ಬೆಂಗಳೂರು,ಜ.25, ರಂಗ ಸಂಸ್ಥಾನ ಸಂಗೀತ ಶಾಲೆಯಿಂದ ಜಾಗತಿಕ ದಾಖಲೆಯ ಸಹಸ್ರ ಕಂಠಗಳ ಹ್ಯಾಟ್ರಿಕ್ ವೃಂದಗಾಯನ ನೆನಪಿಗಾಗಿ 250 ಯುವ ಗಾಯಕರಿಂದ 'ನಾದ ಮಂಜರಿ' ಸಮೂಹ ಗಾಯನ ಕಾರ್ಯಕ್ರಮವನ್ನು ಜ.28ರಂದು ಸಂಜೆ.5.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಬಂಡ್ಲಹಳ್ಳಿ ವಿಜಯಕುಮಾರ್ ತಿಳಿಸಿದ್ದಾರೆ.
ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗ ಸಂಸ್ಥಾನ ಸಂಸ್ಥೆ ಸಂಸ್ಥೆಯು ಕಳೆದ 19 ವರ್ಷಗಳಿಂದ ಕನ್ನಡ ಗೀತ ಗಾಯನಕ್ಕೆ ಸಂಬಂಧಿಸಿದಂತೆ ಗೀತೋತ್ಸವ, ಸರಣಿ ಗಾಯನ, ತರಬೇತಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಸಿದ್ಧಗಂಗಾ ಮಠದ ಸಿದ್ಧಲಿಂಗಾ ಸ್ವಾಮೀಜಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ರು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ಕವಿ ಜರಗನಹಳ್ಳಿ ಶಿವಶಂಕರ್, ಡಾ.ವೋಡೇ ಪಿ.ಕೃಷ್ಣಮೂರ್ತಿ, ಬೈರಹಿಂಗಲ ರಾಮೇಗೌಡ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
2012 ಸಾಲಿನಲ್ಲಿ ಒಂದೇ ವೇದಿಕೆಯಲ್ಲಿ ಸಾವಿರ ಗಾಯಕರು, 2014 ರಲ್ಲಿ 1101 ಮತ್ತು 2017ರಲ್ಲಿ 1112 ಗಾಯಕರು ಏಕ ಕಾಲಕ್ಕೆ ಸಮೂಹ ಗಾಯನ ಪ್ರಸ್ತುಪ ಪಡಿಸಿದ್ದರು.ಸಹಸ್ರ ಕಂಠಗಳ ಈ ಗಾಯನ ಸರಣಿ ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಳ್ಳುವ ಮೂಲಕ ಸಮೂಹ ಗಾಯನದಲ್ಲಿ ಹ್ಯಾಟ್ರಿಕ್ ಜಾಗತಿಕ ದಾಖಲೆಯಾಗಿ ಸಂಸ್ಥೆಯು ತನ್ನ ಹೆಜ್ಜೆ ಗುರುತನ್ನು ದಾಖಲಿಸಿದೆ ಎಂದರು.ಈ ಸಂದರ್ಭದಲ್ಲಿ ಗಾಯನ ಸಲಹಾ ಸಮಿತಿಯ ಸದಸ್ಯರಾದ ಆರ್ಥಿಕ ತಜ್ಞ ಬಿ.ವಿ ರುದ್ರಮೂರ್ತಿ, ಬಿ.ಪಿ ರೂಪೇಶ್ ಮತ್ತಿತರರಿದ್ದರು.