ದೇಶದಲ್ಲಿ ಒಂದೇ ದಿನ ೧.೫೦ಲಕ್ಷ ಕೊರೊನಾ ಸೋಂಕು ಮಾದರಿಗಳ ಪರೀಕ್ಷೆ

ನವದೆಹಲಿ, ಜೂನ್ ೧೧,  ದೇಶದಲ್ಲಿ  ಕಳೆದ ೨೪ ಗಂಟೆಗಳಲ್ಲಿ ೫ ಸಾವಿರದ ೮೨೩ ಮಂದಿ ಕೊರೊನಾ ಸೋಂಕಿತರು  ಚೇತರಿಸಿಕೊಂಡಿದ್ದು, ಇದರೊಂದಿಗೆ ದೇಶದಲ್ಲಿ  ಒಟ್ಟು  ಗುಣಮುಖರಾದ ಸೋಂಕಿತರ    ಸಂಖ್ಯೆ ೧ ಲಕ್ಷದ ೪೧ ಸಾವಿರದ ೨೯ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಕೊರೊನಾ  ಸೋಂಕಿತರ ಚೇತರಿಕೆ ಪ್ರಮಾಣ ಶೇ ೪೯.೨೧ ರಷ್ಟಾಗಿದೆ  ಎಂದು  ಕೇಂದ್ರ ಸರ್ಕಾರ ಹೇಳಿದೆ.ಈ ನಡುವೆ   ಭಾರತೀಯ  ವೈದ್ಯಕೀಯ ಸಂಶೋಧನಾ ಸಂಸ್ಥೆ ? ಐ ಸಿಎಂ ಆರ್,  ಒಂದೇ ದಿನದಲ್ಲಿ   ೧ ಲಕ್ಷದ ೫೦ ಸಾವಿರ  ಕೊರೊನಾ  ಸೋಂಕು  ಮಾದರಿಗಳ ಪರೀಕ್ಷೆ  ನಡೆಸುವ ಮೂಲಕ ದಾಖಲೆ ನಿರ್ಮಿಸಿದೆ.  ಕಳೆದ  ೨೪ ಗಂಟೆಗಳಲ್ಲಿ  ದೇಶದ  ವಿವಿಧ ಪ್ರಯೋಗಾಲಯಗಳಲ್ಲಿ  ೧ ಲಕ್ಷ ೫೧ ಸಾವಿರ ೮೦೮ ಕೊರೊನಾ  ವೈರಸ್ ಪರೀಕ್ಷೆಗಳನ್ನು ನಡೆಸಲಾಗಿದೆ.

ಕಳೆದ ೨೪ ಗಂಟೆಗಳಲ್ಲಿ ೯ ಸಾವಿರದ  ೯೯೬ ಹೊಸ  ಸೋಂಕು  ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ   ದೇಶದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ ೨ ಲಕ್ಷದ  ೮೬ ಸಾವಿರ ೫೭೯ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ೩೫೭ ಮಂದಿ ಮೃತಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕಿನಿಂದ  ಮೃತಪಟ್ಟವರ ಸಂಖ್ಯೆ  ೮ ಸಾವಿರದ ೧೦೨ಕ್ಕೆ ಏರಿಕೆಯಾಗಿದೆ.  ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ೨.೮೨ರಷ್ಟಿದೆ. ದೇಶದಲ್ಲಿ ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ ೧ ಲಕ್ಷದ ೩೭ ಸಾವಿರದ ೪೪೮ರಷ್ಟಿವೆ.

ದೇಶದಲ್ಲಿ  ಈವರೆಗೆ ೫೨ ಲಕ್ಷದ ೧೩ ಸಾವಿರ  ೧೪೦ ಪರೀಕ್ಷೆಗಳನ್ನು ನಡೆಸಲಾಗಿದೆ.  ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳಿಗೆ  ಕೋವಿಡ್ ಪರೀಕ್ಷೆಗಳಿಗೆ ಅನುಮತಿ ಕಲ್ಪಿಸುವ ಮೂಲಕ  ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.  ದೇಶಾದ್ಯಂತ  ೮೩೭ ಪ್ರಯೋಗಾಲಯಗಳು  ಕಾರ್ಯನಿರ್ವಹಿಸುತ್ತಿದ್ದು ಈ ಪೈಕಿ ೬೦೨ ಸರ್ಕಾರಿ ಪ್ರಯೋಗಾಲಯ ಹಾಗೂ ೨೩೫ ಖಾಸಗಿ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿವೆ.