ಬೀಜಿಂಗ್, ಫೆ 13 : ಚೀನಾದಲ್ಲಿ ಹೊಸದಾಗಿ 14,840 ಕೊರೊನ ವೈರಸ್ ಪ್ರಕರಣಗಳು ದೃಢಪಟಿದ್ದು, ಇದು ಒಂದು ದಿನ ಹಿಂದೆ ವರದಿಯಾದ ಪ್ರಕರಣಗಳ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚು ಎಂದು ಕರೋನವೈರಸ್ ಸಾಂಕ್ರಾಮಿಕ ರೋಗ ಕೇಂದ್ರಬಿಂದುವಾದ ಹುಬೈ ಪ್ರಾಂತ್ಯದ ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಇನ್ನು, ಸಾಂಕ್ರಾಮಿಕ ರೋಗದಿಂದ ಹೊಸದಾಗಿ ಸಾವಿನ ಸಂಖ್ಯೆ 242 ಕ್ಕೆ ಏರಿದ್ದು, ಇದು ಹಿಂದಿನ ದಿನಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಎಂದು ಅವರು ತಿಳಿಸಿದ್ದಾರೆ.
ಇದರೊಂದಿಗೆ ಸೋಂಕಿನ ಒಟ್ಟು 48,206 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸಾವಿನ 1,310 ಕ್ಕೆ ಏರಿದೆ.
ಮಂಗಳವಾರ 94 ಸಾವು ಹಾಗೂ 1,638 ಹೊಸ ಪ್ರಕರಣಗಳನ್ನು ಹುಬೈನಲ್ಲಿ ಅಧಿಕಾರಿಗಳು ದೃಢಪಡಿಸಿದ್ದರು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಪ್ರಕರಣಗಳನ್ನು ದೃಢಪಡಿಸಲು ಬಳಸುವ ರೋಗನಿರ್ಣಯದ ಮಾನದಂಡಗಳನ್ನು ಇದು ಬದಲಾಯಿಸಲಾಗಿದೆ. ಇದು ಗುರುವಾರದಿಂದ ಜಾರಿಗೆ ಬರುತ್ತದೆ ಎಂದು ಹುಬೆಯ ಆರೋಗ್ಯ ಆಯೋಗ ತನ್ನ ದೈನಂದಿನ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದೆ. ಅಂದರೆ ಯಾವ ರೋಗಿಗಳು ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ನಿರ್ಧರಿಸಲು ವೈದ್ಯರು ವಿಶಾಲ ವಿವೇಚನೆಯನ್ನು ಹೊಂದಿದ್ದಾರೆ.
ಈ ಮಧ್ಯೆ, ವುಹಾನ್‌ನ ಎರಡು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಕಾರ್ಯಕ್ಕೆ ಕೇಂದ್ರೀಯ ಸೇನಾ ಆಯೋಗದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸಶಸ್ತ್ರ ಪಡೆಗಳ 2,600 ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲು ಒಪ್ಪಿಗೆ ನೀಡಿದ್ದಾರೆ.
ಸೇನಾ ವೈದ್ಯಕೀಯ ಸಿಬ್ಬಂದಿ ಹುಯೋಶೆನ್ಶಾನ್ ಆಸ್ಪತ್ರೆಯ ಕಾರ್ಯಾಚರಣೆಯ ಮಾದರಿಯನ್ನು ಅನುಸರಿಸಲಿದ್ದಾರೆ. ತೈಕಾಂಗ್ ಟೋಂಗ್ಜಿ ಆಸ್ಪತ್ರೆ ಹಾಗೂ ಹುಬೈನ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.