ತ್ರಿವಳಿ ತಲಾಖ್ ಮಸೂದೆ ಮಹಿಳೆಯರ ನ್ಯಾಯಕ್ಕೆ ಸಂಬಂಧಿಸಿದ್ದು: ರವಿಶಂಕರ್ ಪ್ರಸಾದ್

ನವದೆಹಲಿ,   ಜುಲೈ ೨೬ ದೇಶದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದ್ದ ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಗುರುವಾರ ವಿಪಕ್ಷಗಳ ವಿರೋಧದ ನಡುವೆಯೇ ಮಂಡನೆಯಾಯಿತು  ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ 'ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ 2019' ನ್ನು ಮೂರನೇ ಬಾರಿಗೆ ಮಂಡಿಸಿದರು    

ತ್ರಿವಳಿ ತಲಾಖೆ ಮಾನವೀಯತೆಯ ಸಮಸ್ಯೆಯಾಗಿದ್ದು, ದಯಮಾಡಿ ರಾಜಕೀಯ ಬಣ್ಣ ಹಚ್ಚುವುದು ತರವಲ್ಲ ಎಂದು ಮನವಿ ಮಾಡಿದ ರವಿಶಂಕರ್ ಪ್ರಸಾದ್,  ಮಸೂದೆಗೆ ರಾಜಕೀಯ ಲೇಪನ ಮಾಡುವುದು ಅಥವಾ ಧಾರ್ಮಿಕ ಸಮಸ್ಯೆಯನ್ನಾಗಿ ಪರಿಗಣಿಸುವುದು ಸರಿಯಲ್ಲ  ಇದು ನ್ಯಾಯ ಹಾಗೂ ಮಾನವತೆಯ ಜೊತೆಗೆ ಮಹಿಳೆಯರ ಹೆಮ್ಮೆ ಹಾಗೂ ಗೌರವಕ್ಕೆ ಸಂಬಂಧಿಸಿದ್ದು ಎಂದು ಅವರು ಲೋಕಸಭೆಗೆ ತಿಳಿಸಿದರು. 

ಈ ಹಿಂದೆ ಎರಡು ಬಾರಿಯೂ ವಿಧೇಯಕ ಅಂಗೀಕಾರಕ್ಕೆ ಬಹುಮತದ ಇಲ್ಲವಾಗಿದ್ದರಿಂದ ವಿಧೇಯಕ ಅಂಗೀಕಾರವಾಗಿರಲಿಲ್ಲ ಪ್ರತಿಪಕ್ಷಗಳು ವಿಧೇಯಕವನ್ನು ಸದನ ಸಮಿತಿಗೆ ವರ್ಗಾಯಿಸಿದ್ದರು. 

ರಾಜ್ಯ ಸಭೆಯಲ್ಲಿ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಮಿತಿಗೆ ಪರಾಮರ್ಶಿಸಲು ವರ್ಗಾವಣೆ ಮಾಡಲಾಗಿತ್ತು. 2018 ರ ಅಂತ್ಯದಲ್ಲಿ ಲೋಕಸಭೆಯಲ್ಲಿ ಮರು ಮಂಡನೆ ಮಾಡಲಾಗಿತ್ತಾದರೂ, ಎನ್ಡಿಎ ಸರಕಾರದ ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಅನುಮತಿ ಸಿಕ್ಕಿರಲಿಲ್ಲ. 

  ಗುರುವಾರ ಚರ್ಚೆಯ ವೇಳೆ ಮಸೂದೆಗೆ ವಿಪಕ್ಷಗಳಿಂದ ತೀವ್ರ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ, ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ರವಿಶಂಕರ್ ಸ್ಪಷ್ಟಪಡಿಸಿದರು. 

  ಮಸೂದೆಯನ್ನು ವಿರೋಧಿಸಿದ ಆರ್ ಎಸ್ ಪಿ ಸದಸ್ಯ ಎನ್ ಕೆ ಪ್ರೇಮಚಂದ್ರನ್, ಈ ವಿಷಯದಲ್ಲಿ ಸರ್ಕಾರ ಮೂರು ಬಾರಿ ಸುಗ್ರೀವಾಜ್ಞೆ ತಂದಿದೆ. ಇದರ ಹಿಂದೆ ರಾಜಕೀಯ ಉದ್ದೇಶವೇ ಅಡಗಿದೆ ಎಂದು ಟೀಕಿಸಿದರು. 

  ಇಂಡಿಯನ್ ಯೂನಿಯನ್ ಆಫ್ ಮುಸ್ಲಿಮ್ ಲೀಗ್ (ಐಯು ಎಂ ಎಲ್) ಸದಸ್ಯ ಪಿ ಕೆ ಕುನ್ಹಲಿಕುಟ್ಟಿ ಸಹ ಮಸೂದೆಯ ಹಿಂದೆ ರಾಜಕೀಯ ಉದ್ದೇಶ ಅಡಗಿದೆ ಎಂದರಲ್ಲದೆ, ಹಿಂಪಡೆಯುವಂತೆ ಒತ್ತಾಯಿಸಿದರು. 

 ಬಿಜೆಪಿ ಸದಸ್ಯೆ ಮೀನಾಕ್ಷಿ ಲೇಖಿ ತ್ರಿವಳಿ ತಲಾಖ್ ಮಸೂದೆಗೆ ಬೆಂಬಲ ಸೂಚಿಸಿ ಮಾತನಾಡಿ, ಧಾರ್ಮಿಕ ದೇಶದಲ್ಲಿ ಜಾತ್ಯತೀತ ರಾಜ್ಯ ಕಟ್ಟುವುದು ಬಹುದೊಡ್ಡ ಸವಾಲು ಎಂದು ಈ ಹಿಂದೆ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅಭಿಪ್ರಾಯಪಟ್ಟಿದ್ದರು. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರೂ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು