡು ಭಾಷೆಗಳ ಮೇಲೆ ಸಾಕಷ್ಟು ಹಿಡಿತ ಹೊಂದಿರಬೇಕಾಗುತ್ತದೆ. ಅನುವಾದಕರಲ್ಲಿ ಅನುಭವ, ಕೌಶಲ್ಯ ಮತ್ತು ಸೃಜನಶೀಲತೆ ಇದ್ದರೆ ಅನುವಾದ ಗೆಲ್ಲುತ್ತದೆ. ಇವುಗಳ ಕೊರತೆ ಕಂಡು ಬಂದಲ್ಲಿ ಅನುವಾದದ ಕೊಲೆಯಾಗುತ್ತದೆ. ಅನುವಾದ ಎಂದರೆ ಪರಕಾಯ ಪ್ರವೇಶವಿದ್ದಂತೆ. ನಮ್ಮ ಭಾಷೆಯೊಂದಿಗೆ ಬೇರೆ ಭಾಷೆಯ ಸಾಹಿತ್ಯವನ್ನು ಅವಲೋಕಿಸುವ ವಿಧಾನವಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಬಸವರಾಜ್ ಎಸ್. ಮಾತನಾಡಿ, ಅನುವಾದ ಎಂದರೆ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಹಾವ-ಭಾವ, ಚಿಂತನೆಗಳನ್ನು ಕೊಂಡೊಯ್ಯುವ ಪ್ರಕ್ರಿಯೆಯಾಗಿರುತ್ತದೆ. ಬಸವಣ್ಣನವರ ವಚನಗಳು ಬೇರೆ ಬೇರೆ ಭಾಷೆಯಲ್ಲಿ ಅನುವಾದಗೊಳ್ಳುತ್ತವೆ. ಪಾಶ್ಚಿಮಾತ್ಯರು ಬಸವಣ್ಣನವರ ವಚನಗಳಿಗೆ ಮಾರು ಹೋಗುತ್ತಾರೆ. 12 ನೇ ಶತಮಾನದಲ್ಲಿಯೇ ಸಂವಹನ ಕೌಶಲ್ಯಗಳ ಕುರಿತು ತಮ್ಮ ವಚನಗಳ ಮೂಲಕ ಸಾರಿದರು. ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು ಎಂಬ ಬಸವಣ್ಣನವರ ವಚನಗಳನ್ನು ಸ್ಮರಿಸಿದರು. ಯಾವ ವ್ಯಕ್ತಿ ಭಾಷಾ ಕೌಶಲ್ಯವನ್ನು ಹೊಂದಿರುತ್ತಾನೋ ಅವನು ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕು ಕಟ್ಟಿಕೊಳ್ಳುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ಬಹುಭಾಷೆ ಪ್ರಾವೀಣ್ಯತೆ ಹೊಂದಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕವಯತ್ರಿ, ಅನುವಾದಕಿ ನಿರ್ಮಲಾ ಶೆಟ್ಟರ್, ಸಹ ಪ್ರಾಧ್ಯಾಪಕರಾದ ಡಾ. ಜಾಜಿ ದೇವೆಂದ್ರಪ್ಪ ಸೇರಿದಂತೆ ಕೇಂದ್ರದ ವಿವಿಧ ವಿಭಾಗಗಳ ಉಪನ್ಯಾಸಕರಾದ ಡಾ.ಗಿರೇಗೌಡ ಅರಳಿಹಟ್ಟಿ, ಡಾ.ರಂಗನಾಥ್, ಡಾ.ಸಂದೀಪ ಡಿ.ಡಿ, ಡಾ. ಚಾಂದ್ ಭಾಷ, ವೈ.ವಿ ಕುಲಕಣರ್ಿ, ವಿಶಾಲಾಕ್ಷಿ, ಶ್ರೀಕಾಂತ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.