ಮೈಸೂರು, ಸೆ 7 ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ನಮಗಿಂತ ಚೆನ್ನಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿದೆ, ಸದ್ಯದಲ್ಲಿಯೇ ಕೇಂದ್ರದಿಂದ ಸಿಹಿ ಸುದ್ದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು ರಾಜ್ಯಕ್ಕೆ ಬಂದು ಹೋಗಿದ್ದಾರೆ, ಅವರು ಇಸ್ರೋ ಸಂಸ್ಥೆ ಬಳಿ ಬಂದು ಮಾತನಾಡಿ ವಾಪಾಸ್ ಆಗಿದ್ದಾರೆ, ನಾನು ಅವರಿಗೆ ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ಈಗಾಗಲೇ ಮಾಹಿತಿ ಕೊಟ್ಟಿದ್ದೇನೆ, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮ್ ಅವರು ರಾಜ್ಯಕ್ಕೆ ಬಂದು ಹೋಗಿದ್ದಾರೆ ಎಂದರು. ರಾಜ್ಯದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿ ನೆರೆಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ರಾಜ್ಯದ ಈ ಬಾರಿ ಬಂದ ಮಳೆಗೆ ಭಾರಿ ನಷ್ಟ ಉಂಟಾಗಿದ್ದು, ಸುಮಾರು 1.5 ಲಕ್ಷಕ್ಕೂ ಅಧಿಕ ಮನೆಗಳು ನಾಶವಾಗಿವೆ. ರಾಜ್ಯ ಸರ್ಕಾರ ಅದಕ್ಕೆ ಬೇಕಾದ ಎಲ್ಲ ಹಣವನ್ನು ನೀಡಲು ಮುಂದಾಗಿದೆ ಎಂದು ತಿಳಿಸಿದರು.