ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿರಲಿ: ಶಿರಾಳಶೆಟ್ಟಿ

ಧಾರವಾಡ 30: ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪಠ್ಯಕ್ರಮವನ್ನು ಬೋಧಿಸಿ ವಿಷಯವನ್ನು ತಿಳಿಸಬೇಕು. ವಾಣಿಜ್ಯಶಾಸ್ತ್ರ ಉಪನ್ಯಾಸಕರು ಪ್ರಚಲಿತ ವಿಷಯವನ್ನು ತಿಳಿದಿರಬೇಕು ಹಾಗೂ ಅದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯವನ್ನು ತರಗತಿಗಳಲ್ಲಿ ಮಾಡಬೇಕು. ಶಿಕ್ಷಕರ ವರ್ತನೆಯು ವಿದ್ಯಾರ್ಥಿಗಳೊಂದಿಗೆ, ಸಿಬ್ಬಂದಿಯವರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸ್ನೇಹಮಯವಾಗಿರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಡಾ.ಎ.ಎಸ್. ಶಿರಾಳಶೆಟ್ಟಿ ಹೇಳಿದರು.

ಉನ್ನತ ಶಿಕ್ಷಣ ಅಕಾಡೆಮಿ ಹಮ್ಮಿಕೊಂಡಿದ್ದ ವಾಣಿಜ್ಯ ಸಹಾಯಕ ಪ್ರಾಧ್ಯಾಪಕರಿಗೆ ಇಂಡಕ್ಷನ್ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಚಲಿತ ವಿಷಯವನ್ನು ಬೋಧನೆ ಮಾಡಬೇಕು. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು.

ಗೌರವ ಅತಿಥಿಗಳಾಗಿ ಆಗಮಿಸಿದ ಶ್ರೀನಿವಾಸ ವಾಡಪ್ಪಿ ಮಾತನಾಡಿ ಶಿಕ್ಷಕರ ವ್ಯಕ್ತಿತ್ವವು ಸಮಾಜಕ್ಕೆ ಮಾದರಿಯಾಗುವುದಲ್ಲದೆ, ಯಾವಾಗಲೂ ಅತ್ಯುತ್ತಮ ಶಿಕ್ಷಕರಾಗಲು ಪ್ರಯತ್ನಿಸಬೇಕು ಎಂದು ಹೇಳಿದರು. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ವಿಷಯದಲ್ಲಿ ತಲ್ಲೀನನಾಗುವಂತೆ ಬೋಧನೆ ಮಾಡಬೇಕು. ಶಿಕ್ಷಕರ ಉತ್ತಮ ಗೌರವಯುತ ನಡತೆ, ಕಾರ್ಯಗಳಿಂದ ಮಾದರಿಯಾಗಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ  ಪ್ರೊ.ಎಸ್.ಎಂ.ಶಿವಪ್ರಸಾದ ಅವರು ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಮಹತ್ವದ ಜವಾಬ್ದಾರಿಯಿದೆ ಎಂದು ಅಭಿಪ್ರಾಯಪಟ್ಟರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಆಯಾ ವಿಷಯವನ್ನು ಪಠ್ಯಕ್ರಮಕ್ಕೆ ಅನುಗುಣವಾಗಿ ತಿಳಿಸಿಕೊಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಂದ ತರಬೇತಿಗಾಗಿ ಆಗಮಿಸಿದ ಸುಮಾರು 90 ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಭಾಗವಹಿಸಿದ್ದರು

ಅಕಾಡೆಮಿಯ ಡೀನರಾದ ಡಾ.ಎಚ್. ಬಿ. ನೀಲಗುಂದ, ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾಎ.ಆರ್. ಜಗತಾಪ ವಂದಿಸಿದರು. ಡಾ. ಅರುಂಧತಿ ಕುಲಕರ್ಣಿ, ಗ್ರಂಥಪಾಲಕರಾದ ಡಾ.ಮಲ್ಲಿಕಾರ್ಜುನ ಮೂಲಿಮನಿ, ಹಾಗೂ ಅಕಾಡೆಮಿಯ ಸಿಬ್ಬಂದಿ ಹಾಜರಿದ್ದರು.