ಆದಷ್ಟು ಬೇಗ ಶಿಕ್ಷಕರ ನೇಮಕವಾಗಲಿ: ರಮೇಶ್ ಬಾಬು

ಬೆಂಗಳೂರು,  ಜ. 22, ರಾಜ್ಯದ ಬಜೆಟ್ ನಲ್ಲಿ 28 ಸಾವಿರ ಕೋಟಿ ಶಿಕ್ಷಣ ಇಲಾಖೆಗೆ  ನೀಡಲಾಗಿದೆಯಾದರೂ ಇನ್ನೂ ಶಿಕ್ಷಕರ ಹುದ್ದೆ ಭರ್ತಿಯಾಗಿಲ್ಲ ಎಂದು ಮೇಲ್ಮನೆ‌ ಮಾಜಿ  ಜೆಡಿಎಸ್ ಸದಸ್ಯ ರಮೇಶ್‌ಬಾಬು ಟೀಕಿಸಿದ್ದಾರೆ.ವಿಧಾನಸೌಧದ ಜೆಡಿಎಸ್ ಶಾಸಕಾಂಗ  ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವ ಸುರೇಶ್ ಕುಮಾರ್  ಅವರಿಗೆ ಇಲಾಖೆಯ ಬಗ್ಗೆ ಜ್ಞಾನವಾಗಲಿ ಆಸಕ್ತಿಯಾಗಲೀ ಇಲ್ಲ. ಸುರೇಶ್ ಕುಮಾರ್ ವಿಫಲ  ಸಚಿವ. ತಮ್ಮ ಇಲಾಖೆಯನ್ನು ಸಚಿವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ವರ್ಗಾವಣೆ ನೀತಿ  ಬಗ್ಗೆ, 7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಎಂದು ವಿದ್ಯಾರ್ಥ ಶಿಕ್ಷಕರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಸಚಿವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು‌

ರಾಜ್ಯದಲ್ಲಿ  ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ನೇಮಕಾತಿ ಆಗಿಲ್ಲ. ಕಳೆದ 3 ವರ್ಷಗಳಲ್ಲಿ 18  ಸಾವಿರ ಹುದ್ದೆ ತುಂಬಿಕೊಳ್ಳಲು ಆರ್ಥಿಕ ಇಲಾಖೆಯಿಂದ ಇಲಾಖೆ ಅನುಮತಿ ಪಡೆದಿತ್ತು. ಆದರೆ  ಸರಿಯಾದ ಮಾರ್ಗಸೂಚಿ ಇಲ್ಲದ ಕಾರಣ ಹುದ್ದೆಗಳ ನೇಮಕಾತಿ ಆಗುತ್ತಿಲ್ಲ.ಅದೇ ಮಾದರಿಯಲ್ಲಿ  ಶಿಕ್ಷಣ ಇಲಾಖೆ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ. ನಿಯಮಗಳ ರಚನೆಯನ್ನು ಬದಲಾವಣೆ  ಮಾಡಬೇಕು. ನಿಯಮ ಬದಲಾವಣೆ ಮಾಡಿ ಹುದ್ದೆ ತುಂಬಬೇಕು ಎಂದು ರಮೇಶ್ ಬಾಬು ಆಗ್ರಹಿಸಿದರು‌.

ಪದವಿಪೂರ್ವ  ಕಾಲೇಜುಗಳಲ್ಲಿ 20,15 ರಿಂದ ಖಾಲಿ ಹುದ್ದೆ ನೇಮಕಾತಿ‌  ಮಾಡಿಲ್ಲ. ಖಾಲಿ ಇರುವ 9 ಸಾವಿರ  ಉಪನ್ಯಾಸಕರ ಹುದ್ದೆಗೆ ನೇಮಕ ಮಾಡಬೇಕು. ಪಿಯುಸಿ ಪರೀಕ್ಷೆಗೆ ಜಿಲ್ಲಾಧಿಕಾರಿಗಳ  ಕಚೇರಿಯಲ್ಲಿ ಸ್ಟ್ರಾಂಗ್ ರೂಂ ಮಾಡಲು ಇಲಾಖೆ ಹೊರಟಿರುವ ಹೊಸ ವಿಧಾನ ಆಶ್ಚರ್ಯ  ಮೂಡಿಸಿದೆ. ಪರೀಕ್ಷಾ ಸಮಯದಲ್ಲಿ ಇಂತಹ ಗೊಂದಲ ಸೃಷ್ಟಿ ಮಾಡಬೇಡಿ. ಹಿಂದಿನ ವರ್ಷದಂತೆ  ಪರೀಕ್ಷಾ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.