ಮೈಸೂರು ಮೃಗಾಲಯಕ್ಕೆ 21.14 ಲಕ್ಷ ರೂ. ಚೆಕ್‌ ನೀಡಿದ ಸಹಕಾರ ಸಚಿವ

ಮೈಸೂರು, ಮೇ 7, ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಗೋಸ್ಕರ ಸಹಕಾರ ಹಾಗೂ ಮೈಸೂರು ಜಿಲ್ಲಾ  ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು 3ನೇ ಹಂತವಾಗಿ ಗುರುವಾರ 21.14 ಲಕ್ಷ  ರೂಪಾಯಿ ಚೆಕ್ ಅನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರಿಗೆ  ಹಸ್ತಾಂತರಿಸಿದರು. ಇದೇ ವೇಳೆ, ಉಸ್ತುವಾರಿ ಸಚಿವರ ಮನವಿ ಮೇರೆಗೆ ಕೆ.ಆರ್.ಪುರಂ  ವಿಧಾನಸಭಾ ಕ್ಷೇತ್ರದ ವತಿಯಿಂದ ನಗರಾಭಿವೃದ್ಧಿ ಸಚಿವ  ಬಿ.ಎ. ಬಸವರಾಜು ಅವರು 84  ಲಕ್ಷ ರೂಪಾಯಿ ಚೆಕ್ ಅನ್ನು ಸಚಿವ ಸೋಮಶೇಖರ್  ಮೂಲಕ ಮೃಗಾಲಯಕ್ಕೆ ಹಸ್ತಾಂತರಿಸಿದರು.ಈ ಮೂಲಕ ಗುರುವಾರ ಒಂದೇ ದಿನ ಮೃಗಾಲಯಕ್ಕೆ ಒಟ್ಟಾರೆ 1,05,14,000 ರೂಪಾಯಿಯನ್ನು ದೇಣಿಗೆಯಾಗಿ ನೀಡಿದಂತಾಗಿದೆ. ಸೋಮಶೇಖರ್ ಅವರು ಇದುವರೆಗೆ ತಮ್ಮ ಕ್ಷೇತ್ರ ಹಾಗೂ ಇತರ ಸಚಿವರಿಂದ  ಮೃಗಾಲಯಕ್ಕೆ ಒಟ್ಟಾರೆಯಾಗಿ 2,31,60,000 ರೂಪಾಯಿಯನ್ನು ದೇಣಿಗೆಯಾಗಿ ನೀಡಿದಂತಾಗಿದೆ.