ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವ ಹೆಗ್ಗಳಿಕೆ ಭಾರತದ್ದು. ವಿಶ್ವದಲ್ಲಿಯೇ ಬೃಹತ್ ಸಂವಿಧಾನ ಹೊಂದಿರುವ ದೇಶ ಭಾರತ ಎನ್ನುವ ಹಿರಿಮೆ ನಮ್ಮದು. ಹಲವು ಮತಗಳು, ಧರ್ಮಗಳು, ಜಾತಿಗಳು, ಪಂಥಗಳು, ವೇಷಗಳು, ಭಾಷೆಗಳು ಹೊಂದಿರುವ ವಿವಿಧತೆಯ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಗರಿಮೆ ನಮ್ಮದು. ಸಮಾನತೆಯ ತತ್ವವನ್ನು ಸಾರುವ ಸ್ವತಂತ್ರ್ಯ ರಾಷ್ಟ್ರ ನಮ್ಮದು. ಬುದ್ಧ, ಬಸವ, ಅಂಬೇಡ್ಕರ್ ಅವರಂತ ಪುಣ್ಯ ಪುರುಷರು ಹುಟ್ಟಿ ಸಮಾನತೆಯ ಭಾರತ ನಿರ್ಮಾಣದ ಕನಸು ಕಂಡ ದೇಶ ನನ್ನದು. ಲಾಲ, ಬಾಲ, ಪಾಲರಂತ ತೀವ್ರಗಾಮಿಗಳು, ಆಜಾದ್, ಭಗತ್, ನೇತಾಜಿಯಂಥ ಕ್ರಾಂತಿಕಾರಿಗಳು ಭಾರತದ ಭವಿಷ್ಯವನ್ನು ಬದಲಾಯಿಸಲು ತಮ್ಮ ಇಡೀ ಬದುಕನ್ನೆ ಬಲಿಕೊಟ್ಟ ಮಹಾತ್ಮ ನಾಡು ನಮ್ಮದು. ಇಡೀ ಜಗತ್ತಿಗೆ ಹೊಸತನವನ್ನು ಕಲಿಸಿದ ಭಾರತ ನಮ್ಮದು. ಜ್ಞಾನಕ್ಕಾಗಿ ಅಂಗಲಾಚುವಾಗ ಕೈ ಎತ್ತಿ ನೀಡಿದ ಕರುನಾಳು ಭಾರತ ನಮ್ಮದು. ತಕ್ಷಶಿಲೆ, ವಿಕ್ರಮಶಿಲೆ ಹಾಗೂ ನಳಂದದಂತಹ ವಿಶ್ವ ವಿದ್ಯಾಲಯಗಳು ಲಕ್ಷ ಲಕ್ಷ ಜನರ ಜ್ಞಾನದ ಹಸಿವನ್ನು ತಣಿಸಿ ವಿಶ್ವಕ್ಕೆ ಅಕ್ಷರ ಹಂಚಿದ ವಿಶ್ವಗುರು ಭಾರತ ನಮ್ಮದು. ಕಂಡ ಕಂಡವರು ಆಸೆಗಣ್ಣಿನಿಂದ ದೇಶದ ಮೇಲೆ ದಂಡೆತ್ತಿ ಬಂದು ಕೊಳ್ಳೆ ಹೊಡದುಕೊಂಡು ಹೋದರು ಕೂಡ ಅದನ್ನು ಸಮರ್ಥವಾಗಿ ಎದುರಿಸಿ ಫಿನಿಕ್ಸ್ ಹಕ್ಕಿಯ ಹಾಗೆ ಮೇಲೆದ್ದು ಬಂದ ಮಹಾನ್ ಭಾರತ ನಮ್ಮದು. ನೀರು ಕೇಳಿದರೆ ಪಾನಕ ನೀಡಿ, ಹಸಿವು ಎಂದವರಿಗೆ ಮೃಷ್ಟಾನ್ನವನ್ನು ಉಣಬಡಿಸಿದ ಕೊಡುಗೈ ದಾನಿ ಎಂದು ಕರೆಸಿಕೊಂಡ ದೇಶ ನಮ್ಮದು. ನಾಗರಿಕತೆಯ ತೊಟ್ಟಿಲಾಗಿ, ಸಮೃದ್ಧಿಯ ಮೆಟ್ಟಿಲಾಗಿ, ವಿಶ್ವಕ್ಕೆ ಗುರುವಾಗಿ, ಬದುಕಿನ ಗುರಿಯಾಗಿ, ಆಧ್ಯಾತ್ಮದ ನಿಧಿಯಾಗಿ, ಜ್ಞಾನದ ಸುಧೆಯಾಗಿ, ವಿಜ್ಞಾನದ ಕಡಲಾಗಿ, ಭರವಸೆಯ ಬೆಳಕಾಗಿ, ಜಗತ್ತನ್ನೆ ತನ್ನ ಕಡೆಗೆ ಸೆಳೆದುಕೊಂಡ ಆಯಸ್ಕಾಂತದಂತ ಭಾರತ ನಮ್ಮದು. ಈ ಎಲ್ಲ ಕಾರಣಗಳಿಂದಲೇ ಇಂದು ಇಡೀ ವಿಶ್ವವೇ ಭಾರತದ ಕಡೆಗೆ ಮುಖ ಮಾಡಿ ನೋಡುತ್ತದೆ. ಭಾರತವನ್ನು ಜಗತ್ತಿನಲ್ಲಿಯೇ ಮತ್ತೋಂದು ಜಗತ್ತು ಎಂದು ಕರೆಯುತ್ತದೆ. ಆದರೆ ಇಷ್ಟೆಲ್ಲ ಇರುವ ಈ ನಮ್ಮ ದೇಶದಲ್ಲಿ ಸಮಾನತೆಯ ಹೆಸರಿನಲ್ಲಿ ಅಸಮಾನತೆಯನ್ನು ತೋರಿಸುತ್ತಿರುವುದು ನಮ್ಮ ಕಣ್ಣಿಗೆ ಕಾಣುತ್ತಿಲ್ಲವೋ? ಇಲ್ಲಾ ಕಂಡು ಕಾಣದಂತೆ ತೆಪ್ಪಗಿದ್ದೀವೋ? ಒಂದು ಅರ್ಥವಾಗುತ್ತಿಲ್ಲ.
ಪ್ರತಿಬಾರಿಯೂ ಚುನಾವಣೆ ಬರುತ್ತದೆ. ನಾವು ಮತ ಹಾಕುತ್ತೇವೆ. ನಮಗ್ಯಾರು ಬೇಕೋ ಅವರನ್ನು ಆರಿಸುತ್ತೇವೆ. ಒಮ್ಮೆ ಧರ್ಮಾಧಾರಿ, ಮತ್ತೊಮ್ಮೆ ಜಾತಿಯಾಧಾರಿತ, ಮಗದೊಮ್ಮೆ ಪಕ್ಷ ಆಧಾರಿತ ಆಯ್ಕೆ ಮಾಡಿ ಕೈ ತೊಳೆದುಕೊಂಡು ಬಿಡುತ್ತೇವೆ. ಆದರೆ ಈ ಆಯ್ಕೆಯ ಜೊತೆಯಲ್ಲಿಯೇ ನಮ್ಮಲ್ಲಿ ಕೆಲವು ಪ್ರಶ್ನೆಗಳು ಮೂಡಿದ್ದರೂ ಅದರ ಕುರಿತು ಲಕ್ಷ್ಯ ಕೊಡದೇ ಅಲ್ಲೇ ಮರೆತು ಬಿಡುತ್ತೇವೆ. ಒಮ್ಮೆ ಆಲೋಚಿಸಿ ನೋಡಿ; ಸರ್ಕಾರಿ ನೌಕರಿ ಮಾಡಬೇಕು ಎಂದರೆ ನೂರಾರು ಷರತ್ತುಗಳನ್ನು ಹಾಕಿ ಕಟ್ಟಿ ಹಾಕುತ್ತಾರೆ. ಆದರೆ ಸರ್ಕಾರವನ್ನೇ ನಡೆಸಬೇಕಾದವರಿಗೆ ಮಾತ್ರ ಆ ಷರತ್ತುಗಳಿಂದ ವಿನಾಯ್ತಿ ನೀಡುತ್ತಾರೆ. ಇದು ಹೀಗ್ಯಾಕೆ? ಎನ್ನುವುದು ನನಗೆ ಇಲ್ಲಿಯವರಗೂ ಅರ್ಥವಾಗಿಲ್ಲ. ಅದರಲ್ಲೂ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಲೇ ಟಿಕೆಟ್‌ಗಾಗಿ ಲಾಬಿ, ಟಿಕೆಟ ಸಿಗದಿದ್ದರೆ ಪಕ್ಷಾಂತರ ಪರ್ವ ಎಂಬ ಮಂಗನಾಟ ಆರಂಭವಾಗುತ್ತದೆ. ನಾನು ಎರಡು ಬಾರಿ ಎಂ.ಎಲ್.ಎ ಆಗಿದ್ದೇನೆ. ನಾನು ನಾಲ್ಕು ಬಾರಿ ಎಂ.ಎಲ್.ಎ ಆಗಿದ್ದೇನೆ. ನಾನು ಆರು ಬಾರಿ ಎಂ.ಎಲ್.ಎ ಆಗಿದ್ದೇನೆ ನನಗೆ ಟಿಕೇಟ್ ಇಲ್ಲ ಎಂದರೆ ಹೇಗೆ? ಎಂದು ಎಪ್ಪತ್ತು, ಎಂಬತ್ತು ವರ್ಷದ ವ್ಯಕ್ತಿಗಳು ಧಮಕಿ ಹಾಕುತ್ತಾರೆ. ನಿಮ್ಮ ಪಕ್ಷದಲ್ಲಿ ಟಿಕೇಟ್ ಕೊಡದೇ ಹೋದಲ್ಲಿ ಎದುರಾಳಿ ಪಕ್ಷ ನನ್ನನ್ನು ಸ್ವಾಗತಿಸುತ್ತಿದೆ ನಾನು ಆ ಕಡೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಬೇರೆ ನೀಡಲಾಗುತ್ತದೆ. ಆಗ ಎಚ್ಚಿರಕೆಗೆ ಮಣಿಯಬೇಕು. ಇಲ್ಲ ಪಕ್ಷಾಂತರವನ್ನು ಕಂಡು ತೆಪ್ಪಗಾಗಬೇಕು. ಇನ್ನೂ ವಿಚಿತ್ರವಾದ ಸತ್ಯವೆಂದರೆ ಜಗತ್ತಿನಲ್ಲಿಯೇ ಅತೀ ಹೆಚ್ಚಿನ ಯುವಕರನ್ನು ಹೊಂದಿದ ದೇಶ ಭಾರತ ಎಂದು ಹೇಳುವ ನಾವುಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಯುವಕರನ್ನು ಮೂಲೆಗುಂಪು ಮಾಡಿ ಅದೇ ಮುದಕರನ್ನು ಮುಂದಕ್ಕೆ ತಂದು ನಿಲ್ಲಿಸುತ್ತೇವೆ. ಗೊತ್ತಿದ್ದು ಗೊತ್ತಿದ್ದು ಅನಿವಾರ್ಯವಾಗಿ ಇವರನ್ನು ಆಯ್ಕೆ ಮಾಡುವುದಕ್ಕೆ ನಿರ್ಧಾರ ಮಾಡುತ್ತೀವಲ್ಲ ಹೀಗಾದರೆ ಈ ದೇಶದ ಗತಿ ಏನಾಗಬೇಕು ಹೇಳಿ? ಶೇ 70 ರಷ್ಟಿರುವ ಯುವಕರನ್ನು ಕೆಲವೇ ಕೆಲವು ಜನ ವಯೋ ವೃದ್ಧರು ಆಳುತ್ತಾರೆ. ಅದಕ್ಕೆ ನಾವು ಹೂಂ ಎಂದು ತಲೆ ಅಲ್ಲಾಡಿಸುತ್ತೇವೆ. ಅಂದ ಮೇಲೆ ಈ ದೇಶದಲ್ಲಿರುವ ನಾಯಕರ ತಪ್ಪೋ? ಅಥವಾ ಅವರನ್ನು ಒಪ್ಪಿಕೊಳ್ಳುತ್ತಿರುವ ನಮ್ಮಂತ ಯುವಕರ ತಪ್ಪೋ? ನನಗಂತೂ ಅರ್ಥವಾಗುತ್ತಿಲ್ಲ. ಈ ರೀತಿಯ ವ್ಯವಸ್ಥೆಗೆ ಸಂವಿಧಾನವೇ ಅವಕಾಶ ಮಾಡಿಕೊಟ್ಟಿದೆ ಸರ್ ಏನು ಮಾಡುವುದು ಮೊದಲಿನಿಂದಲೂ ಹೀಗೆ ನಡೆದುಕೊಂಡು ಬಂದಿದೆ. ಹೀಗೆಯೇ ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಮಟ್ಟಕ್ಕೆ ನಮ್ಮ ಯುವ ಮನಗಳು ತಲುಪುತ್ತಿರುತ್ತಿರುವುದು ಶೋಚನೀಯ ಸಂಗತಿ. ಇದನ್ನು ನೋಡುತ್ತಿದ್ದರೆ ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡುವ ಬದಲು ಅಪ್ಪನಿಗೆ ಎರಡನೇ ಹಂಡತಿ ತರಲು ಹವಣಿಸುವಂತೆ ಎನಿತ್ತದೆ.
ಸಮಾನತೆಯ ಸಂದೇಶ ಸಾರುವ ಸಂವಿಧಾನ ಭಾರತ ದೇಶದ್ದು. ಜಗತ್ತಿನಲ್ಲಿಯೇ ಬೃಹತ್ ಸಂವಿಧಾನವಾಗಿ ಗುರುತಿಸಿಕೊಂಡ ಭಾರತ ಸಂವಿಧಾನದಲ್ಲಿ ಎಲ್ಲ ದೇಶಗಳ ಸಂವಿಧಾನದ ಬಿಂಬವನ್ನು ಕಾಣುತ್ತೇವೆ. ಸಂವಿಧಾನದ ಒಂದೊಂದು ಕಲಂಗಳು ಕೂಡ ಒಂದೊಂದು ಸತ್ಯವನ್ನು ಬಿಚ್ಚಿಡುತ್ತ ಸಾಗುತ್ತವೆ. ಯಾವುದೇ ಭಾಗವನ್ನು ಹುಡುಕಿದರೂ ಕೂಡ ಅಲ್ಲಿ ಭಾರತದ ಜ್ಞಾನದ ಬೆಳಕು ಪಸರಿಸುತ್ತದೆ. ಆ ಕಾರಣದಿಂದಾಗಿಯೇ ಇಂದು ಭಾರತದ ಸಂವಿಧಾನಕ್ಕೆ ಎಲ್ಲಿಲ್ಲದ ಜನಪ್ರೀಯತೆ ದೊರೆತಿದೆ. ನಮ್ಯ ಅನಮ್ಯತೆಯನ್ನು ಮೈಗೂಡಿಸಿಕೊಂಡು ರಚಿತಗೊಂಡಿರುವ ಸಂವಿಧಾನ ಇಂದು ಬೇರೆ ದೇಶದ ಸಂವಿಧಾನಗಳಿಗೆ ಮಾದರಿಯಾಗಿ ನಿಲ್ಲುತ್ತಿದೆ. ಅದರಲ್ಲೀಯೂ ಸಹ 14 ರಿಂದ 18ನೇ ಪರಿಛ್ಛೇದಗಳು ಸಮಾನತೆಯ ಹಕ್ಕುಗಳನ್ನೇ ಸಾರುತ್ತವೆ. ಆದರೆ ಇತ್ತೀಚಿಗೆ ಮುಂಬೈನ ಒಬ್ಬ ವಖೀಲರು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟ ಕೆಲವು ಪ್ರಶ್ನೆಗಳು ಸಾಮಾನ್ಯ ಜನರನ್ನು ಅಸಾಮಾನ್ಯವಾಗಿ ಕಾಡುತ್ತಿವೆ. ಉತ್ತರ ಕಂಡುಕೊಳ್ಳುವ ದಾರಿಯಲ್ಲಿ ಸಾಮನ್ಯವಾಗಿ ಮೂಡುತ್ತಿರುವ ಪ್ರಶ್ನೆ ಎಂದರೆ ಅವರಿಗೇಕೆ ಹಾಗೆ..? ನಮಗೇಕೆ ಹೀಗೆ...?. ಈ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಅಂದು ನಾನು ಓದಿದ ಪ್ರಶ್ನೆಗಳನ್ನೇ ಇಂದು ಈ ಅಂಕಣದ ಮೂಲಕ ತಮ್ಮೆದುರಿಗೆ ಇಡುತ್ತಿದ್ದೇನೆ. ಉತ್ತರವನ್ನು ಕಂಡುಕೊಳ್ಳುವ ಕಾರ್ಯ ಮಾತ್ರ ತಮ್ಮದೇ. ನನ್ನದೇನಿದ್ದರು ಇದ್ದದ್ದು ಇದ್ದಾಂಗ ಹೇಳುವುದಷ್ಟೆ. ಒಪ್ಪಿಕೊಳ್ಳುವುದು ಬಿಡುವುದು ತಮಗೇ ಬಿಟ್ಟಿದ್ದು.
ಆ ಪ್ರಶ್ನೆಗಳನ್ನು ಓದುತ್ತಿದ್ದರೇ ನಮ್ಮ ಮನಸ್ಸಿನಲ್ಲಿ ಭಾರತ ಶಾಸನಗಳಲ್ಲಿ ಇರುವ ಈ ರೀತಿಯ ಅವಕಾಶಗಳು ಒಂದು ಸದೃಢ ಭಾರತವನ್ನು ಕಟ್ಟಬೇಕಾದಲ್ಲಿ ಎಡರು ತೊರುಗಳನ್ನು ಉಂಟು ಮಾಡುವುದಕ್ಕೆ ಅವಕಾಶ ಮಾಡಿ ಕೊಡುತ್ತಿದೆಯೇ? ಎನ್ನುವಂತ ಅನುಮಾನ ಮೂಡುತ್ತದೆ. ಆ ಒಂದೊಂದು ಪ್ರಶ್ನೆಗಳನ್ನು ಮುಂದೆ ನೋಡುತ್ತ ಸಾಗೋಣ.
* ಒಬ್ಬ ವ್ಯಕ್ತಿಯು ಒಂದು ಚುನಾವಣೆಯಲ್ಲಿ ಎರಡು ಮತಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ. ಆದರೇ ಮತದಾರ ಮಾತ್ರ ಒಂದೇ ಮತಕ್ಷೇತ್ರದಲ್ಲಿ ಮಾತ್ರ ಮತದಾನ ಮಾಡಲು ಅವಕಾಶ ನೀಡಿದೆ ಏಕೆ?
ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಒಂದು ಕಡೆ ಮತದಾನ ಮಾಡುವುದಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಹೆಸರು ಉಳಿದುಕೊಂಡರೆ ಅದನ್ನು ತೆಗೆದು ಹಾಕಲಾಗುತ್ತದೆ. ಅಪ್ಪಿ ತಪ್ಪಿ ಆತ ಎರಡೂ ಕಡೆ ಹೆಸರಿದೆ ನಾನು ಎರಡೂ ಕಡೆ ಮತದಾನ ಮಾಡುತ್ತೇನೆ ಎಂದರೆ ಸಾಧ್ಯವಿಲ್ಲ ಎಂದು ಸಾರಾ ಸಗಟ ತಳ್ಳಿಹಾಕಲಾಗುತ್ತದೆ. ಕದ್ದು ಮುಚ್ಚಿ ಗದ್ದಲ ಮಾಡಿ ಆತ ಮತದಾನ ಮಾಡಿದನೆಂದರೆೆ ಕಾನೂನಿನ ಉಲ್ಲಂಘನೆಯಾಗುತ್ತದೆ. ಇದರಿಂದಾಗಿ ಮತದಾರ ತನ್ನ ಕ್ಷೇತ್ರದಲ್ಲಿ ಯಾರು ಚುನಾವಣೆಗೆ ನಿಲ್ಲುತ್ತಾರೋ ಅಂತವರಲ್ಲಿ ಒಬ್ಬನನ್ನು ಆಯ್ಕೆ ಮಾಡಬೇಕು. ಅವನು ಯೋಗ್ಯನೋ? ಅಯೋಗ್ಯನೋ? ಪೂರಕನೋ? ಮಾರಕನೋ? ಗೊತ್ತಿಲ್ಲ. ಒಟ್ಟಿನಲ್ಲಿ ಚುನಾಯಿಸುತ್ತಾರೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಸೋಲಿನ ಭಯವಿರುವ ವ್ಯಕ್ತಿ ಅಥವಾ ಒಂದು ಕ್ಷೇತ್ರದ ಅಭ್ಯರ್ಥಿಯ ವಿರುದ್ಧ ಪ್ರಬಲ ಪ್ರತಿಸ್ಪರ್ಧಿ ಇಲ್ಲವೆಂದಾಗ ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧೇ ಮಾಡಿದ ವ್ಯಕ್ತಿಯನ್ನೇ ಕಣಕ್ಕಿಳಿಸುತ್ತಾರೆ. ಒಂದು ವೇಳೆ ಎರಡೂ ಕ್ಷೇತ್ರದಲ್ಲಿ ಆತ ಆಯ್ಕೆಯಾದರೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಗುತ್ತದೆ. ನಂತರ ತೆರವಾದ ಆ ಕ್ಷೇತ್ರಕ್ಕೆ ಮತ್ತೊಮ್ಮೆ ಮತದಾನ ಮಾಡುತ್ತಾರೆ. ಚುನಾವಣೆಗೆ ಖರ್ಚು ಮಾಡುವ ಹಣ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಆಭ್ಯರ್ಥಿ ನೀಡುವುದಿಲ್ಲ. ಬದಲಿಗೆ ಮತದಾನ ಮಾಡಿದ ನಾವುಗಳು ನೀಡಿದ ತೆರಿಗೆ ಹಣವನ್ನೇ ಇಲ್ಲಿ ಹಾಳ ಮಾಡಲಾಗುತ್ತದೆ. ಇಷ್ಟೆಲ್ಲ ಇದ್ದರೂ ಇದಕ್ಕೇಕೆ ಅವಕಾಶ ಮಾಡಿಕೊಟ್ಟರು? ಸ್ಫರ್ಧೆ ಮಾಡಲು ಅವಕಾಶ ಕೊಟ್ಟವರು ಮತದಾನ ಮಾಡುವುದಕ್ಕೆ ಅವಕಾಶವೇಕೆ ಕೊಡಲಿಲ್ಲ? ಇದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿಲ್ಲವೇ? ಎಂಬುದು ಜನ ಸಾಮಾನ್ಯನ ಪ್ರಶ್ನೆ.
* ಒಬ್ಬ ಆರೋಪಿ ಜೈಲಲ್ಲಿದ್ದರೆ ಮತ ಹಾಕುವಂತಿಲ್ಲ. ಆದರೆ ಜೈಲಲ್ಲಿದ್ದೇ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನೇಕೆ ಮಾಡಿ ಕೊಟ್ಟಿದೆ?
ಇದು ಕೂಡ ಮೇಲೆ ಹೇಳಿದ ಹಾಗೆ ತಿರುವು ಮುರುವಾಗೇ ಕಾಣುತ್ತದೆ. ವ್ಯಕ್ತಿ ಆರೋಪಿಯಾಗಿದ್ದರೆ ಅವನಿಗೆ ಮತದಾನ ಮಾಡುವ ಅವಕಾಶ ನೀಡುವುದಿಲ್ಲ. ಆದರೆ ಆರೋಪಿಯಾದ ಮಹಾನುಭಾವನೊಬ್ಬ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ. ಕಾರಣ ಆರೋಪಿ ಮುಂದೆ ಆರೋಪ ಮುಕ್ತವಾಗಿ ಆಡಳಿತ ಮಾಡಬಹುದು. ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬಳಿಕ ಆತ ಅಪರಾಧಿ ಎಂದು ಸಾಬೀತಾಗಿ ಶಿಕ್ಷೆಗೆ ಗುರಿಯಾದರೆ ಆ ಸ್ಥಾನಕ್ಕೆ ಮತ್ತೆ ಚುನಾವಣೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವ ಮಾತು ಇದಕ್ಕೆ ಸರಿಯಾಗುತ್ತದೆ ಅಲ್ಲವೇ? ಇಲ್ಲಿ ಆರೋಪಿ ಸ್ಪರ್ಧಿಸಬಹುದು. ಆದರೆ ಆರೋಪಿಯಾದ ವ್ಯಕ್ತಿ ಮತದಾನ ಮಾಡಲು ಅವಕಾಶ ನೀಡದೇ ಇದ್ದರೆ ಆ ವ್ಯಕ್ತಿ ಅಪಾರಾಧಿಯಾಗಿಯೇ ಸಿದ್ಧನಾಗುತ್ತಾನೋ ಹೇಗೋ? ಎಂದು ಸಾಮನ್ಯನೊಬ್ಬ ಕೇಳುತ್ತಾನೆ. ಉತ್ತರ ನೀಡುವವರಾರು?
* ಒಬ್ಬ ವ್ಯಕ್ತಿ ಜೈಲಿಗೆ ಹೋದರೆ ಸಾಕು ಆ ವ್ಯಕ್ತಿಗೆ ಸರ್ಕಾರಿ ಕೆಲಸ ದೊರುಕುವುದೇ ಇಲ್ಲ. ಆದರೇ ಜೈಲಿಗೆ ಹೋದವರು ಮತ್ತು ಜೈಲಿನಿಂದ ಬಂದವರೆಲ್ಲರಿಗೂ ಸರ್ಕಾರವನ್ನು ರಚಿಸುವ ಅವಕಾಶ ಮಾಡಿಕೊಡುತ್ತಿರುವುದು ಯಾವ ನ್ಯಾಯ?
ತಿಳಿದೋ ತಿಳಿಯದೆಯೋ ಅಪರಾಧ ಮಾಡಿ ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದ ವ್ಯಕ್ತಿಗೆ ಸರ್ಕಾರಿ ಕೆಲಸ ದೊರಕುವುದಿಲ್ಲ. ಸಾಲದ್ದಕ್ಕೆ ಸಮಾಜದಲ್ಲಿ ತಿರಸ್ಕಾರದ ನೋವನ್ನು ಎದುರಿಸಬೇಕಾಗುತ್ತದೆ. ಆದರೇ ಜೈಲಿಂದ ಬಂದ ಎಷ್ಟೋ ವ್ಯಕ್ತಿಗಳಿಗೆ ಸರ್ಕಾರನಡೆಸಲು ಅನುಕೂಲ ಮಾಡಿಕೊಡಲಾಗಿದೆ. ಕಳ್ಳರು ಸಹ ಒಳ್ಳೇಯವರಂತೆ ಸೋಗು ಹಾಕುತ್ತಾರೆ, ಮಳ್ಳರು ಸಹ ಮುಖ್ಯಮಂತ್ರಿಯಾಗುತ್ತಾರೆ. ಸುಳ್ಳರು ಸಹ ಶಾಸಕರಾಗುತ್ತಾರೆ. ಆದರೇ ಸಾಮನ್ಯನು ಮಾತ್ರ ಸುಮ್ಮನಿರುತ್ತಾನೆ ಇದು ಯಾವ ರೀತಿಯ ನ್ಯಾಯ ಗೊತ್ತಾಗುತ್ತಿಲ್ಲ.
* ಸೈನ್ಯದಲ್ಲಿ ಕೆಲಸ ಮಾಡಲು ಕನಿಷ್ಠ ಪಿಯುಸಿ ಮುಗಿಸಿರಬೇಕು. 10 ಕಿ.ಮಿ ಓಟವನ್ನು ನಿಗದಿತ ಸಮಯಕ್ಕೆ ಓಡಬೇಕು. ದೈಹಿಕ ಹಾಗೂ ಮಾನಸಿಕವಾಗಿ ಸದೃಢನಾಗಿರಬೇಕು. ಆದರೆ ರಕ್ಷಣಾ ಸಚಿವನಾಗಲು, ಗೃಹ ಸಚಿವನಾಗಲು ಯಾವ ಯೋಗ್ಯತೆ ಬೇಕು?
ಒಬ್ಬ ವ್ಯಕ್ತಿ ಸೈನ್ಯಕ್ಕೆ ಸೇರಬೇಕೆಂದರೆ ಕನಿಷ್ಠ ವಿದ್ಯಾರ್ಹತೆ ಹಾಗೂ ದೈಹಿಕ ಕ್ಷಮತೆಯ ಮೇಲೆ ನಿರ್ಧರಿಸುತ್ತಾರೆ. ಆದರೆ ಅವರ ಮೇಲೆ ಆಡಳಿತ ಮಾಡುವ ಆಡಳಿತಗಾರರಿಗೆ ಯಾವ ರೀತಿಯ ಅರ್ಹತೆಯನ್ನೂ ನಿಗಧಿಪಡಿಸಿಲ್ಲ್ಲ ಏಕೆ? ಅನಕ್ಷರಸ್ಥನಾದವನು, ದಢೂತಿ ದೇಹ ಹೊಂದಿದವನು ಸಹ ಆಡಳಿತಗಾರನಾಗಲು ಅವಕಾಶ ಮಾಡಿಕೊಟ್ಟಿರುವುದು ನೋಡಿದರೇ ಇಲ್ಲಿ ಕಾಯುವುದಕ್ಕೆ ನಿಂತವರಿಗೆ ಮಾತ್ರ ಅರ್ಹತೆ ಬೇಕು. ಮಿಕ್ಕ ಅನರ್ಹರೆಲ್ಲರು ಆಡಳಿತಗಾರರಾಗಬೇಕು ಎನ್ನುವ ಸಂದೇಶ ಸಾರುವಂತಿದೆ ಎನ್ನಿಸುವುದಿಲ್ಲವೇ? ಅದಕ್ಕೆ ಹೇಳಿದ್ದು ಇಲ್ಲಿ ಸಾಮಾನ್ಯನಿಗೆ ಮಾತ್ರ ಕಟ್ಟು ಪಾಡುಗಳ ಕಟ್ಟಳೆಗಳು. ಆದರೆ ಆಡಳಿತಗಾರರಿಗೆ ಮಾತ್ರ ಅವೇ ಮೆಟ್ಟಿಲುಗಳು.
* ಶಿಕ್ಷಕನಾಗಲು ನಿಗಧಿತ ಶಿಕ್ಷಣ ಬೇಕು. ಆದರೆ ಶಿಕ್ಷಣ ಸಚಿವನಾಗುವವನು ಬರೀ ಚುನಾಯಿತನಾದರೇ ಸಾಕೆ?
ಇದು ನಮ್ಮ ದೌರ್ಭಾಗ್ಯವೋ? ಇಲ್ಲಾ ಮೂರ್ಖತನದ ಪರಮಾವದಿಯೋ? ಗೊತ್ತಿಲ್ಲ. ಕಣ್ಣು ಮುಚ್ಚಿ ಎಲ್ಲವನ್ನು ಒಪ್ಪಿಕೊಳ್ಳುತ್ತಿದ್ದೇವೆ. ಯಾಕೆಂದರೆ ನಮ್ಮ ಶಾಸನಗಳು ಅದನ್ನೇ ಒಪ್ಪಿಕೊಳ್ಳುವಂತೆ ಕಲಿಸಿಕೊಟ್ಟಿವೆ. ಅದಕ್ಕೆ ಒಂದು ಉದಾಹರಣೆ ಇದು. ಒಬ್ಬ ವ್ಯಕ್ತಿ ಶಿಕ್ಷಕನಾಗಬೇಕಾದರೆ ಅವನು ನಿಗಧಿತ ಶಿಕ್ಷಣವನ್ನು ಪಡೆದಿರಬೇಕು. ಹೇಳಿದ ಡಿಗ್ರಿಯನ್ನು ಪೂರೈಸಿರಬೇಕು. ಆದರೇ ದೇಶವನ್ನೆ ಮುನ್ನಡೆಸಬೇಕಾದ ಶಿಕ್ಷಣ ಸಚಿವನಿಗೆ ಇಂತದೇ ಮಟ್ಟದ ಶೈಕ್ಷಣಿಕ ಅರ್ಹತೆ ಇರಬೇಕು ಎಂದು ಯಾಕೆ ಸಂವಿಧಾನ ನಿಗಧಿಪಡಿಸಲಿಲ್ಲ ಎಂಬುದು ನಮ್ಮ ಜನಸಾಮಾನ್ಯನಲ್ಲಿ ಎದ್ದಿರುವ ಪ್ರಶ್ನೆಯಾಗಿದೆ.
* ಅರ್ಥಜ್ಞಾನವೇ ಇಲ್ಲದ ವ್ಯಕ್ತಿ ಹಣಕಾಸು ಮಂತ್ರಿಯಾಗುವುದು ವ್ಯರ್ಥವಲ್ಲವೇ?
ಹೀಗೊಂದು ಪ್ರಶ್ನೆಗೆ ಉತ್ತರ ನೀಡುವುದೇ ಕಷ್ಟವಾಗುತ್ತದೆ. ಕಾರಣ, ದೇಶವನ್ನು ಮುನ್ನಡೆಸಬೇಕಾದ ಹಣಕಾಸು ಸಚಿವನಿಗೆ ಕನಿಷ್ಠ ದೇಶದ ಆರ್ಥಿಕ ಸ್ಥಿತಿಗತಿ ಗೊತ್ತಿರಬೇಕು. ಹಾಗೂ ಆ ಕುರಿತು ಶಿಕ್ಷಣವನ್ನು, ಜ್ಞಾನವನ್ನು ಪಡೆದಿರಬೇಕು. ಕಾನೂನು ಕಲಿತವನು ಮಾತ್ರ ಕಾನೂನಿನ ಪಾಠ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹಾಗೆಯೇ ಅರ್ಥ ಖಾತೆಯನ್ನು ನಿಭಾಯಿಸುವ ವ್ಯಕ್ತಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದರೆ ಮಾತ್ರ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ಸಮರ್ಥನಾಗಿರುತ್ತಾನೆ. ಇಲ್ಲದಿದ್ದರೆ ನಾಯಿಗೆ ಕೆಲಸ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿದಂತೆ ಎಲ್ಲದಕ್ಕೂ ಆರ್ಥಶಾಸ್ತ್ರವನ್ನರಿತ ಪಿ.ಎಗಳೆದುರು ಹಲ್ಲುಗಿಂಜಬೇಕಾಗುವುದು. ಇದರಿಂದ ದೇಶದ ಜನತೆ ಜಗದ ಮುಂದೆ ಹಲ್ಲು ಗಿಂಜುವ ಸ್ಥಿತಿ ನಿರ್ಮಾಣವಾಗುತ್ತದೆ.
* ಉದ್ಯೋಗ ಪಡೆಯಲು ಗರಿಷ್ಠ ವಯೋಮಿತಿ ಇದೆ. ಆದರೆ ಉದ್ಯೋಗ ನೀಡುವವರಿಗೇಕೆ ಇದು ಅನ್ವಯವಾಗುವುದಿಲ್ಲ.?
ಒಂದು ಉದ್ಯೋಗಕ್ಕೆ ಅರ್ಜಿಸಲ್ಲಿಸುವಾಗ ಗರೀಷ್ಠ ವಯೋಮಿತಿ ಇದೆ. ವಯೋಮಿತಿ ಮೀರಿದವರು ಅರ್ಜಿ ಸಲ್ಲಿಸಲು ಅನರ್ಹರಾಗುತ್ತಾರೆ. ಇದರಿಂದ ಎಷ್ಟೋ ಜನರು ಸರ್ಕಾರಿ ಕೆಲಸದಿಂದ ವಂಚಿತರಾಗಿದ್ದಾರೆ. ಆದರೇ ಸರ್ಕಾರ ನಡೆಸಲು ಉದ್ಯೋಗಗಳನ್ನು ಸೃಷ್ಠಸುವ ನಾಯಕರುಗಳಿಗೇಕೆ ಈ ವಯೋಮಿತಿ ಅನ್ವಯವಾಗುವುದಿಲ್ಲ. ಒಂದು ವೇಳೆ ಮಾಡಿದರೆ ಬಹುಶಃ ಒಂದೇ ವಂಶವೇ ಐವತ್ತು ವರ್ಷಗಳ ಕಾಲ ದೇಶವನ್ನು ಆಳುವುದು ತಪ್ಪುತ್ತಿತ್ತು ಅನ್ನಿಸುತ್ತದೆ.
* ಸಾಮಾನ್ಯರಿಗೆ ನಿವೃತ್ತಿ ವಯೋಮಿತಿ. ಶಾಸಕರಿಗೇಕೆ ಇಲ್ಲ ರೀತಿ?
ಒಬ್ಬ ಸಾಮಾನ್ಯ ವ್ಯಕ್ತಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡರೆ ಅವನಿಗೆ ನಿಗದಿತ ವರ್ಷಗಳ ವರೆಗೆ ಅಂದರೇ ಕೇಂದ್ರ ನೌಕರನಿಗೆ 62 ವರ್ಷ ಹಾಗೂ ರಾಜ್ಯ ನೌಕರನಿಗೆ 60 ವರ್ಷ ನಿಗಧಿಪಡಿಸಲಾಗಿದೆ. ಅದರ ನಂತರದಲ್ಲಿ ನಿವೃತ್ತಿ ಕಡ್ಡಾಯ. ಅರವತ್ತಕ್ಕೆ ಅರಳು ಮರಳು ಎಂದು ಹಿರಿಯರು ಹೇಳುತ್ತಿದ್ದರು. ಆ ಕಾರಣದಿಂದ ನಿವೃತ್ತಿ ವಯಸ್ಸನ್ನು 62ಕ್ಕೆ ನಿಗದಿ ಮಾಡಿದ್ದಾರೆ ಅಂಬೋಣ. ಆದರೆ ಮಂತ್ರಿಯಾಗಿ ಅಧಿಕಾರ ಮಾಡುವವನು ತೊಂಬತ್ತಾದರೂ ಸಹ ಅಧಿಕಾರಕ್ಕಾಗಿ ಹಪ ಹಪಿಸುತ್ತಾನೆ. ಚುನಾವಣೆಗೆ ಸ್ಪರ್ಧಿಸಿ ಗೆದ್ದು ಅಧಿಕಾರ ಮಾಡುತ್ತಾನೆ. ಇವರಿಗೆ ಅರಳು ಮರಳು ಹಿಡಿಯುವುದಿಲ್ಲವೇ? ಹೀಗೆ ಜನ ಸಾಮಾನ್ಯನ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಹುಟ್ಟಿದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಉತ್ತರ ಭೂಪರೇ ಆಡಳಿತ ನಿರ್ವಣೆ ಮಾಡುವಾಗ ಈ ರೀತಿಯ ಕಾನುನುಗಳನ್ನು, ಇಂಥ ವ್ಯವಸ್ಥೆಗಳನ್ನು ಬದಲಿಸುವರಾರು ಎಂಬುದೆ ಒಂದು ಗೊಂದಲವಾಗಿದೆ.
ಹೀಗೆ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತ ಭಾರತ ಭವಿಷ್ಯದ ಕುರಿತು ಚಿಂತನೆ ಮಾಡುವ ಕೆಲವು ಜನರು ಭಾರತದಲ್ಲಿ ಏನಾದರೂ ಪರಿವರ್ತನೆಯ ಗಾಳಿ ಬೀಸಬೇಕಾದಲ್ಲಿ ಕೆಲವನ್ನಾದರೂ ಬದಲಾವಣೆ ಮಾಡಬೇಕು ಎಂದು ಬಯಸುತ್ತಾರೆ. ಅವರ ಆಲೋಚನೆಗಳನ್ನು ಒಂದು ಬಾರಿ ನೋಡಿದಾಗ...
* ಅಗತ್ಯವಿದ್ದಲ್ಲಿ ಕನಿಷ್ಟ ವಿದ್ಯಾರ್ಹತೆ ನಿಗದಿಯಾಗಲಿ
ಪ್ರತಿಯೊಂದಕ್ಕೂ ಇಂದು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದ್ದು ಅದರ ಆಧಾರದ ಮೇಲೆ ಸರ್ಕಾರದ ನಾಲ್ಕನೇ ಅಂಗ ಅಂದರೆ ಸಾರ್ವಜನಿಕ ಆಡಳಿತ ಕಾರ್ಯ ಮಾಡುತ್ತಿದೆ. ಕನಿಷ್ಠ ವಿದ್ಯಾರ್ಹತೆಯ ಆಧಾರದ ಮೇಲೆ ನ್ಯಾಯಾಂಗ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಇನ್ನೂ ಉಳಿದಿರುವುದು ಶಾಸಕಾಂಗ ಹಾಗೂ ಕಾರ್ಯಾಂಗ ಮಾತ್ರ. ಇಲ್ಲಿಯೂ ಸಹ ವಿದ್ಯಾರ್ಹತೆ ನಿಗದಿಯಾದರೆ ಅಂದರೆ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗೆ ಪ್ರತಿ ಅಭ್ಯರ್ಥಿಯು ಇಷ್ಟು ಶಿಕ್ಷಣವನ್ನು ಪಡೆದಿರಲೇ... ಬೇಕು ಎನ್ನುವ ಒಂದು ಕಾನೂನು ಹೊರಡಿಸಿದರೆ ಬಹುಶಃ ಆಡಳಿತದಲ್ಲಿ ಸುಧಾರಣೆಯಾಗಬಹುದು ಮತ್ತು ಯೋಗ್ಯತೆಯ ಆಧಾರದ ಮೇಲೆ ವಿದ್ಯಾರ್ಹತೆಯ ಆಧಾರದ ಮೇಲೆ ಖಾತೆಗಳನ್ನು ಹಂಚಿಕೆ ಮಾಡಿದರೆ ಪ್ರಬುದ್ಧ ಸರ್ಕಾರ ನಿರ್ಮಾಣವಾಗಬಹುದು ಎನ್ನುವುದ ಜನ ಸಾಮಾನ್ಯನ ಆಶಯವಾಗಿದೆ.
* ರಾಜಕೀಯದಲ್ಲೂ ಕಡ್ಡಾಯ ನಿವೃತ್ತಿ ಪದ್ಧತಿ ಬರಲಿ
ಸರ್ಕಾರಿ ಸೇವೆಗಳಲ್ಲಿ ನಿವೃತ್ತಿಯ ಯೋಜನೆ ಹೇಗಿದೆಯೊ ಹಾಗೆ ರಾಜಕೀಯ ಕ್ಷೇತ್ರದಲ್ಲಯೂ ಬರಬೇಕು. ಒಬ್ಬನು ಅತ್ಯತ್ತಮವಾದ ಶಿಕ್ಷಕನಾಗಿದ್ದರೂ ಕೂಡ, ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದ್ದರೂ ಸಹ, ಅನುಭವ ತುಂಬಿ ತುಳುಕುತ್ತಿದ್ದರು ಸಹ, ಅವಧಿ ಮುಗಿದ ಮೇಲೆ ನಿವೃತ್ತಿ ಆಗಲೇ ಬೇಕು ಎನ್ನುವ ನಿಯಮ ನಮ್ಮ ಕಾನೂನು ಪುಸ್ತಕದಲ್ಲೇ ಇದೆ. ಅದೆ ಪುಸ್ತಕದ ಖಾಲಿ ಇರುವ ಸ್ಥಳದಲ್ಲಿ ರಾಜಕಾರಣ ಮಾಡುವುದಕ್ಕೆ, ಅಧಿಕಾರ ಚಲಾಯಿಸುವುದಕ್ಕೆ, ಮಂತ್ರಿಯಾಗುವುದಕ್ಕೇ, ಗರಿಷ್ಠ ಇಷ್ಟು ವಯಸ್ಸು ಎಂದು ನಿಗಧಿ ಮಾಡಿದರೆ ಹಳೆ ಬೇರುಗಳ ನಂತರದ ದಿನಗಳಲ್ಲಿ ಹೊಸ ಚಿಗುರುಗಳು ಸಹ ಕಾಣುತ್ತವೆ. ಯುವಕರಿಗೂ ಸಹ ರಾಜಕೀಯದಲ್ಲಿ ಅವಕಾಶ ಸಿಕ್ಕು ಹೊಸತನದಿಂದ ಬದಲಾವಣೆ ಬರಬಹುದು. ದೇಶವು ಸಹ ಅಭಿವೃದ್ಧಿ ಪಥದೆಡೆಗೆ ಮುನ್ನಡೆಯಬಹುದು ಎನ್ನುವುದು ಜನಸಾಮಾನ್ಯರ ಇಚ್ಚೆಗಿದೆ.
ಇದೇ ನಮ್ಮ ದೇಶದ ದೌರ್ಭಾಗ್ಯ ಎನಿಸುತ್ತದೆ. ಈ ಎಲ್ಲ ಕಾರಣಗಳಿಂದಲೇ ಇಂದು ರಾಜಕಾರಣ ಎಂದಾಕ್ಷಣ ಮೂಗು ಮುರಿಯುವಂತಾಗಿದೆ. ರಾಜಕೀಯ ಎಂದರೆ ಕೆಟ್ಟದ್ದು ಎನ್ನುವ ಮಟ್ಟಕ್ಕೆ ಜನರು ಇಂದು ಆಲೋಚನೆ ಮಾಡುತ್ತಿದ್ದಾರೆ. ರಾಜಕೀಯ ಎನ್ನುವುದು ಒಂದು ದೇಶದ ಆಡಳಿತ ವ್ಯವಸ್ಥೆ ಎನ್ನುವುದನ್ನು ಮರೆತು ಹೋದಂತಾಗಿದೆ. ಬದಲಿಗೆ ಪುಂಡ ಪೋಕರಿಗಳ ದಂಡು ಹರಟೆ ಹೊಡೆಯುವ ಚಾವಡಿ ಕಟ್ಟೆ ಎನ್ನುವಂತೆ ಬಿಂಬಿಸುವುದಕ್ಕೆ ಕಾರಣವಾಗಿರುವ ಈ ವ್ಯವಸ್ಥೆಯನ್ನು ಬದಲಾವಣೆ ಮಾಡಿದಾಗ ಮಾತ್ರ ಈ ದೇಶದಲ್ಲಿ ಏನಾದರೂ ಪರಿವರ್ತನೆ ಸಾಧ್ಯ. ಏನಾದರು ಪರಿವರ್ತನೆ ಆಗಬೇಕು ಎನ್ನುವುದಾದರೆ ಇಂದು ಮೇಲೆ ಕಾಣಿಸಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ. ಪ್ರಜೆ ಮತ್ತು ರಾಜಕಾರಣಿಗಳಿಗೆ ಒಂದೇ ನಿಯಮ ಒಂದೇ ಕಾನೂನುಗಳು ಜಾರಿಗೆ ಬಂದಾಗ ಮಾತ್ರ ನಮ್ಮಲ್ಲಿ ನಿಜವಾದ ಸಮಾನತೆ ಮೂಡಿದಂತೆ. ಅಂದೆ ಭಾರತದ ಹೊಸ ಭವಿಷ್ಯಕ್ಕೆ ಮುನ್ನುಡಿ ಬರೆದಂತಾಗುತ್ತದೆ.
- * * * -