ದೇವಸ್ಥಾನಗಳು ಧಾರ್ಮಿಕ, ಅಧ್ಯಾತ್ಮಿಕ ಕೇಂದ್ರಗಳು: ಶಾಸಕ ಬಸನಗೌಡ ಪಾಟೀಲ ಯತ್ನಾಳ

Temples are religious and spiritual centers: MLA Basanagouda Patil Yatnal

ವಿಜಯಪುರ 20: ಇಡೀ ಜಗತ್ತಿನಲ್ಲಿಯೇ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದ ನಮ್ಮ ರಾಷ್ಟ್ರವು ಒಂದು ಪುಣ್ಯಭೂಮಿ. ಇಲ್ಲಿ ಏಕತೆಯಲ್ಲಿ ಅನೇಕತೆಯೊಂದಿಗೆ ಎಲ್ಲ ಧರ್ಮಿಯರು ಸುಖ-ಶಾಂತಿ, ಸಹಬಾಳ್ವೆ, ಸೌಹಾರ್ಧತೆ ಮತ್ತು ಸಾಮರಸ್ಯತೆಯೊಂದಿಗೆ ಬದುಕುತ್ತಿದ್ದಾರೆ. ದೇವಸ್ಥಾನದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳು ನಡೆದು ಸಮಾಜ ಸನ್ಮಾರ್ಗದತ್ತ ಸಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 

ಅವರು ನಗರದ ಅಥಣಿ ರಸ್ತೆಯ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ನವರಸಪುರದ ಸಿದ್ಧಾರ್ಥ ನಗರದ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಜರುಗಿದ ವಿನಾಯಕ, ಆಂಜನೆಯ, ನವಗ್ರಹ ಹಾಗೂ ನಂದೀಶ್ವರ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನನು ಉದ್ಘಾಟಿಸಿ ಮಾತನಾಡುತ್ತಿದ್ದರು.  

ನಮ್ಮ ಧರ್ಮ, ಪರಂಪರೆ, ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕು. ಗಳಿಸಿದ ಸಂಪತ್ತಿನಲ್ಲಿ ದೇವಸ್ಥಾನ, ಧರ್ಮ ಮತ್ತು ಸಮಾಜಮುಖಿ ಕಾರ್ಯಗಳಿಗಾಗಿ ದೇಣಿಗೆ ಸಲ್ಲಿಸುವಂತಾಗಬೇಕು. ಅಂದಾಗ ಮಾತ್ರ  ದೇವಸ್ಥಾನಗಳಂತಹ ಅಭಿವೃದ್ಧಿ ಕಾರ್ಯಗಳು ನಡೆಯಲು ಸಾಧ್ಯ ಎಂದು ಸಲಹೆ ನೀಡಿದರು.  

ಸಾನಿಧ್ಯ ವಹಿಸಿದ್ದ ಮಸೂತಿಯ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಆರ್ಶಿವಚನ ನೀಡಿ, ನಮ್ಮ ದೇವಸ್ಥಾನಗಳು ಶಾಂತಿ-ನೆಮ್ಮದಿ ಮತ್ತು ಅಧ್ಯಾತ್ಮಿಕ ವೈಚಾರಿಕತೆಯ ತಾಣಗಳಾಗಬೇಕು. ನಮ್ಮ ಧರ್ಮ, ಸಂಸ್ಕೃತಿ-ಪರಂಪರೆ, ಸಂಪ್ರದಾಯ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸುವ ಕೇಂದ್ರಗಳಾಗಲಿ. ಇಂದಿನ ಯುವಕರಲ್ಲಿ ಜಾನಪದ ಸೊಗಡು, ಬದುಕುವ ರೀತಿ-ನೀತಿ, ಹಿರಿಯರಿಗೆ ಗೌರವ ಭಾವನೆಯಿಂದ ಕಾಣುವ ಮೌಲ್ಯಯುತ ಗುಣಗಳನ್ನು ಒಡಮೂಡಿಸಬೇಕು. ಅಂದಾಗ ಮಾತ್ರ ಯುವಶಕ್ತಿ ದೇಶದ ಸಂಪತ್ತು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕಿವಿಮಾತು ಹೇಳಿದರು.  

ವೇದಿಕೆಯ ಮೇಲೆ ದೇವಸ್ಥಾನದ ಅಧ್ಯಕ್ಷ ಅನೀಲಕುಮಾರ ಫತ್ತೇಪೂರ, ಉಪಾಧ್ಯಕ್ಷ ಡಾ. ರಾಹುಲ ಕೆಂಭಾವಿ, ಸಿ.ಎಂ. ಮಾಲಿಪಾಟೀಲ, ದಾದಾಸಾಹೇಬ ಬಾಗಾಯತ, ಸಂತೋಷ ಪಾಟೀಲ, ಗ್ರಾ.ಪಂ. ಸದಸ್ಯ ನಾಗೇಶ ಯಾದವ, ನವರಸಪುರ ಅಭಿವೃದ್ಧಿ ಸಮೀತಿ ಅಧ್ಯಕ್ಷ ಎಸ್‌.ಎಲ್‌.ಇಂಗಳೇಶ್ವರ, ಗ್ರಾಮ ಪಂಚಾಯತ ಅಧ್ಯಕ್ಷ ಸುರೇಶ ಗಚ್ಚಿನಮನಿ ವೇದಿಕೆ ಮೇಲಿದ್ದರು. 

ಶೋಭಾ ಚವ್ಹಾಣ, ಗುರುಬಸಯ್ಯ ಹಿರೇಮಠ, ಅರವಿಂದ ಹಂಗರಗಿ, ಎಸ್‌.ಎಸ್‌.ಓತಿಹಾಳ, ಪ್ರಶಾಂತ ಕಪಾಳೆ, ಪಿ.ಡಿ.ಓ. ಜಯಶ್ರೀ ತುಂಗಳ ಹಾಗೂ ಎಂ.ಎಸ್‌.ಖೊದ್ನಾಪೂರ ಇನ್ನಿತರರು ಸಹ ಉಪಸ್ಥಿತರಿದ್ದರು.  

 ಆರ್‌.ಎಸ್‌.ಘೋರೆ​‍್ಡ ನಿರೂಪಿಸಿದರು. ನಾಗೇಂದ್ರ ಸಿನ್ನೂರ ಸ್ವಾಗತಿಸಿದರು.  ನವರಸಪುರ ಎಲ್ಲ ಬಡಾವಣೆಗಳ ಸಾರ್ವಜನಿಕರು, ಹಿರಿಯರು, ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.