ನಿವೇಶನ ರಹಿತ ಫಲಾನುಭವಿಗಳಿಗೆ ಕೂಡಲೇ ನಿವೇಶನ ಕಲ್ಪಿಸಲು ಆಗ್ರಹ

     ನಿವೇಶನ ರಹಿತ ಫಲಾನುಭವಿಗಳಿಗೆ ಕೂಡಲೇ ನಿವೇಶನ ಕಲ್ಪಿಸಲು ಆಗ್ರಹ  Demand to immediately provide housing sites to beneficiaries who do not own a site

ಲೋಕದರ್ಶನ ವರದಿ 

ರೋಣ, ಸೆ. 4: ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ 2013ರಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಕೂಡಲೇ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ರೋಣ ತಾಲೂಕು ಸ್ಲಂ ಸಮಿತಿ ನೇತೃತ್ವದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.  

ರೋಣ ಪಟ್ಟಣದಲ್ಲಿ ಸುಮಾರು 13 ವರ್ಷಗಳ ಹಿಂದೆ ನೂರಾರು ಬಡ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳು ಸರ್ಕಾರದ ನಿವೇಶನ ಮತ್ತು ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಪರೀಶೀಲಿಸಿದ ಅಂದಿನ ತಹಶೀಲ್ದಾರ್ ಅವರು ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರಗಳನ್ನು ವಿತರಿಸಿದ್ದರು. ಆದರೆ ಹಕ್ಕುಪತ್ರ ಪಡೆದು ಹಲವು ವರ್ಷಗಳು ಕಳೆದರೂ ಇದುವರೆಗೆ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.  

ತಾಲೂಕು ಸಮಿತಿ ಅಧ್ಯಕ್ಷ ಬಸವರಾಜ ಕುರಿ ಮಾತನಾಡಿ, 2013ರಲ್ಲಿ ನೂರಾರು ಬಡ ಕುಟುಂಬಗಳು ನಿವೇಶನ ಹಾಗೂ ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಇದುವರೆಗೆ ನಿವೇಶನ ಹಂಚಿಕೆ ಮಾಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು. ಬಾಡಿಗೆ ಮನೆಗಳಲ್ಲಿ ಹಾಗೂ ಗುಡಿಸಲು ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಸರ್ಕಾರದ ವಸತಿ ಯೋಜನೆಗಾಗಿ ವರ್ಷಗಳಿಂದ ಕಾಯುತ್ತಿವೆ. ಹೀಗಾಗಿ ಹಕ್ಕುಪತ್ರ ಪಡೆದಿರುವ ಫಲಾನುಭವಿಗಳಿಗೆ ತಕ್ಷಣ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.  

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್‌. ಮಾನ್ವಿ ಮಾತನಾಡಿ, ರೋಣ ಪಟ್ಟಣದಲ್ಲಿ ಹಲವು ವರ್ಷಗಳಿಂದ ಸರ್ಕಾರಿ ಹಾಗೂ ಖಾಸಗಿ ಜಾಗಗಳಲ್ಲಿ ನೂರಾರು ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಸ್ಲಂ ಪ್ರದೇಶಗಳನ್ನು ಅಧಿಕೃತವಾಗಿ ಗುರುತಿಸಿ, ಅಲ್ಲಿ ವಾಸಿಸುವ ಜನರಿಗೆ ವಸತಿ ಹಾಗೂ ಮೂಲಸೌಕರ್ಯ ಕಲ್ಪಿಸಬೇಕು. ಸರ್ಕಾರ ಹಲವು ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೌಲಭ್ಯಗಳು ಅರ್ಹರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.  

ರೋಣ ಪಟ್ಟಣದ ಸುಮಾರು ನೂರಾರು ಬಡ ಕುಟುಂಬಗಳಿಗೆ 2013ರ ಫೆ. 7ರಂದು ತಹಶೀಲ್ದಾರ್ ಕಚೇರಿಯಿಂದ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಗಿತ್ತು. ಆದರೆ ಹಕ್ಕುಪತ್ರಗಳಲ್ಲಿ ಯಾವ ಸರ್ವೇ ಸಂಖ್ಯೆಯಲ್ಲಿ ನಿವೇಶನ ಮಂಜೂರು ಮಾಡಲಾಗಿದೆ ಎಂಬ ವಿವರ ಸ್ಪಷ್ಟವಾಗಿ ನಮೂದಿಸದಿರುವುದರಿಂದ ಫಲಾನುಭವಿಗಳು ಗೊಂದಲಕ್ಕೊಳಗಾಗಿದ್ದಾರೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.  

ಬೇಡಿಕೆಗಳನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ಹಾಗೂ ರೋಣ ತಾಲೂಕು ಸ್ಲಂ ಸಮಿತಿ ಸಹಯೋಗದಲ್ಲಿ ತಹಶೀಲ್ದಾರ್ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಈ ಕುರಿತು ರೋಣ ಪುರಸಭೆಯ ಮುಖ್ಯಾಧಿಕಾರಿಗೂ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಸ್ಲಂ ಸಮಿತಿ ಮುಖಂಡರಾದ ಎಂ.ಬಿ. ನದಾಫ್, ಪರವೀನಬಾನು ಹವಾಲ್ದಾರ್, ಮೌಲಾಸಾಬ್ ಗುಚ್ಚಿ, ಪುಷ್ಪಾ ವಿಜಾಪುರ, ಆರೀಫ್ ಕಾಗದಗಾರ, ಆಯಿಷಾ ನದಾಫ್ ಸೇರಿದಂತೆ ರೋಣ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಸ್ಲಂ ಪ್ರದೇಶಗಳ ನೂರಾರು ನಿವಾಸಿಗಳು ಉಪಸ್ಥಿತರಿದ್ದರು.