ತುರ್ತು ಪರಿಸ್ಥಿತಿಯ ರಾಜಕೀಯ ಕೈದಿಗಳಿಗೆ ಆಯುಷ್ಮಾನ್ ಯೋಜನೆ ವಿಸ್ತರಿಸುವಂತೆ ರಾಜ್ಯಸಭೆಯಲ್ಲಿ ಒತ್ತಾಯ

ನವದೆಹಲಿ, ಫೆ 7,ತುರ್ತು ಪರಿಸ್ಥಿತಿಯ ವೇಳೆ ಆಂತರಿಕ ಭದ್ರತಾ ಕಾಯ್ದೆ (ಮಿಸಾ) ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ರಾಜಕೀಯ ಕೈದಿಗಳಿಗೆ ಪಿಂಚಣಿ ಮತ್ತು ಆಯುಷ್ಮಾನ್ ಭಾರತ್‌ನಂತಹ ಆರೋಗ್ಯ ಯೋಜನೆಗಳನ್ನು ವಿಸ್ತರಿಸಬೇಕೆಂದು ಬಿಜೆಪಿ ಸದಸ್ಯ ಕೈಲಾಶ್ ಸೋನಿ ಶುಕ್ರವಾರ ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದಾರೆ.

 ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು,  ದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಕಾರಣರಾದ 1,20,000 ಮಿಸಾ ಕೈದಿಗಳಿದ್ದಾರೆ. ತುರ್ತು ಪರಿಸ್ಥಿತಿ ವೇಳೆ ಇವರೆಲ್ಲರೂ 20 ತಿಂಗಳು ಜೈಲುಗಳಲ್ಲಿ ಕಳೆದಿದ್ದಾರೆ. ಅವರ ಶ್ರಮವನ್ನು ಸ್ವಾತಂತ್ರ್ಯಕ್ಕಾಗಿ ನಡೆದ ಎರಡನೇ ಸಂಗ್ರಾಮವೆಂದೇ ಭಾವಿಸಲಾಗಿದೆ ಎಂದು ಹೇಳಿದರು.

  ಮಿಸಾ ಕೈದಿಗಳ ಕೊಡುಗೆಯನ್ನು ಗುರುತಿಸಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಒಂಬತ್ತು ರಾಜ್ಯಗಳು ಅವರನ್ನು 'ಸ್ವಾತಂತ್ರ್ಯ ಹೋರಾಟಗಾರರು' ಎಂದು ಕರೆದಿದ್ದಲ್ಲದೆ, ಆಯಾ ವಿಧಾನಸಭೆಗಳು ಅಂಗೀಕರಿಸಿದ ಕಾಯ್ದೆಯಡಿ ಅವರಿಗೆ ಪಿಂಚಣಿ ನೀಡಿವೆ. ಇತ್ತೀಚೆಗೆ, ಚತ್ತೀಸ್ಗಢ ಮತ್ತು ರಾಜಸ್ಥಾನ ಸರ್ಕಾರಗಳು ಯಾವುದೇ ಸುಳಿವು ನೀಡದೆ ಪಿಂಚಣಿಯನ್ನು ಹಠಾತ್ತನೆ ಸ್ಥಗಿತಗೊಳಿಸಿವೆ.

ಮಿಸಾ ಕೈದಿಗಳ ಯೋಗಕ್ಷೇಮವು ಕೇಂದ್ರದ ಜವಾಬ್ದಾರಿಯಾಗಿದೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಆದ್ದರಿಂದ ಸರ್ಕಾರ ಮಧ್ಯಪ್ರವೇಶಿಸಿ ಅವರ ಪಿಂಚಣಿಯನ್ನು ಮರುಜಾರಿಗೊಳಿಸಿ, ಅವರಿಗೆ ಅಗತ್ಯ ಮೊತ್ತವನ್ನು ನೀಡಬೇಕು.ಎಂದು ಸೋನಿ ಒತ್ತಾಯಿಸಿದರು. ರಾಜಕೀಯ ಕೈದಿಗಳ ದುಃಸ್ಥಿತಿಯನ್ನು ವಿವರಿಸಿದ ಸೋನಿವರು, ಮೀಸಾ ಕೈದಿಗಳ ಪೈಕಿ ಕೇವಲ ಶೇ 30ರಷ್ಟು ಜನರು ಉಳಿದಿದ್ದಾರೆ. ಇವರೆಲ್ಲಾ 60 ವರ್ಷ ಅಥವಾ ಮೇಲ್ಪಟ್ಟವರಾಗಿದ್ದಾರೆ. ದುರಂತವೆಂದರೆ, ಇವರಲ್ಲಿ ಅನೇಕರು ಉತ್ತಮ ಚಿಕಿತ್ಸೆಯ ಸೌಲಭ್ಯವಿಲ್ಲದೆ ಗಂಭೀರ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ಸೋನಿ ಸರ್ಕಾರದ ಗಮನ ಸೆಳೆದರು.