ಪ್ಯಾರಿಸ್, ಮೇ 3,ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ 2020ರ ಟೋಕಿಯೊ ಒಲಿಂಪಿಕ್ಸ್ ನ ಕಾಂಟಿನೆಂಟಲ್ ಕ್ವಾಲಿಫೈಯರ್ಸ್ ನ ಆತಿಥ್ಯವು ಮತ್ತೆ ಚೀನಾ, ಮೊರಾಕೊ ಮತ್ತು ಹಂಗರಿಯಲ್ಲಿ ನಡೆಯಲಿದೆ ಎಂದು ಸಂಯುಕ್ತ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಭಾನುವಾರ ಖಚಿತಪಡಿಸಿದೆ. ಕ್ರೀಡಾಕೂಟದ ಕುಸ್ತಿ ಅರ್ಹತಾ ವ್ಯವಸ್ಥೆಯನ್ನು ನವೀಕರಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಒಪ್ಪಿಗೆ ಸೂಚಿಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ ಎಂದು ಕ್ಸಿನ್ಹುವಾ ನ್ಯೂಸ್ ಏಜೆನ್ಸೀಸ್ ವರದಿ ಮಾಡಿದೆ. ಕೊರೊನಾ ವೈರಸ್ ಸೋಂಕಿನಿಂದ ಮೊದಲು ಮುಂದೂಡಿಕೆಯಾಗಿದ್ದ ಏಷ್ಯನ್ ಕಾಂಟಿನೆಂಟಲ್ ಕ್ವಾಲಿಫೈಯರ್ಸ್ ಚೀನಾದ ಕ್ಸಿಯಾನ್ ನಲ್ಲಿ ಜರುಗಲಿದೆ. ಮೊರಾಕೊದ ಇಲ್ ಜಾಡಿಡಾ ಮತ್ತು ಹಂಗರಿಯ ರಾಜಧಾನಿ ಬುಡಾಪೆಸ್ಟ್ ಕ್ರಮವಾಗಿ ಓಷೆನಿಯಾ ಮತ್ತು ಯುರೋಪಿಯನ್ ಕ್ವಾಲಿಫೈಯರ್ಸ್ ಟೂರ್ನಿಗಳಿಗೆ ವೇದಿಕೆ ಕಲ್ಪಿಸಲಿವೆ.ಮುಂದಿನ ವರ್ಷದ ಮಾರ್ಚ್ ನಲ್ಲಿ ಎಲ್ಲಾ ಮೂರು ಕಾಂಟಿನೆಂಟಲ್ ಕೂಟಗಳು ನಡೆಯಲಿದ್ದು, ಪ್ರತಿ ಕ್ವಾಲಿಫೈಯರ್ಸ್ ವಿಭಾಗದಲ್ಲಿ ಇಬ್ಬರು ಒಲಿಂಪಿಕ್ಸ್ ಗೆ ಅರ್ಹತೆ ಹೊಂದಲಿದ್ದಾರೆ.