ಟೆಸ್ಟ್: ಇಂಗ್ಲೆಂಡ್ ಗೆ ಮೊದಲ ದಿನದ ಗೌರವ

   ಮೌಂಟ್ ಮೌಂಗನುಯಿ, ನ.21 :ಭರವಸೆಯ ಆಟಗಾರ ಜೋ ಡೆನ್ಲಿ (74) ಹಾಗೂ ಬೆನ್ ಸ್ಟೋಕ್ಸ್ (ಅಜೇಯ 67) ಇವರುಗಳ ಅರ್ಧಶತಕದ ಬಲದಿಂದ ಪ್ರವಾಸಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ನ ಮೊದಲ ದಿನದ ಗೌರವ ತನ್ನದಾಗಿಸಿಕೊಂಡಿದೆ.  

   ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ರೋರೆ ಬನ್ರ್ಸ ಹಾಗೂ ಡಾಮ್ ಸಿಬ್ಲೆ (22) ಮೊದಲ ವಿಕೆಟ್ ಗೆ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಗ್ರ್ಯಾಂಡ್ ಹೋಮ್ ಸಫಲರಾದರು.  

   ಬನ್ರ್ಸ 138 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 52 ರನ್ ಬಾರಿಸಿ ಔಟ್ ಆದರು. ನಾಯಕ ಜೋ ರೂಟ್ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು.  

   ನಾಲ್ಕನೇ ವಿಕೆಟ್ ಗೆ ಜೋ ಡೆನ್ಲೆ ಹಾಗೂ ಬೆನ್ ಸ್ಟೋಕ್ಸ್ ಜೋಡಿ ತಂಡಕ್ಕೆ 73 ರನ್ ಕಾಣಿಕೆ ನೀಡಿತು. ಡೆನ್ಲೆ 181 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 74 ರನ್ ಸಿಡಿಸಿ, ಟೀಮ್ ಸೌಥಿ ತೋಡಿದ ಖೆಡ್ಡಾಗೆ ಬಲಿಯಾದರು.  

   ಆಲ್ ರೌಂಡರ್ ಬೆನ್ ಸ್ಟೋಕ್ಸ್ 67 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಮೊದಲ ದಿನದ ಆಟದ ಮುಕ್ತಾಯಕ್ಕೆ 4  ವಿಕೆಟ್ ಗೆ 240 ರನ್ ಸೇರಿಸಿದೆ. ನ್ಯೂಜಿಲೆಂಡ್ ಪರ ಕಾಲಿನ್ ಡಿ ಗ್ರ್ಯಾಂಡ್ ಹೋಮ್ 2, ನೀಲ್ ವಾಗ್ನರ್, ಟೀಮ್ ಸೌಥಿ ತಲಾ ಒಂದು ವಿಕೆಟ್ ಪಡೆದರು.