ಚಾಮುಂಡಿ ಬೆಟ್ಟದಲ್ಲಿ ನಾಡಅಧಿದೇವತೆಯ ವಿಜೃಂಭಣೆಯ ರಥೋತ್ಸವ

ಮೈಸೂರು, ಅ 13:    ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡಿ ದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಭಾನುವಾರ ಬೆಳಗ್ಗೆ 6.30 ರಿಂದ 7.15ರ ಶುಭ ಮುಹೂರ್ತದಲ್ಲಿ  ರಥೋತ್ಸವ ನೆರವೇರಿತು. 

ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯ ಭಕ್ತಾದಿಗಳು ಮುಂಜಾನೆಯೇ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು 

ಸಂಪ್ರದಾಯದಂತೆ ರಾಜವಂಶಸ್ಥ ಯದುವೀರ ಕೃಷ್ಣ ದತ್ತ  ಒಡೆಯರ್ ಪೂಜೆ ಸಲ್ಲಿಸಿದ ಬಳಿಕ  ಚಾಮುಂಡಿ ದೇವಿಯ ಮೂರ್ತಿಯನ್ನು  ರಥದಲ್ಲಿ ಪ್ರತಿಷ್ಠಾಪಿಸಲಾಯಿತು.  ಸಾವಿರಾರು ಮಂದಿ ಭಕ್ತಾದಿಗಳು ರಥೋತ್ಸವದಲ್ಲಿ ಭಾಗಿಯಾಗಿದ್ದರು. ರಥ ಎಳೆದು ದೇವಿಯ ದರ್ಶನ ಪಡೆದು ಪುನೀತರಾದರು. 

ರಾಜವಂಶಸ್ಥೆ ಪ್ರಮೋದಾದೇವಿ, ಯದುವೀರ್ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಚಾಮುಂಡೇಶ್ವರಿ ದರ್ಶನ ಪಡೆದರು. 

ಅಕ್ಟೋಬರ್ 15 ರಂದು ಸಂಜೆ 6.30ಕ್ಕೆ  ದೇವಿಕೆರೆಯಲ್ಲಿ ತೆಪ್ಪೊತ್ಸವ ನಡೆಯಲಿದೆ.