ದಿ. 20ರಿಂದ ರಫ್ತು ನಿರ್ವಹಣಾ ತರಬೇತಿ ಶಿಬಿರ

The. Export Management Training Camp from 20

ಬೆಳಗಾವಿ 28: ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಧಾರವಾಡ ಸಂಸ್ಥೆಯು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಂಗ ಸಂಸ್ಥೆಯಾಗಿದ್ದು, ರಫ್ತು ಅರಿವು ಮೂಡಿಸಲು “ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ”ವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿಸಿರುತ್ತದೆ. ಪ್ರಸ್ತುತ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಧಾರವಾಡ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ಸಹಯೋಗದೊಂದಿಗೆ ಬೆಳಗಾವಿಯಲ್ಲಿ ದಿನಾಂಕ 20/01/2025 ರಿಂದ 25/01/2025 ರವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ. 

6 ದಿನಗಳ ಈ ತರಬೇತಿ ಕಾರ್ಯಕ್ರಮವು ಅಂತರಾಷ್ಟ್ರೀಯ ವ್ಯವಹಾರದ ಮಾಹಿತಿಯನ್ನು ನೀಡುವ ಉದ್ದೇಶವನ್ನು ಹೊಂದಿರುತ್ತದೆ. ಈ ತರಬೇತಿಯಲ್ಲಿ ರಫ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಹಾಗೂ ಸಮಗ್ರ ಮಾಹಿತಿಯನ್ನು ನೀಡಲಾಗುವುದು. ರಫ್ತು ಅಂದರೇನು? ಏಕೆ? ಎಲ್ಲಿಗೆ? ಹಾಗೂ ಹೇಗೆ ಮಾಡಬೇಕೆಂಬುದರ ಬಗ್ಗೆ, ರಫ್ತಿಗೆ ಸಂಬಂಧಿಸಿದಂತೆ ನಿಯಮಾವಳಿಗಳು, ಅಂತರಾಷ್ಟ್ರೀಯ ರಫ್ತು ವ್ಯಾಪಾರ, ರಫ್ತು ಮಾರುಕಟ್ಟೆ, ರಫ್ತಿಗೆ ಸಂಬಂಧಿತ ಕೇಂದ್ರ ಸರ್ಕಾರದ ಸಂಸ್ಥೆಗಳಾದ ಡಿ.ಜಿ.ಎಫ್‌.ಟಿ., ಕಸ್ಟಮ್ಸ್‌, ಆರ್‌.ಬಿ.ಐ. ಹಾಗೂ ರಫ್ತು ಉತ್ತೇಜನ ಕೌನ್ಸಿಲ್‌ಗಳಾದ ಅಪೇಡಾ, ಫಿಯೋ ಇತ್ಯಾದಿ, ರಫ್ತು ಪ್ಯಾಕೇಜಿಂಗ್, ಹಣಕಾಸು, ವಿದೇಶಿ ವಿನಿಮಯ, ಇ.ಸಿ.ಜಿ.ಸಿ., ಇ-ವಾಣಿಜ್ಯ ವೇದಿಕೆ ಹಾಗೂ ಜಿ.ಎಸ್‌.ಟಿ. ನಿಯಮಗಳ ಕುರಿತಾಗಿಯೂ ವಿಷಯ ಮಂಡನೆ ಮಾಡಲಾಗುವುದು ಹಾಗೂ ಉತ್ತರ ಕರ್ನಾಟಕದ ರಫ್ತು ಸಾಧ್ಯತಾ ಉತ್ಪನ್ನಗಳ ಕುರಿತು ಮಾಹಿತಿಯನ್ನು ಹಾಗೂ ಆಯಾ ಕ್ಷೇತ್ರಗಳಲ್ಲಿ ಸಾಕಷ್ಟು ಅನುಭವ ಹೊಂದಿರುವ / ಸೇವೆ ಸಲ್ಲಿಸುತ್ತಿರುವ ಪರಿಣಿತಿದಾರರು ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾಹಿತಿ ನೀಡುವರು. 

ರಫ್ತು ವ್ಯವಹಾರ ಪ್ರಾರಂಭಿಸಲಿಚ್ಛಿಸುವವರು, ಹಾಲಿ ರಫ್ತುದಾರರು, ವ್ಯಾಪಾರ ಹಾಗೂ ಉತ್ಪಾದನಾ ಚಟುವಟಿಕೆಗಳಲ್ಲಿ ನಿರತರಾದವರು, ರಫ್ತು ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವ ಉದ್ದಿಮೆದಾರರು ಹಾಗೂ ರಫ್ತು ವ್ಯವಹಾರ ಕುರಿತು ಬೋಧನೆಯಲ್ಲಿ ನಿರತವಾಗಿರುವ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ರಫ್ತು ವ್ಯವಹಾರದಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳಿಗೆ ಈ ತರಬೇತಿ ಕಾರ್ಯಕ್ರಮವು ಅತ್ಯಂತ ಉಪಯೋಗಕಾರಿಯಾಗಿದ್ದು, ಆಸಕ್ತಿಯುಳ್ಳವರೆಲ್ಲರೂ ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳಬಹುದಾಗಿದೆ. ಈ ತರಬೇತಿ ಕಾರ್ಯಕ್ರಮವು ವಸತಿ ರಹಿತವಾಗಿರುತ್ತದೆ. 

ಈ ತರಬೇತಿ ಶಿಬಿರದಲ್ಲಿ ನೋಂದಣಿ ಮಾಡಬಯಸುವವರು, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಾಲತಾಣ: www.vtpc.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಶುಲ್ಕ ರೂ. 3,540/- (ಜಿ.ಎಸ್‌.ಟಿ. ಸೇರಿ) ಇದ್ದು, ದಿನಾಂಕ 10/01/2025 ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ವಿಶ್ವೇಶ್ವರಯ್ಯಾ ವ್ಯಾಪಾರ ಉತ್ತೇಜನ ಕೇಂದ್ರ, 1ನೇ ಮಹಡಿ, ಡಿ.ಐ.ಸಿ ಕಟ್ಟಡ, ರಾಯಾಪುರ, ಧಾರವಾಡ, ಟಿ.ಎಸ್‌. ಮಲ್ಲಿಕಾರ್ಜುನ, ಮೊಬೈಲ್ ಸಂಖ್ಯೆ: 8073707446 / ವಿಶ್ವನಾಥ ಸೂಸಿಮಠ, ಕಛೇರಿ ಸಹಾಯಕರು, ವಿ.ಟಿ.ಪಿ.ಸಿ. ಧಾರವಾಡ, ಮೊಬೈಲ್ ಸಂಖ್ಯೆ: 9742709229 / ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯಮಭಾಗ, ಬೆಳಗಾವಿ ಹಾಗೂ ಆಯಾ ಜಿಲ್ಲೆಯ ಜಿಲ್ಲಾ ಕೈಗಾರಿಕಾ ಕೇಂದ್ರ ಕಛೇರಿಗಳನ್ನು ಸಂಪರ್ಕಿಸಲು ಕೋರಿದೆ.