ತಾಲೂಕ ಆಡಳಿತದಿಂದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

ತಾಲೂಕ ಆಡಳಿತದಿಂದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ Taluk administration celebrates Nijasharan Shri Ambigara Chowdary's birth anniversary


ಹುಬ್ಬಳ್ಳಿ  21:  ಸಣ್ಣ ಸಮಾಜ ಎಂದು ಕೊರಗುವುದಕ್ಕಿಂತ ಎಲ್ಲರೂ ಸೇರಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದಾಗ  ಮಾತ್ರ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಜೆ.ಬಿ.ಮಜ್ಜಗಿ ಹೇಳಿದರು. ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ್ ಕಾರ್ಯಾಲಯದ  ಸಭಾಭವನದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. 

ಸಮುದಾಯದ ಮುಖಂಡರು, ಯುವಕರು ಕೇವಲ ಮದುವೆ ಸಮಾರಂಭಗಳಿಗೆ ಮಾತ್ರ ಸೇರದೆ ತಿಂಗಳಿಗೊಮ್ಮೆ ಚರ್ಚೆ ಮಾಡಿ ಸಂಘಟನೆ ಮಾಡಬೇಕು. ಸಮಾಜದ ಏಳಿಗೆಗೆ ಅನುಕೂಲವಾಗುತ್ತದೆ. ಸಮಾಜಕ್ಕೆ ಸಭಾಭವನದ ಅವಶ್ಯಕತೆ ಇದೆ ಎಂಬುದು ಗಮನಕ್ಕೆ ಬಂದಿದೆ. ಮುಂದಿನ ವರ್ಷ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿಗೆ ಸಭಾಭವನ ನಿರ್ಮಾಣ ಮಾಡುವಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. 

ಹುಬ್ಬಳ್ಳಿ ಶಹರ ತಹಶೀಲ್ದಾರ ಮಹೇಶ್ ಭಗವಂತ್ ಗಸ್ತೆ ಮಾತನಾಡಿ, ಸಣ್ಣ ಸಮಾಜವಾದರೂ ಸಹ ಇಂದು ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದಾರೆ. ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ವರ್ಷವೀಡೀ ಸಾಕಷ್ಟು ಜಯಂತಿಗಳನ್ನು ಆಚರಣೆ ಮಾಡುತ್ತೇವೆ. ಆದರೆ ಎಂದೂ ಸಹ ಸಭಾಂಗಣದಲ್ಲಿ ಕಿಕ್ಕಿರಿದು ಜನರು ಸೇರಿದ ಉದಾಹರಣೆಗಳಿಲ್ಲ. ಈ ಸಮಾಜ ಶೈಕ್ಷಣಿಕವಾಗಿ ವಂಚಿತವಾಗಬಾರದು. ಸಮಾಜದ ಎಲ್ಲಾ ವರ್ಗದ ಜನರು ಪದವಿ, ಪಿ.ಎಚ್‌.ಡಿ ತೆಗೆದುಕೊಳ್ಳಬೇಕು. ಆಗ ಸಮಾಜ ಆರ್ಥಿಕವಾಗಿ ಸದೃಢವಾಗುತ್ತದೆ. ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರ ನೀಡುತ್ತೇವೆ. ಮುಂದಿನ ದಿನಗಳಲ್ಲಿ ದೊಡ್ಡ ಅಧಿಕಾರಿಗಳಾಗಬೇಕೆಂದು ಆಶಿಸುತ್ತೇನೆ ಎಂದರು. 

 ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ಅಂಗವಾಗಿ ಅತಿಥಿಯಾಗಿ ಆಗಮಿಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ   ಮಂಜುನಾಥ್ ಬೈರಣ್ಣವರ್  ಅವರು, ನಮ್ಮ ಸಮಾಜ ಅಭಿವೃದ್ಧಿಯಾಗಬೇಕು. ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಮಕ್ಕಳನ್ನು ಕೆ.ಎ.ಎಸ್, ಐ.ಎ.ಎಸ್ ಪರೀಕ್ಷೆಗೆ ಓದಿಸಬೇಕು. ನಮಗೆ ಊಟ ಇಲ್ಲದಿದ್ದರೂ ಸರಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ಚುನಾವಣೆಯಲ್ಲಿ ಯಾರೇ ನಿಂತರೂ  ಅವರನ್ನು ಗೆಲ್ಲಿಸುವ ಮನಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು. ತಾಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ಅಂಬಿಗರ ಚೌಡಯ್ಯ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.