ಮಾಸ್ಕೋ, ನ 4: ನಾರ್ವೆ ದೇಶದ ಜೆ.ಜೆ. ಉಗ್ಲ್ಯಾಂಡ್ ನೌಕಾ ಕಂಪನಿಗೆ ಸೇರಿದ ಹಡಗಿನ ಮೇಲೆ ಕಡಲ್ಗಳ್ಳರು ದಾಳಿ ನಡೆಸಿ ಅದರಲ್ಲಿದ್ದವರ ಪೈಕಿ 9 ಮಂದಿ ನಾವಿಕ ಸಿಬ್ಬಂದಿಯನ್ನು ಅಪಹರಿಸಿದ್ದಾರೆ ಎಂದು ಕಂಪನಿ ಹೇಳಿದೆ ಶನಿವಾರ ಬೆಳಗ್ಗೆ ಕಡಲ್ಗಳ್ಳರು ಕಂಪನಿಯ ಎಂ.ವಿ. ಬೊನಿಟಾ ಹಡಗು ಪ್ರವೇಶಿಸಿದ್ದಾರೆ. ಸರಕು ಇಳಿಸಲು ಬೆನಿಯನ್ ಬಂದರು ನಗರಿಯ ಕರಾವಳಿಯಲ್ಲಿ ಹಡಗು ಲಂಗರು ಹಾಕಲು ಕಾಯುತ್ತಿದ್ದಾಗ ಹಡಗಿನಲ್ಲಿದ್ದ 9 ನಾವಿಕ ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ಕಂಪನಿ ಹೇಳಿದೆ. ಉಗ್ಲ್ಯಾಂಡ್ ತುರ್ತು ಪ್ರಕ್ರಿಯಾ ಪಡೆ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದು, ಘಟನೆಯನ್ನು ಸಂಬಂಧ ಪಟ್ಟ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನಾವಿಕ ಸಿಬ್ಬಂದಿಯ ಕುಟುಂಬಗಳನ್ನು ಸಂಪರ್ಕಿಸಿದ್ದು, ಅವರಿಗೆ ನಿರಂತರ ಮಾಹಿತಿ ಒದಗಿಸಲಾಗುತ್ತಿದೆ. ನಾವಿಕ ಸಿಬ್ಬಂದಿಯ ಹಿತದೃಷ್ಟಿಯಿಂದ ಪರಿಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ನೀಡಲು ಉಗ್ಲ್ಯಾಂಡ್ ನಿರಾಕರಿಸಿದೆ. ಹಡಗಿನಲ್ಲಿದ್ದ ಉಳಿದ ನಾವಿಕ ಸಿಬ್ಬಂದಿ ಬೆನಿಯನ್ ಬಂದರಿಗೆ ಶನಿವಾರ ಸಂಜೆ ಆಗಮಿಸಿದ್ದಾರೆ. ಈ ನಡುವೆ ಅಪಹರಣಕ್ಕೀಡಾಗಿರುವ ಹಡಗಿನ ನಾವಿಕ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಬಂದರು ಅಧಿಕಾರಿಗಳು ತೀವ್ರ ಅನುಕಂಪ ವ್ಯಕ್ತಪಡಿಸಿದ್ದಾರೆ. ಅಪಹರಣದಲ್ಲಿ ನಾರ್ವೆ ದೇಶದ ಯಾವುದೇ ನಾಗರೀಕರು ಭಾಗಿಯಾಗಿಲ್ಲ ಎಂದು ನಾವರ್ೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗುರಿ ಸೋಲ್ ಬರ್ಗ್ ನಾರ್ವೆ ಸುದ್ದಿ ಸಂಸ್ಥೆ( ಎನ್ ಟಿ ಬಿ)ಗೆ ತಿಳಿಸಿದ್ದಾರೆ. ಕಡಲ್ಗಳ್ಳರು ಅಪಹರಿಸಿರುವ ಎಲ್ಲ ನಾವಿಕರು ಫಿಲಿಪಿನ್ಸ್ ರಾಷ್ಟ್ರೀಯರು ಎಂದು ನಾರ್ವೆ ಹಡಗು ಮಾಲೀಕರ ಸಂಘಟನೆಯ ಮೂಲಗಳನ್ನು ಉಲ್ಲೇಖಿಸಿ ನಾರ್ವೆ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.