ಮುಂಬೈ ಸೆ 7: ಚಂದ್ರನ ಮೇಲೆ ಚಂದ್ರಯಾನ-2 ಬಾಹ್ಯಾಕಾಶ ನೌಕೆಯನ್ನು ಇಳಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ನಡೆಸಿದ ಪ್ರಯತ್ನಗಳನ್ನು ಮುಕ್ತ ಕಂಠದಿಂದ ಕೊಂಡಾಡಿದ ಪ್ರಧಾನಿ ನರೇಂದ್ರಮೋದಿ, ಇಸ್ರೋ ವಿಜ್ಞಾನಿಗಳು, ಎಂಜಿನಿಯರುಗಳಿಂದ ಸಾಕಷ್ಟು ಕಲಿಯಬೇಕಿದೆ ಎಂದು ಹೇಳಿದ್ದಾರೆ.
ನಿನ್ನೆ ರಾತ್ರಿ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಚಂದ್ರಯಾನದ ದುರದೃಷ್ಟಕರ ಬೆಳವಣಿಗೆಯ ಭಾವುಕ ಕ್ಷಣಗಳನ್ನು ಕಳೆದಿದ್ದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಸ್ರೋ ವಿಜ್ಞಾನಿಗಳ ಅಪರಿಮಿತ ಆತ್ಮವಿಶ್ವಾಸವನ್ನು ಕೊಂಡಾಡಿದರು
ದೇಶದ ವಾಣಿಜ್ಯ ನಗರಿಯಲ್ಲಿ ದೇಶೀ ನಿರ್ಮಿತ ಮೆಟ್ರೋ ರೈಲು ಕೋಚ್ ಹಾಗೂ ಮೂರು ಹೊಸ ಮೆಟ್ರೋ ಮಾರ್ಗಳನ್ನು ಉದ್ಘಾಟಿಸಿದ ಪ್ರಧಾನಿ, ಚಂದ್ರಯಾನ ಯೋಜನೆಯು ನಿರೀಕ್ಷಿತ ಗುರಿ ಮುಟ್ಟದಿದ್ದರೂ ಮುಂದಿನ ದಿನಗಳಲ್ಲಿ ಚಂದ್ರನ ಮೇಲ್ಮೈ ಮುಟ್ಟುವ ಗುರಿ ಈಡೇರುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳೊಂದಿಗೆ ರಾತ್ರಿ ಕಳೆದದ್ದನ್ನು ಸ್ಮರಿಸಿದ ಪ್ರಧಾನಿ ಮೋದಿ ಅವರು ತೋರಿಸಿದ ಧೈರ್ಯ ತುಂಬಾ ಮೆಚ್ಚುಗೆಯಾಯಿತು. ಗುರಿ ತಲುಪುವವರೆಗೂ ಛಲವನ್ನು ಸುಸ್ಥಿರವಾಗಿ ಉಳಿಸಿಕೊಳ್ಳುವುದೂ ಕೂಡಾ ಒಂದು ಅತಿದೊಡ್ಡ ಸವಾಲು. ಇಸ್ರೋದ ವಿಜ್ಞಾನಿಗಳು ಹಾಗೂ ಎಂಜಿನಿಯರುಗಳಿಂದ ಈ ಗುಣವನ್ನು ನಾವು ಖಂಡಿತ ಕಲಿಯಬೇಕು. ಇಸ್ರೋ ವಿಜ್ಞಾನಿಗಳು ಗುರಿ ತಲುಪವವರೆಗೂ ವಿರಮಿಸುವುದೇ ಇಲ್ಲ ಎಂದು ಮೋದಿ ಕೊಂಡಾಡಿದರು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಮುಂಬೈನಲ್ಲಿ ವಿಶೇಷ ರೈಲ್ವೆ ಕೋಚ್ ಉದ್ಘಾಟಿಸಿದರು. ಬೆಂಗಳೂರಿನ ಬೆಮೆಲ್(ಃಇಒಐ) ಸಂಸ್ಥೆ ಕೇವಲ 75 ದಿನಗಳಲ್ಲಿ ಈ ಬೋಗಿಯನ್ನು ನಿರ್ಮಾಣ ಮಾಡಿದೆ. ಮುಂಬೈನ ಮೆಟ್ರೋ ರೈಲು ನಿಗಮ ಇಂತಹ 500 ಬೋಗಿಗಳ ನಿರ್ಮಾಣ ಮಾಡುವ ಯೋಜನೆ ಇರಿಸಿಕೊಂಡಿದೆ.
ಪ್ರಧಾನಿ ಅವರು ಮುಂಬೈ ಮೆಟ್ರೋನ ಹೊಸ ಮೂರು ಮಾರ್ಗಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, 19 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 42 ಕಿಮೀ ಉದ್ದದ ಮೂರು ಮೆಟ್ರೋ ಮಾರ್ಗ ನಿರ್ಮಿಸುವ ಯೋಜನೆ ಇದಾಗಿದೆ.
ಮೋದಿ ಅವರು ಅತಿದೊಡ್ಡ ಮೆಟ್ರೋ ಭವನ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಈ ಯೋಜನೆಗೆ ಸ್ಥಳೀಯರ ವಿರೋಧವಿದೆ.
ವಿವಿಧ ಯೋಜನೆಗಳ ಉದ್ಘಾಟನೆಯ ನಂತರ ಔರಂಗಾಬಾದ್ ನಲ್ಲಿ ನಡೆಯಲಿರುವ ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ತೆರಳುವ ಮುನ್ನ ಮುಂಬೈ ವಿಲ್ಲೆ ಪಾರ್ಲೆಯ ಲೋಕಮಾನ್ಯ ಸೇವಾ ಸಂಘದಲ್ಲಿ ಪ್ರತಿಷ್ಠಾಪಿಸಿರುವ ಭಗವಾನ್ ಗಣೇಶನ ದರ್ಶನವನ್ನು ಪ್ರಧಾನಿ ಮೋದಿ ಪಡೆದುಕೊಂಡರು.