ನವದೆಹಲಿ, ಆ. 31 ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಭಾರತದ ಆಂತರಿಕ ವಿಷಯ ಎಂದು ನವದೆಹಲಿಯಲ್ಲಿನ ಆಸ್ಟ್ರೇಲಿಯಾ ಹೈಕಮಿಷನರ್ ಹರಿಂದರ್ ಸಿಧು ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆಯನ್ನು ನವದೆಹಲಿ ಮತ್ತು ಇಸ್ಲಾಮಾಬಾದ್ ದ್ವಿಪಕ್ಷೀಯವಾಗಿ ಬಗೆಹರಿಸಬೇಕು ಎಂದು ಅವರು ಒತ್ತಿ ಹೇಳಿದರು.
ಇದು ತನ್ನ ಆಂತರಿಕ ವಿಷಯ ಎಂದು ಭಾರತ ಸರ್ಕಾರ ಹೇಳಿದೆ. ಅದನ್ನು ನಾವು ಸಮ್ಮತಿಸುತ್ತೇವೆ ಮತ್ತು ಗೌರವಿಸುತ್ತೇವೆ. ಈ ವಿಷಯವನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿಯೇ ಪರಿಹರಿಸಿಕೊಳ್ಳಬೇಕು ಎಂಬುದು ಆಸ್ಟ್ರೇಲಿಯಾದ ನಿಲುವು ಕೂಡ ಆಗಿದೆ ಎಂದು ಅವರು ತಿಳಿಸಿದರು.
ಈ ಪ್ರದೇಶದಲ್ಲಿ ಶಾಂತಿ ನೆಲೆಸಿದರೆ ಆರ್ಥಿಕವಾಗಿಯೂ ಅಭಿವೃದ್ಧಿಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಎರಡೂ ದೇಶಗಳು ಸಂಯಮದಿಂದ ವರ್ತಿಸಿ ಜನರ ಸುರಕ್ಷತೆಗೆ ಹೆಚ್ಚಿನ ಗಮನ ಕೊಡಲಿದೆ ಎಂದು ನಾವು ಭಾವಿಸುವುದಾಗಿ ಅವರು ಹೇಳಿದರು.