ಬೆಂಗಳೂರು, ಜ.11, ಹಿರಿಯ ಸಾಹಿತಿ ಡಾ.ಚಿದಾನಂದ ಮೂರ್ತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ನಾಡಿನ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅವರ ಸಂಶೋಧನೆ ಮತ್ತು ಸಾಹಿತ್ಯದ ಜೊತೆಯಲ್ಲಿ ಅವರ ನೇರ ನಡೆ-ನುಡಿ, ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಮೀರಿದ ಸ್ನೇಹ ಶೀಲ ಗುಣವನ್ನೂ ನಾಡು ಸದಾ ಸ್ಮರಿಸುತ್ತದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ಹಿರಿಯ ಸಂಶೋಧಕ,ಕನ್ನಡ ಗರುಡ ಡಾ. ಚಿದಾನಂದ ಮೂರ್ತಿ ಅವರ ನಿಧನದಿಂದ ನಾಡು ಅಪರೂಪದ ವಿದ್ವಾಂಸರನ್ನು ಕಳೆದುಕೊಂಡಿದೆ. ಕನ್ನಡ ಶಕ್ತಿ ಕೇಂದ್ರ ಸ್ಥಾಪಿಸಿದ್ದ 'ಚಿಮೂ'ಎಂದೇ ಖ್ಯಾತರಾಗಿದ್ದ ಹಿರಿಯ ಜೀವ ನಾಡುನುಡಿಜಲಕ್ಕಾಗಿ ಅಹರ್ನಿಶಿ ಶ್ರಮಿಸಿದ್ದರು. ಮೃತರ ಕುಟುಂಬ ಸದಸ್ಯರಿಗೆ,ಅವರ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ನಾಡಿನ ಹಿರಿಯ ಸಾಹಿತಿ, ಇತಿಹಾಸಜ್ಞ, ಹೋರಾಟಗಾರ, ತನ್ನ ನಂಬಿಕೆಗಳ ಜೊತೆ ಎಂದೂ ರಾಜಿ ಮಾಡಿಕೊಳ್ಳದೇ ಬದುಕಿದ, ಅತ್ಯಂತ ಧೈರ್ಯವಾಗಿ ಇತಿಹಾಸದ ಸತ್ಯ ಸಂಗತಿಗಳನ್ನು ಪ್ರತಿಪಾದಿಸುತ್ತಾ ಬಂದ, ವಿಶೇಷವಾಗಿ ಹಂಪೆಯ ಜೊತೆ ಬಹಳ ಆಪ್ತತೆ ಬೆಳೆಸಿಕೊಂಡಿದ್ದ, ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನ ರೀತಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಎಂ ಚಿದಾನಂದಮೂರ್ತಿಗಳು ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ. ನಾಡಿಗೆ ಅವರ ಸೇವೆ ಅನನ್ಯವಾಗಿದ್ದು, ಅವರ ಬದುಕು, ವ್ಯಕ್ತಿತ್ವ, ವಿಚಾರ ನಮಗೆ ಎಂದೆಂದಿಗೂ ಸ್ಪೂರ್ತಿದಾಯಕ. ರಾಷ್ಟ್ರ ಓರ್ವ ಮಹಾನ್ ಪರಿಚಾರಕನನ್ನು ಕಳೆದುಕೊಂಡಿದೆ. ಅತ್ಯಂತ ಸಜ್ಜನ ವ್ಯಕ್ತಿತ್ವದ ಚಿದಾನಂದಮೂರ್ತಿಗಳ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ಯುವಘಟಕ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿ, ದೊಡ್ಡ ನಿಧಿಯೊಂದನ್ನು ನಾಡು ಕಳೆದುಕೊಂಡಿದೆ. ಕನ್ನಡ, ಕನ್ನಡಿಗರ ಇತಿಹಾಸದ ವಿಶ್ವಕೋಶ, ಹಿರಿಯ ಲೇಖಕ, ವಿದ್ವಾಂಸ, ಸಂಶೋಧಕ ಡಾ ಎಂ.ಚಿದಾನಂದಮೂರ್ತಿಯವರು ಇನ್ನಿಲ್ಲ ಎಂದು ತಿಳಿದು ತೀವ್ರ ಆಘಾತವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂತಾಪ ಸೂಚಿಸಿದ್ದು, ಹೆಸರಾಂತ ಹಿರಿಯ ಸಾಹಿತಿ, ಸಂಶೋಧನಾಕಾರ ಹಾಗೂ ಹೋರಾಟಗಾರ ಡಾ.ಎಂ. ಚಿದಾನಂದಮೂರ್ತಿ ಅವರು ಸ್ವರ್ಗಸ್ಥರಾಗಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ಕರ್ನಾಟಕ ಇತಿಹಾಸ –ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದ ಡಾ. ಚಿದಾನಂದಮೂರ್ತಿಯವರು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ದೊರೆಯಲು ಪ್ರಮುಖಪಾತ್ರ ವಹಿಸಿದ್ದರು.
ಇವರ ಕೃತಿಗಳಿಗೆ ಅನೇಕ ಪ್ರಶಸ್ತಿಗಳು ದೊರೆತಿದ್ದು, ಇವರ ಕನ್ನಡ ಸೇವೆಗೆ ನಾಡಿನ ಜನತೆ ಚಿರ ಋಣಿಯಾಗಿದೆ ಹಾಗೂ ಅವರು ನಡೆದು ಬಂದ ದಾರಿ ಕನ್ನಡ ಜನತೆಗೆ ಮಾರ್ಗದರ್ಶಿಯಾಗಲಿ. ಅವರ ಆತ್ಮಕ್ಕೆ ಸರ್ವಶಕ್ತ್ಯನಾದ ಭಗವಂತನು ಚಿರಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.ಕನ್ನಡದ ಹಿರಿಯ ಲೇಖಕ ,ಸಂಶೋಧಕ ,ಚಿಂತಕ ಡಾ. ಎಂ ಚಿದಾನಂದ ಮೂರ್ತಿ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ ಎನ್ ನಂದೀಶ್ ಹಂಚೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ .
ಕನ್ನಡ ಸಾಹಿತ್ಯ ದಿಗ್ಗಜರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಚಿದಾನಂದ ಮೂರ್ತಿ ಅವರು ಕನ್ನಡದ ಸಂಶೋಧನಾ ಕ್ಷೇತ್ರಕ್ಕೆ ಹೊಸ ಆಯಾಮ ಕೊಟ್ಟವರು ,ತಮ್ಮ ಅಸಾಧಾರಣ ಪ್ರತಿಭೆಯಿಂದ ಕನ್ನಡ ಸಾಹಿತ್ಯದ ಔನ್ನತ್ಯಕ್ಕೆ ಏರಿದವರು ,ಅವರ ಶೂನ್ಯ ಸಂಪಾದನೆಯನ್ನು ಕುರಿತು ,ಕೃತಿ ಇಂದಿಗೂ ವಿದ್ಯಾರ್ಥಿಗಳ ಕೈಪಿಡಿ ಎಂದು ಪರಿಗಣಿಸಲ್ಪಟ್ಟಿದೆ .ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ , ಸಂಶೋಧನಾ ಗ್ರಂಥವೊಂದು ಹೇಗಿರಬೇಕು ಎಂಬುದಕ್ಕೆ ಮಾದರಿ ಆಗಿದೆ, ನಲವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ,ನೂರಾರು ಸಂಶೋಧನಾ ಲೇಖನಗಳನ್ನು ನೀಡಿರುವ ಚಿದಾನಂದಮೂರ್ತಿ ಅಪರಿಮಿತವಾದ ಶಿಷ್ಯ ಸಂಪತ್ತನ್ನು ಹೊಂದಿದ್ದಾರೆ .ಬಹಳ ಮುಖ್ಯವಾಗಿ ಕನ್ನಡ ಶಕ್ತಿ ಕೇಂದ್ರವನ್ನು ಸ್ಥಾಪಿಸಿ ಅದರ ಮೂಲಕ ಕನ್ನಡಕ್ಕೆ ಕುತ್ತು ಬಂದ ಸಂದರ್ಭಗಳಲ್ಲಿ ಅವರು ನಡೆಸಿದ ಹೋರಾಟ ಅವಿಸ್ಮರಣೀಯ ಗೋಕಾಕ್ ಚಳವಳಿಯಲ್ಲಿ ಅವರು ನೀಡಿದ ಕಾಣಿಕೆ ಬಹಳ ದೊಡ್ಡದು ,
ಕನ್ನಡ ಪುಸ್ತಕ ಪ್ರಾಧಿಕಾರ 2018ನೇ ಸಾಲಿನ ಡಾ ಎಂಎಂ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿತ್ತು ಫೆಬ್ರವರಿ 11ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಅವರು ವಿಧಿವಶರಾಗಿದ್ದು ನಮ್ಮ ದುರ್ದೈವ .ಅವರ ನಿಧನದಿಂದ ಕನ್ನಡ ಸಾಹಿತ್ಯ ಒಂದು ತಲೆಮಾರಿನ ಕೊಂಡಿಯನ್ನು ಕಳಚಿಕೊಂಡಿದೆ ಎಂದು ಡಾ. ಎಂ ಎನ್ ನಂದೀಶ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ