ಕನ್ನಡದ ಉಳಿವಿಗೆ ತಂತ್ರಜ್ಞಾನದ ನೆರವು ಅಗತ್ಯ ಕನ್ನಡ ಸಂಘ ಉಧ್ಘಾಟನೆ: ಸಾಹಿತಿ ಜೋಗಿ ಅಭಿಮತ

ಕನ್ನಡದ ಉಳಿವಿಗೆ ತಂತ್ರಜ್ಞಾನದ ನೆರವು ಅಗತ್ಯ ಕನ್ನಡ ಸಂಘ ಉಧ್ಘಾಟನೆ: ಸಾಹಿತಿ ಜೋಗಿ ಅಭಿಮತ  Technological assistance is necessary for the survival of Kannada. Kannada Sangha inauguration: Sahi

ಲೋಕದರ್ಶನ ವರದಿ 

ಬೆಳಗಾವಿ  07: ಕನ್ನಡ ಭಾಷೆಯ ಶಕ್ತಿ ಮತ್ತು ಸಾಧ್ಯತೆ ಅಗಾಧವಾದದ್ದು, ಈಗಿನ ಯುವಪೀಳಿಗೆ ತಂತ್ರಜ್ಞಾನದಿಂದ ವಿಮುಖರಾಗದೆ, ಕನ್ನಡ ಭಾಷೆಯನ್ನು ಬಳಸಲು, ಬೆಳೆಸಲು ಮತ್ತು ಉಳಿಸಲು ತಂತ್ರಜ್ಞಾನದ ನೆರವು ಪಡೆಯಬೇಕು ಎಂದು ಖ್ಯಾತ ಸಾಹಿತಿ ಮತ್ತು ಹಿರಿಯ ಪತ್ರಕರ್ತ ಜೋಗಿ ಹೇಳಿದರು.  

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಮಂಗಳವಾರದಂದು ನಡೆದ ಕನ್ನಡ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಕನ್ನಡವನ್ನು ಉಳಿಸುವುದು ನಮ್ಮ ಕೈಯಲ್ಲಿಲ್ಲ, ಆದರೆ ಅದನ್ನು ಬಳಸುವುದು ಮತ್ತು ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದೆ. ಕನ್ನಡದ ಅಳಿವಿಗೆ ಅದೆಷ್ಟೋ ಕಾರಣಗಳಿದ್ದರೂ, ಅದರ ಉಳಿವಿಗೆ, ಭಾಷೆಯ ಬಳಕೆಯೊಂದೇ ಪರಿಹಾರ ಎಂದು ನೆನಪಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನ ವರುಷಕ್ಕೆ ಒಮ್ಮೆ ಜರುಗದೆ, ನಾಡಿನ ಪ್ರತಿಯೊಬ್ಬರ ಮನೆಯಲ್ಲಿ ಪ್ರತಿದಿನವೂ ನಡೆಯಬೇಕು ಎಂದು ಹೇಳಿದರು.  

ಸಿಂಡಿಕೇಟ್ ಸದಸ್ಯ ಮತ್ತು ಬರಹಗಾರ ಪ್ರೊ.ಎಸ್‌.ಎಸ್‌. ಅಂಗಡಿ ಮಾತನಾಡಿ, ಭಾಷೆ ಒಂದು ಸಂವಹನ ಮಾಧ್ಯಮವಾಗಿರುವದರಿಂದ, ಭಾಷೆಯಲ್ಲಿ ಮಡಿವಂತಿಕೆ ಬರಬಾರದು. ಕನ್ನಡ ಭಾಷೆಯ ಸೊಗಡು ಮತ್ತು ದೇಶೀಯತೆ ಅಪರೂಪವಾದದ್ದು, ಒಂದು ಭಾಷೆ ಬೆಳೆಯಲು ಮತ್ತೊಂದು ಭಾಷೆಯ ಸಾಂಗತ್ಯ ಅವಶ್ಯವಾಗಿದೆ, ಹೀಗಾಗಿ ಭಾಷೆಯ ನಡುವೆ ಯಾವುದೇ ಭಾಷಾ ಗೋಡೆಗಳು ಇರಬಾರದು ಎಂದು ಹೇಳಿದರು.   

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮಾನ್ಯ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗಾರಾಜ ಅವರು ಮಾತನಾಡಿ, ಭಾಷೆ ಮತ್ತು ಜೀವನ ಒಂದೇ ನಾಣ್ಯದ ಎರಡು ಮುಖಗಳು. ಭಾಷಾ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸವನ್ನು ಕನ್ನಡ ಸಂಘಗಳು ಮಾಡಬೇಕು. ಗಡಿನಾಡು ಭಾಗದಲ್ಲಿ ಕನ್ನಡದ ಯಾತ್ರೆ ನಿರಂತರವಾಗಿ ನಡೆಸುವ ಪ್ರಯತ್ನಗಳಾಗಬೇಕು ಎಂದು ಹೇಳಿದರು.           

ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎನ್‌.ಪಾಟೀಲ್, ಹಣಕಾಸು ಅಧಿಕಾರಿ  . ಎಂ.ಎ. ಸಪ್ನ, ಕನ್ನಡ ಸಂಘದ ಅಧ್ಯಕ್ಷ ಡಾ.ಗಜಾನನ ನಾಯ್ಕ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .