ಶಿಕ್ಷಕರು ಮಾರ್ಗದರ್ಶನ ಕಾರ್ಯಕ್ಕೆ ಪರಿವರ್ತನಗೊಳ್ಳಬೇಕಿದೆ: ದೇಸಾಯ

ಧಾರವಾಡ 27: ಮಕ್ಕಳಿಗೆ ಶಿಕ್ಷಣ ನೀಡುವುದೆಂದರೆ ಅಕ್ಷರ ಕಲಿಕೆ ಅಲ್ಲ, ಅದರಾಚೆ ಏನೆಲ್ಲಾ ಮಕ್ಕಳು ಶಿಕ್ಷಕರ ಸಹಾಯವಿಲ್ಲದೇ ಕಲಿಯುತ್ತಾರೆ. ಶಿಕ್ಷಕರಾದವರು ಕಲಿಸುವ ಕ್ರಿಯೆಯ ಬದಲಾಗಿ ಮಾರ್ಗದರ್ಶನ ಮಾಡುವ ಕಾರ್ಯಕ್ಕೆ ಪರಿವರ್ತನಗೊಳ್ಳಬೇಕಿದೆ. ಮಕ್ಕಳಿಗೆ ಆದರ್ಶ ಅಂದರೆ, ಶಿಕ್ಷಕರು. ಹಾಗಾಗಿ ಎಚ್ಚರಿಕೆಯಿಂದ ಶಿಕ್ಷಕರಾದವರು ಮಕ್ಕಳಿಗೆ ಕೆಟ್ಟ ರೋಲ್ ಮಾಡಲ್ ಆಗದಂತೆ ಶಿಕ್ಷಕರು ಆದರ್ಶ ವ್ಯಕ್ತಿತ್ವ ಹೊಂದಿರಬೇಕಾಗಿರುತ್ತದೆ ಎಂದು ಮಾಜಿ ಶಾಸಕ ಎ.ಬಿ. ದೇಸಾಯ ಮಾತನಾಡಿದರು. 

ಅವರು ಧಾರವಾಡದ ಮಾಳಾಪುರದಲ್ಲಿರುವ ಗುಬ್ಬಚ್ಚಿ ಗೂಡು ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಅವರು, ಶಿಕ್ಷಣವು ಆಧ್ಯಾತ್ಮಿಕತೆಯ ತಳಹದಿಯ ಮೇಲೆ ದೊರೆಯುವಂತಾಗಬೇಕು. ಅರವಿಂದೋ ಅವರ ಶಿಕ್ಷಣ ಪರಿಕಲ್ಪನೆ ಇಂದಿನ ದಿನಕ್ಕೆ ಹೆಚ್ಚು ಅವಶ್ಯಕತೆ ಇದೆ ಎಂದ ದೇಸಾಯಿಯವರು, ಶಿಕ್ಷಣದಿಂದ ವಂಚಿತರಾಗುತ್ತಿದ್ದವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿರುವ ಗುಬ್ಬಚ್ಚಿ ಗೂಡು ಶಾಲೆಯ ಕಾರ್ಯಕ್ಕೆ ಸಮಾಜ ಮತ್ತು ಸರಕಾರಿ ವ್ಯವಸ್ಥೆ ಬೆಂಬಲಿಸುವಂತಾಗಬೇಕು. ಎಂದರು.

ಪಂಡಿತ ಪುಟ್ಟರಾಜ ಸಾಂಸ್ಕೃತಿಕ ವೇದಿಕೆಯ ಉದ್ಘಾಟನೆ ಮಾಡಿದ ಐ.ಜಿ. ಸನದಿ ಮಾತನಾಡಿ, ಮಕ್ಕಳೊಂದಿಗೆ ಇರೋದೆಂದರೆ ಸ್ವರ್ಗದಲ್ಲಿ ಇರುವಂತೆ, ಈ ಭಾಗ್ಯ ಎಲ್ಲರೀಗೂ ಸಿಗುವದಿಲ್ಲ. ಸಿಕ್ಕರೂ ಅದನ್ನು ಸ್ವರ್ಗವಾಗಿಸಿಕೊಳ್ಳುವದಿಲ್ಲ. ಶಿಕ್ಷಣ ವೃತ್ತಿ ಎಂದರೆ ಅದೊಂದು ಆನಂದದಾಯಕ ಕಾರ್ಯ. ಮಕ್ಕಳ ಒಡನಾಟದಲ್ಲಿ ನೋವುಗಳನ್ನು ಅಳಿಸಿಹಾಕುತ್ತದೆ. ಮಕ್ಕಳ ಮನಸ್ಸು ಎಂದರೆ ಅದೊಂದು ಪವಿತ್ರ ಸ್ಥಳ. ಅಲ್ಲಿ ಒಳ್ಳೆಯದನ್ನೇ ಮಾತನಾಡಬೇಕು, ಕೊಡಬೇಕು ಎಂದ ಸನದಿ, ಸಮಾಜದಲ್ಲಿ ದಾನಿಗಳು ಸಾಕಷ್ಟಿದ್ದಾರೆ. ಆದರೆ ಕೊಡುವವರು ತಾವು ಕೊಟ್ಟ ಹಣ ಸದ್ಬಳಕೆ ಆಗುತ್ತದೆಯೇ ಎಂದು ಸಂಶಯಪಡುವರು. ಹಾಗೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಶಾಲೆಯ ಆಡಳಿತ ಮಂಡಳಿ ಮೇಲಿದೆ. ಈಗಾಗಲೇ ಈ ಶಾಲೆ ನಡೆಸುವವರು ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ. ಪಾರದರ್ಶಕತೆಯಿಂದ ದಾನಿಗಳ ಮನಸ್ಸು ಗೆದ್ದಿದ್ದರಿಂದಲೇ ಇಷ್ಟೊಂದು ದತ್ತಿಗಳನ್ನು ಇಡಲು ಸಾಧ್ಯವಾಗಿದೆ ಎಂದರು. 

ನಿವೃತ್ತ ಉಪನಿರ್ದೇಶಕ ಆರ್. ಸಿ. ಹಲಗತ್ತಿ ಮಾತನಾಡಿ, ಶಿಕ್ಷಕರಾದವರು ಮೊದಲು ನಿತ್ಯ ಅಪ್ಡೇಟ್ ಆಗುತ್ತಿರಬೇಕು. ಎಂದೋ ಒದಿದ ಪಠ್ಯವನ್ನೋ, ಪದ್ದತಿಯನ್ನು ಇಂದಿನ ಮಕ್ಕಳ ಮೇಲೆ ಪ್ರಯೋಗಿಸದೇ ಇಂದು ಹೊಸತನವನ್ನು ಅಳವಡಿಸಿಕೊಂಡು ಶಿಕ್ಷಣ ನೀಡುವಂತಾಗಬೇಕು. ಶಿಕ್ಷಕರಾದವರು ನಗುಮುಖದಿಂದ ಇದ್ದರೆ, ಮಕ್ಕಳು ನಗುಮುಖದಿಂದ ಇರುವರು. ಶಿಕ್ಷಕರು ಗಂಟುಮುಖ ಹಾಕಿ ತರಗತಿಗಳಿಗೆ ಬಂದರೆ ಮಕ್ಕಳು ಗಂಟು ಮುಖ ಹಾಕಿಕೊಂಡೇ ಕುಳಿತುಕೊಳ್ಳುವರು. ಮೊದಲು ಶಿಕ್ಷಕರು ಮಗುವಿನ ಮನಸ್ಸಿಗೆ ಘಾಷಿಯಾಗದ ರೀತಿಯಲ್ಲಿ ವರ್ತನೆ ಮತ್ತು ನಡತೆ ಇರಬೇಕು ಎಂದರು.

ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಮಾತನಾಡಿ, ನಾನು ಕಂಡುಕೊಂಡ ಹಾಗೆ ಧಾರವಾಡದ ನೂರಾರು ಶಾಲೆಗಳನ್ನು ನೋಡಿದ್ದೇನೆ. ಬಹುತೇಕ ಎಲ್ಲವು ಹಣದ ಬೆನ್ನು ಹತ್ತಿದ್ದರೆ, ಗುಬ್ಬಚ್ಚಿ ಗೂಡು ಶಾಲೆ ಗುಣಮಟ್ಟದ ಶಿಕ್ಷಣ ನೀಡುವತ್ತ ಬೆನ್ನು ಹತ್ತಿರುವರು. ಇದು ನಿಜವಾದ ಸಮಾಜ ಕಟ್ಟುವ ಕಾರ್ಯ ಎಂದ ಖಾಜಿ ಉಳಿದ ಶಾಲೆಗಳಿಗೆ ಮಾದರಿಯಾಗಿ ಬೆಳೆಯಲಿ ಎಂದರು.

ತವನಪ್ಪ ಅಷ್ಟಗಿ, ಮಂಜುನಾಥ ಚೋಳಪ್ಪನವರ ಮಾತನಾಡಿದರು. ವೇದಿಕೆಯ ಮೇಲೆ ಶಶಿಧರ ತೋಡ್ಕರ, ಕಟ್ಟಡ ಕಟ್ಟಿದ ಇಂಜನೀಯರ ಸುರೇಂದ್ರ ಕಪಲಿ, ದತ್ತಿ ದಾನಿ ಲೂಸಿ ಸಾಲ್ಡಾನ, ಮಂಜುನಾಥ ಚೋಳಪ್ಪನವರ,  ಶಿವಾನಂದ ಭಾವಿಕಟ್ಟಿ, ಸಂಗಮೇಶ ಅಂಗಡಿ, ಶಂಕರ ಹಲಗತ್ತಿ ಉಪಸ್ಥಿತರಿದ್ದರು.

ಪಾಲಕರು ಮಕ್ಕಳು ಪಾಲುಗೊಂಡಿದ್ದರು, ಶಂಭಯ್ಯ ಹಿರೇಮಠ ಪರಿಸರದ ಗೀತೆಗಳನ್ನು ಹೇಳಿದರು, ವಿ.ಎನ್. ಕೀರ್ತಿವತಿ ಪಾಲಕರಿಗೆ ನೂರು ಸಸಿಗಳನ್ನು ವಿತರಿಸಿ ಹಚ್ಚಲು ಪ್ರೇರೇಪಿಸಿದರು. ಸಭೆಯಲ್ಲಿ ಎಂ.ಎಂ. ಚಿಕ್ಕಮಠ, ನಿಂಗು ಸೊಲಗಿ, ಬಸವರಾಜ ಗಾರ್ಗಿ , ಬಸವರಾಜ ಸಿಗ್ಗಂವ ಉಪಸ್ಥಿತರಿದ್ದರು.