ವಿಕೋಪ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಜಾಗೃತಿ ಮೂಡಿಸಿದ ಸಮಯ ರೇಖಾ- 2025 ಸಮ್ಮೇಳನ

ವಿಕೋಪ ಪರಿಸ್ಥಿತಿಯನ್ನು  ನಿಭಾಯಿಸುವ ಕುರಿತು ಜಾಗೃತಿ ಮೂಡಿಸಿದ ಸಮಯ ರೇಖಾ- 2025 ಸಮ್ಮೇಳನ The Samaya Rekha-2025 conference created awareness about disaster management.

ಕಾರವಾರ 05:  ರಾಜ್ಯದಲ್ಲಿ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶ ಮತ್ತು ಕರಾವಳಿ ಪ್ರದೇಶಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯು ಪ್ರತಿ ವರ್ಷ ನಿರಂತರವಾಗಿ ಗುಡ್ಡ ಕುಸಿತ, ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸುತ್ತಿದ್ದು,ಈ ವಿಪತ್ತುಗಳನ್ನು ಅತ್ಯಂತ ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು , ಮಂಗಳವಾರ ಕೈಗಾ ದಲ್ಲಿ ನಡೆದ ಸಮಯ್ ರೇಖಾ 2025 (ವಿಪತ್ತು ನಿರ್ವಹಣೆ- ವೈದ್ಯಕೀಯ ಸಿದ್ಧತೆ-ಸಿಬಿಅರ್‌ಎನ್‌-ಲಾಜಿಸ್ಟಿಕ್‌-ಇಂಟರ್‌ಗ್ರೇಷನ್) ಸಮ್ಮೇಳನವು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು. 

ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಚಿತ್ರಣ ಕುರಿತಂತೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲೆಯು ಅತ್ಯಂತ ವೈಶಿಷ್ಠ್ಯ ಪೂರ್ಣ ಭೌಗೋಳಿಕ ವ್ಯವಸ್ಥೆಯಿಂದ ಕೂಡಿದ್ದು, ಕರಾವಳಿ, ನದಿಗಳು,ಜೀವ ವೈವಿಧ್ಯತೆಯ ಪಶ್ಚಿಮಘಟ್ಟ ತಾಣಗಳು ಹಾಗೂ ಶೇ.85 ರಷ್ಟು ಅರಣ್ಯ ಪ್ರದೇಶದಿಂದ ಕೂಡಿದ್ದು, ಮಾನ್ಸೂನ್ ಅವಧಿಯಲ್ಲಿ 3000 ದಿಂದ 4000 ಮಿಮೀ ಮಳೆ ಸುರಿಯಲಿದೆ. ಕೈಗಾ ಅಣು ವಿದ್ಯುತ್ ಸ್ಥಾವರ, ವಿದ್ಯುತ ಉತ್ಪಾದನಾ ಕೆಂದ್ರಗಳು, ಅಣೆಕಟ್ಟುಗಳು, ನೌಕಾನೆಲೆ, ಕೊಂಕಣ ರೈಲ್ವೆ, ರಾಷ್ಟ್ರೀಯ ಹೆದ್ದಾರಿಯನ್ನು ಒಳಗೊಂಡಿದೆ. ಜಿಲ್ಲೆಯಲ್ಲಿನ ಕಡಲ ತೀರಗಳು, ಜಲಪಾತಗಳು, ದೇವಾಲಯಗಳು, ಪ್ರವಾಸಿ ತಾಣಗಳು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. 

ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹೆಚ್ಚಿನ ವಿಪತ್ತುಗಳು ಕಂಡುಬರುತ್ತಿದ್ದು, ಪ್ರವಾಹಗಳು, ಗುಡ್ಡ ಕುಸಿತಗಳು ಸಂಭವಿಸುತ್ತಿದ್ದು, ಇವುಗಳ ನಿಯಂತ್ರಣಕ್ಕಾಗಿ ಈಗಾಗಲೇ 437 ಗುಡ್ಡ ಕುಸಿತ ಪ್ರದೇಶಗಳನ್ನು ಗುರುತಿಸಿ, ಗುಡ್ಡ ಕುಸಿತದ ಸಂಭವನೀಯತೆ ಬಗ್ಗೆ ಮಾಹಿತಿ ನೀಡಲು ಸ​‍್ಾಟರ​‍್ಸ‌ ಗಳನ್ನು ನೇಮಕ ಮಾಡಲಾಗಿದೆ. ಜಲಾಶಯಗಳಿಂದ ನೀರನ್ನು ಹೊರಬಿಡುವ ಕುರಿತಂತೆ ಸ್ಟಾಂಡರ​‍್ಡ‌ ಆಪರೇಟಿಂಗ್ ಪ್ರೋಸಿಜರ್ (ಎಸ್‌.ಓ.ಪಿ) ರಚಿಸಿ ಅದರಂತೆ ಕಾರ್ಯನಿರ್ವಹಿಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ರಕ್ಷಣೆಗಾಗಿ 5 ಚಂಡಮಾರುತ ಆಶ್ರಯ ಕಟ್ಟಡಗಳನ್ನು ನಿರ್ಮಿಸಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ 24*7 ಕಾರ್ಯನಿರ್ವಹಿಸುವ ತುರ್ತು ಸ್ಪಂದನಾ ಕೇಂದ್ರವನ್ನು ತೆರೆಯಲಾಗಿದೆ. 

ಜಿಲ್ಲೆಯಲ್ಲಿ ಸಂಭವಿಸಬಹುದಾದ ಯಾವುದೇ ವಿಪತ್ತುಗಳನ್ನು ಸರ್ಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯನ್ನು ತಯಾರಿಸಿದ್ದು, ತುರ್ತು ಸಂದರ್ಭದಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳು ಸೇರಿದಂತೆ ಎಲ್ಲಾ ರೀತಿಯ ರಕ್ಷಣಾ ಉಪಕರಣಗಳ ಕುರಿತ ಸಮಗ್ರ ಮಾಹಿತಿಯನ್ನು ಹೊಂದಲಾಗಿದ್ದು, ಗ್ರಾಮೀಣ ಮಟ್ಟದಲ್ಲಿಯೂ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ತಡೆಯಲೂ ಕೂಡಾ ಎಸ್‌.ಓ.ಪಿ. ರಚಿಸಲಾಗಿದೆ. ತುರ್ತು ಸಂಪರ್ಕಕ್ಕಾಗಿ ಹಾಟ್ ಲೈನ್ ಗಳ ಸಂಪರ್ಕ ಹೊಂದಲಾಗಿದ್ದು, ಎನ್‌.ಡಿ.ಆರ್‌.ಎಫ್, ಎಸ್‌.ಡಿ.ಆರ್‌.ಎಫ್ ಮತ್ತು ಅಗ್ನಿಶಾಮಕ ಇಲಾಖೆಗಳು ಯಾವುದೇ ಸಂದರ್ಭದಲ್ಲಿ ನೆರವಿಗೆ ಸಿದ್ದವಾಗಿರುವಂತೆ ಸೂಚನೆಗಳನ್ನು ನೀಡಲಾಗಿದೆ. ವಿಪತ್ತು ನಿರ್ವಹಣೆ ಕುರಿತಂತೆ ಶಾಲೆಗಳಲ್ಲಿ ಕೂಡಾ ಅಣುಕು ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸುತಿದ್ದು, ವಿಪತ್ತುಗಳಿಂದ ನೊಂದವರಿಗೆ ಮಾನಸಿಕ ಸ್ಥೈರ್ಯ ತುಂಬಲು ಜಿಲ್ಲೆಯ ಶುಶ್ರೂಷಕ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಅಪಾಯಕಾರಿ ಮರಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ವಿವಿಧ ಅಣಕು ಕಾರ್ಯಚರಣೆಗಳನ್ನು ಅತ್ಯಂತ ಯಶಸ್ವಿಯಾಗಿ ಕೈಗೊಳ್ಳಲಾಗಿದೆ, ಜಿಲ್ಲೆಯಲ್ಲಿ ಸಂಭವಿಸಬಹುದಾದ ಎಲ್ಲಾ ರೀತಿಯ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಶಿರೂರು ಗುಡ್ಡ ಕುಸಿತ ಘಟನೆ, ಗ್ರಾಸಿಂ ಅನಿಲ ಸೋರಿಕೆ ಘಟನೆ, ಕಾಳಿ ಸೇತುವೆ ಕುಸಿತ, ಕೈಗಾ ಅಣಕು ಕಾರ್ಯಚರಣೆ, ಆಪರೇಷನ್ ಅಭ್ಯಾಸ್ ಕಾರ್ಯಚರಣೆಗಳು ನಮ್ಮ ಕಾರ್ಯವಿಧಾನಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಅತ್ಯಂತ ಸಮಥವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ ಎಂದರು. 

ಕೇರಳದ ಎಸ್‌.ಡಿ.ಎ.ಎಮ್‌.ಎ ನ ಮಾಜಿ ಸದಸ್ಯ ಮತ್ತು ಇನ್ಟಿ-್ಸಟ್ಯೂಟ್ ಅಫ್ ಕ್ಲೈಮೇಟ್ ಜೇಂಜ್ ಸ್ಟಡೀಸ್ ನ ಮಾಜಿ ನಿರ್ದೇಶಕ ಪ್ರೊ. ಡಾ. ಕೇಶವ್ ಮೋಹನ್, ವಿಕೋಪಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಎ.ಐ. ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ನೈಜ ಸಮಯದಲ್ಲಿ ನಿಖರ ಮುನ್ಸೂಚನೆಗಳನ್ನು ಪಡೆಯಲು ಹಾಗೂ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು. 

ಪೊಲೀಸ್ ಇಲಾಖೆಯ ಫೋರೆನ್ಸಿಕ್ ಲ್ಯಾಬ್ ಹುಬ್ಬಳ್ಳಿಯ ಉಪ ನಿರ್ದೇಶಕ ಡಾ.ಚಂದ್ರಶೇಖರ್ ಮಾತನಾಡಿ, ವಿಪತ್ತು ಸಂದರ್ಭದಲ್ಲಿ ಜೀವ ಹಾನಿಯಾದವರ ದೇಹದ ಅಂಗಾಂಗಗಳ ಡಿ.ಎನ್‌.ಎ ಮೂಲಕ ವಾರಿಸುದಾರರನ್ನು ಗುರುತಿಸಲು ಸುಲಭವಾಗಲಿದ್ದು, ಮೃತರ ರಕ್ತದ ಮಾದರಿ, ಹಲ್ಲುಗಳು, ಬೇರು ಸಹಿತವಾದ ಕೂದಲು , ಮೂಳೆಗಳನ್ನು ಸಂಗ್ರಹಿಸುವ ಮತ್ತು ಸಂರಕ್ಷಿಸುವ ವಿಧಾನಗಳ ಕುರಿತು ತಿಳಿಸಿ, ಹಸಿಯಾದ ಮೂಳೆಗಳನ್ನು ಉಪ್ಪಿನಲ್ಲಿ ಮತ್ತು ಒಣಗಿದ ಮೂಳೆಗಳನ್ನು ಬಟ್ಟೆಯಲ್ಲಿ ಸಂರಕ್ಷಿಸಿ, ಸಂಗ್ರಹಿಸಬಹುದಾಗಿದ್ದು, ಯಾವುದೇ ಫಾರ್ಮಲಿನ್ ಗಳನ್ನು ಬಳಸಬಾರದು ಈ ಕುರಿತು ಎಸ್‌.ಓ.ಪಿ ಗಳನ್ನು  ಕಡ್ಡಾಯವಾಗಿ ಪಾಲಿಸಬೇಕು ಎಂದ ಅವರು, ಶಿರೂರು ಘಟನೆಯಲ್ಲಿ ಮೃತ ಚಾಲಕರ ರಕ್ತ ಸಂಬಂಧಿಗಳ ಡಿ.ಎನ್‌.ಎ ಗಳನ್ನು ಹೋಲಿಕೆ ಮಾಡುವ ಮೂಲಕ ವಾರಿಸುದಾರರಿಗೆ ತ್ವರಿತವಾಗಿ ಮೃತದೇಹಗಳನ್ನು ಹಸ್ತಾಂತರ ಮಾಡಲು ಸಾಧ್ಯವಾಯಿತು ಎಂದರು. 

ತೇಜಸ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಅಂಡ್ ಮಿಟಿಗೇಶನ್ ಸೆಂಟರ್ ನ  ಉಪಾಧ್ಯಕ್ಷ ಮತ್ತು ನಿರ್ದೇಶಕ ಪ್ರಭು ವಿ.ವಿ, ವಿಪತ್ತು ಸಂದರ್ಭದಲ್ಲಿ ತ್ವರಿತ ಕಾರ್ಯಚರಣೆ ಕೈಗೊಳ್ಳಲು ಅನುಕೂಲವಾಗುವಂತೆ ರಕ್ಷಣಾ ಉಪಕರಣಗಳು, ವಾಹನಗಳು, ಸಿಬ್ಬಂದಿಗಳ ಕುರಿತ ಸಮಗ್ರ ಮಾಹಿತಿಯನ್ನು ಹೊಂದಿರಬೇಕು, ಅವುಗಳ ಗುಣಮಟ್ಟ, ಕಾರ್ಯಕ್ಷಮತೆಯ ಕುರಿತಂತೆ ಆಗಾಗ್ಗೆ ಪರೀಶೀಲನೆ ನಡೆಸಿ, ಅವುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಎಲ್ಲಾ ಸರಬರಾಜುದಾರರ ಸಂಪರ್ಕ ಮಾಹಿತಿಯನ್ನು ಹೊಂದಿದ್ದು, ತುರ್ತು ಸಂದರ್ಭದಲ್ಲಿ ಅವಶ್ಯಕತೆಗುಣವಾಗಿ ಅಗತ್ಯ ಸಂಖ್ಯೆಯಲ್ಲಿ ತ್ವರಿತವಾಗಿ ಪೂರೈಸುವ ಬಗ್ಗೆ ಒಪ್ಪಂದ ಮಾಡಿಕೊಂಡಿರಬೇಕು ಎಂದರು. 

ರಾಸಾಯನಿಕ ವಿಪತ್ತುಗಳ ಲಕ್ಷಣಗಳು, ಅವುಗಳನ್ನು ಗುರುತಿಸುವ ವಿಧಾನ, ರಕ್ಷಣಾ ವಿಧಾನಗಳು, ನಿಯಂತ್ರಣ ವಿಧಾನಗಳು ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಮಂಗಳೂರಿನ ಕರ್ಸ್ತೂಬಾ ಮೆಡಿಕಲ್ ಕಾಲೇಜ್ ನ ತುರ್ತು ಚಿಕಿತ್ಸೆ ವಿಭಾಗದ ಸಹಾಯಕ ಪ್ರೋಫೆಸರ್ ಡಾ.ನಿಖಿಲ್ ಪಾಲ್ ತಿಳಿಸಿದರು. 

ಐ.ಎನ್‌.ಎಸ್‌. ಪತಂಜಲಿಯ ಸರ್ಜನ್ ಕ್ಯಾ.ವಿವೇಕ್ ಭಟ್, ಯಾವುದೇ ರೀತಿಯ ವಿಪತ್ತು ಸಂದರ್ಭದಲ್ಲಿ ರಕ್ಷಣಾ ಪಡೆಗಳು ಸಾರ್ವಜನಿಕರ ನೆರವಿಗೆ ಆಗಮಿಸಲಿದ್ದು, ಐಎನ್‌ಎಸ್ ಪತಂಜಲಿಯಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್, ಜಿಲ್ಲೆಯಲ್ಲಿನ ವೈದ್ಯಕೀಯ ಸೌಲಭ್ಯಗಳ ಬಗ್ಗೆ, ಬೆಂಗಳೂರಿನ ಬಿಜಿಎಸ್ ಮೆಡಿಕಲ್ ಕಾಲೇಜಿನ ಅನಾಟಮಿ ವಿಭಾಗದ ಪ್ರೋಪೆಸರ್ ಡಾ.ಸುಮಾ ಅವರು ವಿಪತ್ತು ಸಂದರ್ಭದಲ್ಲಿ ಸಂತ್ರಸ್ಥರಿಗೆ ಸಾಮೂಹಿಕವಾಗಿ ವೈದ್ಯಕೀಯ ಸೌಲಭ್ಯ ಒದಗಿಸುವ ವಿಧಾನಗಳ ಬಗ್ಗೆ, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ವಿಶೇಷಾಧಿಕಾರಿ ಹಾಗೂ ಹೃದ್ರೋಗ ವಿಭಾಗದ ಪ್ರೋಪೆಸರ್ ಮತ್ತು ಮುಖ್ಯಸ್ಥ ಡಾ. ದಿವ್ಯ ಪ್ರಕಾಶ್, ಕೋರೋನಾ ದಂತಹ ಸಾಮೂಹಿಕ ಪಿಡುಗುಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ, ಕ್ರಿಮ್ಸ್‌ ನ ವೈದ್ಯ ಡಾ.ಅಮಿತ್ ಕುಮಾರ್, ಕ್ರಿಮ್ಸ್‌ ನಲ್ಲಿರುವ ವೈದ್ಯಕೀಯ ಸೌಲಭ್ಯಗಳು ಮತ್ತು ತಜ್ಞ ವೈದ್ಯರ ವಿವರಗಳ ಬಗ್ಗೆ, ಕೈಗಾ ಆಸ್ಪತ್ರೆಯ  ವೈದ್ಯಕೀಯ ಅಧೀಕ್ಷಕ ಡಾ.ಅಜಯ್ ದುಬೆ ವಿಕಿರಣ ಸೋರಿಕೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ವೈದ್ಯಕೀಯ ಮುನ್ನೆಚ್ಚರಿಕೆ ಹಾಗೂ ಚಿಕಿತ್ಸಾ ಕ್ರಮಗಳು ಮತ್ತು ಕೈಗಾದಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆಯ ಬಗ್ಗೆ ತಿಳಿಸಿದರು. 

ಎನ್‌ಪಿಸಿಐಎಲ್ ಕೈಗಾದ ಸ್ಥಳ ನಿರ್ದೇಶಕ ವಿನೋದ್ ಕುಮಾರ, ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ  ಕೈಗೊಂಡಿರುವ ಸುರಕ್ಷತಾ ಕ್ರಮಗಳು ಮತ್ತು ಮುನ್ನೆಚ್ಚರಿಕೆಯಾಗಿ ನಿರಂತರವಾಗಿ ನಡೆಸುವ ಅಣಕು ಕಾರ್ಯಚರಣೆಗಳ   ಬಗ್ಗೆ ಮತ್ತು  ಡಿ.ಅರ್‌ಡಿ.ಒ ದ ಮಾಜಿ ಜಂಟಿ ನಿರ್ದೇಶಕ ಡಾ. ವಿನೋದ ಕುಮಾರ್, ಜೈವಿಕ, ರಾಸಾಯನಿಕ, ವಿಕಿರಣ ಮತ್ತು ಅಣು ವಿಕಿರಣ ವಿಪತ್ತುಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತು ಇವುಗಳನ್ನು ಸಮರ್ಥವಾಗಿ ಎದುರಿಸುವ ಕುರಿತಂತೆ ಡಿ.ಆರ್‌.ಡಿ.ಓ ದಿಂದ ಎಲ್ಲಾ ರೀತಿಯ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದರು. 

ರಾಜ್ಯ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ಬಯಾಲಜಿಕಲ್ ಡಿಸಾಸ್ಟರ್ ಸೆಂಟರ್ ನ ಕೋರ್ ಕಮಿಟಿ ಸದಸ್ಯ ಪ್ರದೀಪ್ ಕೆ. ಕೆ. ಅವರು ವಿಶೇಷ ಆಸಕ್ತಿ ವಹಿಸಿ ಈ ಸಮ್ಮೇಳನವನ್ನು ಅಯೋಜಿಸಿದ್ದು, ಯಾವುದೇ ರೀತಿಯ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಇಲಾಖೆಗಳು ಮತ್ತು ಅಧಿಕಾರಿಗಳ ನಡುವೆ  ಉತ್ತಮ ಸಮನ್ವಯ ಮತ್ತು ಸಂವಹನ ಅತ್ಯಂತ ಮುಖ್ಯವಾಗಿದ್ದು, ಎಲ್ಲರ ಸಹಕಾರದಿಂದ ಇಂದಿನ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದರು. 

ಕಾರ್ಯಕ್ರಮದಲ್ಲಿ  ಕ್ರಿಸ್ತು ಜಯಂತಿ ಡೀಮ್ಡ್‌ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಲಿಜೋ ಪಿ ಥಾಮಸ್ ತರಬೇತಿಯ ಯೋಜನೆಗಳ ಮಾಹಿತಿಯನ್ನು , ಐ.ಎನ್‌.ಹೆಚ್‌.ಎಸ್ ಪತಂಜಲಿ ನೌಕಾದಳದ ಸರ್ಜನ್ ಕಮಾಂಡರ್ ಸುಶೀಲ್ ಚಾವ್ಲಾ ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಅಧಿಕಾರಿಗಳು ಮತ್ತು ಅವರ ಸಂಪರ್ಕ ವಿವರಗಳುಳ್ಳ ಡೈರಿಯನ್ನು ಬಿಡುಗಡೆಗೊಳಿಸಿದರು. ತೇಜಸ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಅಂಡ್ ಮಿಟಿಗೇಶನ್ ಸೆಂಟರ್ ನ  ಉಪಾಧ್ಯಕ್ಷ ಮತ್ತು ನಿರ್ದೇಶಕ ಪ್ರಭು ವಿ.ವಿ, ಉತ್ತರ ಕನ್ನಡ ಜಿಲ್ಲೆಗೆ ವಿಪತ್ತು ಸಂದರ್ಭದಲ್ಲಿ ನಿರ್ವಹಣೆಗೆ ಅಗತ್ಯವಾದ ಉಪಕರಣಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. 

ಸಮ್ಮೇಳನದಲ್ಲಿ ಜಿಲ್ಲೆಯ ಪೊಲೀಸ್, ಕಂದಾಯ, ಆರೋಗ್ಯ , ಅಗ್ನಿಶಾಮಕ ಹಾಗೂ ವಿವಿಧ  ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಎಸ್‌.ಡಿ.ಆರ್‌.ಎಫ್, ಎನ್‌.ಡಿ.ಆರ್‌.ಎಫ್ ಸಿಬ್ಬಂದಿಗಳು ಭಾಗವಹಿಸಿದ್ದರು.