ವಿವಿಧ ಮಹನೀಯರ ಜಯಂತಿ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಣೆ-ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್.
ಹಾವೇರಿ 21: ಜಿಲ್ಲಾಡಳಿತದಿಂದ ಜಗಜ್ಯೋತಿ ಬಸವೇಶ್ವರ, ಶ್ರೀ ಶಂಕರಾಚಾರ್ಯ ಜಯಂತಿ ಹಾಗೂ ಶ್ರೀ ಭಗೀರಥ ಜಯಂತಿಗಳ ಕಾರ್ಯಕ್ರಮ ಅರ್ಥಪೂರ್ಣ ಹಾಗೂ ವಿಜೈಂಭಣೆಯಿಂದ ಆಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಗಜ್ಯೋತಿ ಬಸವೇಶ್ವರ, ಶಂಕರಾಚಾರ್ಯ ಜಯಂತಿ ಹಾಗೂ ಭಗೀರಥ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ಮುಖಂಡರೊಂದಿಗೆ ಚರ್ಚಿಸಿ, ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮ ಏಪ್ರಿಲ್ 30 ರಂದು ಬೆಳಿಗ್ಗೆ 10 ಗಂಟೆಗೆ ಹಾವೇರಿ ನಗರದ ಶ್ರೀ ಹುಕ್ಕೇರಿಮಠದಲ್ಲಿ ಹಾಗೂ ಸಂಜೆ 4 ಗಂಟೆಗೆ ಬಸವೇಶ್ವರ ಭಾವಚಿತ್ರ ಮೆರವಣಿಗೆ, ಶ್ರೀ ಶಂಕರಾಚಾರ್ಯ ಜಯಂತಿ ಮೇ 2 ರಂದು ಹಾವೇರಿ ನಗರದ ಸೀತಾರಾಮ ಮಂಗಲ ಕಾರ್ಯಾಲಯದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಸಂಜೆ 5 ಗಂಟೆಗೆ ಶಂಕರ ಭಾರತಿ ಮಠದಿಂದ ಭಾವಚಿತ್ರ ಮೆರವಣಿಗೆ ಹಾಗೂ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಮೇ 4 ರಂದು ಬಳಿಗ್ಗೆ 10-30ಕ್ಕೆ ಹಾವೇರಿ ನಗರದ ಗಾಂಧೀ ಭವನದಲ್ಲಿ ಆಚರಣೆಗೆ ನಿರ್ಣಯಿಸಲಾಯಿತು.
ಎಲ್ಲ ಮಹನೀಯರ ಭಾವಚಿತ್ರ ಮೆರವಣಿಗೆ ಕಲಾ ತಂಡಗಳ ನೇಮಕ, ಉಪನ್ಯಾಸಕರು, ಆಮಂತ್ರಣ ಪತ್ರಿಕೆ, ವೇದಿಕೆ, ಧ್ವನಿ-ಬೆಳಕು, ಆಸನ, ಕುಡಿಯುವ ನೀರು, ಉಪಹಾರ, ವ್ಯವಸ್ಥೆಯನ್ನು ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಮನ್ವಯದಿಂದ ಮಾಡಬೇಕೆಂದು ಸಲಹೆ ನೀಡಿದರು.
ಈ ಮಹನೀಯರ ಜಯಂತಿಯನ್ನು ಎಲ್ಲ ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಆಚರಣೆ ಮಾಡಲು ಆದೇಶ ಹೊರಡಿಸಲಾಗುವುದು ಎಂದರು.ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಆರ್. ವಿ. ಚಿನ್ನಿಕ್ಕಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹಾಜರಿದ್ದರು.